ADVERTISEMENT

ಮಳೆ ಅಭಾವ: ಉತ್ಕೃಷ್ಟ ಬಿಳಿ ಜೋಳಕ್ಕೂ ಕುತ್ತು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 5:10 IST
Last Updated 1 ಅಕ್ಟೋಬರ್ 2012, 5:10 IST

ಗಜೇಂದ್ರಗಡ: ನಾಡಿನೆಲ್ಲೆಡೆ ಖ್ಯಾತಿ ಪಡೆದಿರುವ, ಈ ಭಾಗದ ಬಿಳಿ ಜೋಳಕ್ಕೂ ಕುತ್ತು ಬಂದಿದೆ. ಮುತ್ತಿನಂತಹ ಶುದ್ದ ಜೋಳದ ರೊಟ್ಟಿ ತಿನ್ನುತ್ತಿದ್ದ ಬಡವರು-ಬಡ ರೈತರು, ಪಡಿತರ ಅಕ್ಕಿಯ ಹಿಟ್ಟು ಮಿಶ್ರಿತ ಜೋಳದ ರೊಟ್ಟಿ ತಿನ್ನುವ ಪರಿಸ್ಥಿತಿ ಬಂದೊದಗಿದೆ.

ಫಲವತ್ತಾದ ಜಮೀನು ಹೊಂದಿದ್ದರೂ ಇಲ್ಲಿ ಆಹಾರ ಧಾನ್ಯದ ಉತ್ಪಾದನೆ ಹೆಚ್ಚುತ್ತಿಲ್ಲ. ಪರಿಣಾಮ ಕಳೆದ ಹತ್ತು ವರ್ಷಗಳಿಂದಿಚೆಗೆ ವಾಡಿಕೆಗಿಂತಲ್ಲೂ ಕನಿಷ್ಠ ಪ್ರಮಾಣದ ಮಳೆ ಬಿದ್ದಿದೆ. ಇದರಿಂದ ಆಹಾರ ಧಾನ್ಯ ಉತ್ಪಾದನೆಗೆ ಹಿನ್ನೆಡೆಯಾಗಿದೆ.
 

ವರುಣ ದೇವನ ಚಲ್ಲಾಟದಿಂದ ಪಾರಾಗಲು ಕೊಳವೆ ಬಾವಿಗಳನ್ನು ಕೊರೆಯಿಸಿ ಕೃಷಿಗೆ ಮುಂದಾದ ಶೇ.42 ರಷ್ಟು ನೇಗಿಲಯೋಗಿಗಳು ಆಹಾರ ಧಾನ್ಯ ಬೆಳೆಗಳ ಬದಲಾಗಿ ವಾಣಿಜ್ಯ ಬೆಳೆಗಳಾದ ಮೆಕ್ಕೆಜೋಳ, ಹತ್ತಿ, ಕಬ್ಬು, ಶೇಂಗಾ, ಸೂರ್ಯಕಾಂತಿ ಬೆಳೆಗಳಿಗೆ ದುಂಬಾಲು ಬಿದ್ದ ಪರಿಣಾಮವೇ ಆಹಾರ ಧಾನ್ಯ ಉತ್ಪಾದನೆಗೆ ಹಿನ್ನೆಡೆಯಾಗಿದೆ. ಜೊತೆಗೆ ಕೃಷಿ ಕಾರ್ಮಿಕರು ಹಾಗೂ ಅನ್ನದಾತರು ಉದ್ಯೋಗ ಅರಸಿ ಗುಳೆ ಹೋಗುವ ಪ್ರಮಾಣ ಹೆಚ್ಚುತ್ತಿದೆ.

ಈ ಭಾಗದ ಭೌಗೋಳಿಕ ವಿಸ್ತೀರ್ಣ 1,29,051 ಹೆಕ್ಟೇರ್. ಇದರಲ್ಲಿ 1,20,588 ಸಾಗುವಳಿ ಕ್ಷೇತ್ರವಿದೆ. 35,625 ಹೆಕ್ಟೇರ್ ನೀರಾವರಿ ಪ್ರದೇಶವಿದೆ. 8,500 ಹೆಕ್ಟೇರ್ ಕೃಷಿಗೆ ಯೋಗ್ಯವಲ್ಲದ ಭೂಮಿ ಇದೆ. 85,000 ಹೆಕ್ಟೇರ್ ಎರಿ (ಕಪ್ಪು ಮಣ್ಣಿನ ಪ್ರದೇಶ), 35,309 ಹೆಕ್ಟೇರ್ ಮಸಾರಿ (ಕೆಂಪು ಮಿಶ್ರಿತ ಜವಗು ಪ್ರದೇಶ) ವಿದೆ.

ಇದರಲ್ಲಿ ಪ್ರತಿ ವರ್ಷ  90,000 ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮಳೆ ಆಶ್ರಿತ ಬಿಳಿಜೋಳ ಬಿತ್ತನೆಯಾಗುತ್ತಿತ್ತು. ಆದರೆ, ಕಳೆದ ಕೆಲ ವರ್ಷಗಳಿಂದ ಬಿತ್ತನೆಗೆ ಅಗತ್ಯ ಪ್ರಮಾಣದಲ್ಲಿ ಮಳೆ ಸುರಿಯದಿರುವುದರಿಂದ ಆಹಾರ ಧಾನ್ಯಗಳ ಉತ್ಪಾದನೆಗೆ ಬಾರಿ ಹಿನ್ನೆಡೆ ಉಂಟಾಗಿದೆ.

ಇನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಭೀಕರ ಬರ ಶಾಶ್ವತ ಎನ್ನುವಂತಾಗಿದೆ. ಬರ-ಉತ್ಪಾದನೆ ಕುಂಠಿತದ ಪರಿಣಾಮವಾಗಿ ಕಳೆದ ವರ್ಷ 10 ಜನ ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ!. ಅಂದಾಜು 5,25,363 ಜನ ಸಂಖ್ಯೆ ಹೊಂದಿರುವ  ಈ ಭಾಗದಲ್ಲಿ ಕೃಷಿಯನ್ನೇ ಅಲವಂಬಿಸಿದವರೇ (ಶೇ 70.14) ಹೆಚ್ಚು. 

1.75 ಲಕ್ಷ ಸಾಗುವಳಿದಾರರು ಇದ್ದರೆ, ಕೃಷಿ ಕಾರ್ಮಿಕರು 1.50 ಲಕ್ಷಕ್ಕೂ ಅಧಿಕ. ಭೂರಹಿತ ಕೃಷಿ ಕಾರ್ಮಿಕರ ಪ್ರಮಾಣ ಶೇ.39.92 ರಷ್ಟಿದೆ. ಕೃಷಿ ಪ್ರಧಾನವಾಗಿದ್ದರೂ ಈ ಭಾಗದ ಅಭಿವೃದ್ದಿಯಲ್ಲಿ ಅತ್ಯಂತ ದುರ್ಬಲ ವಲಯ ಕೃಷಿ ಎಂಬುದನ್ನು `ಮಾನವ ಅಭಿವೃದ್ದಿ ವರದಿ~ಯಲ್ಲಿ ಉಲ್ಲೇಖಿಸಲಾಗಿದೆ.

`ಮಳೆಯ ಅನಿಶ್ಚಿತತೆ ಈ ಭಾಗದ ಕೃಷಿಯನ್ನೇ ಬುಡಮೇಲು ಮಾಡಿದೆ. ಮಳೆ ವಿಳಂಬವಾಗಿದ್ದರಿಂದ ರೈತರು ಬೆಳೆ ಪದ್ದತಿ ಬದಲಾಯಿಸುತ್ತಿದ್ದಾರೆ. ಕಳೆದ ವರ್ಷ ಬಹುತೇಕ ರೈತರು ಈರುಳ್ಳಿ, ಸೂರ್ಯಕಾಂತಿ, ಮೆಕ್ಕೆಜೋಳ ಬೆಳೆದಿದ್ದ ರಿಂದ ಜೋಳದ ಕೊರತೆ ಉಂಟಾ ಯಿತು. ಜೋಳ-ಕಣಕಿಗಾಗಿ ರೈತರೂ ಪರದಾಡಿದರು.
 
ಈ ವರ್ಷವೂ ಇದೇ ಕಥೆ-ವ್ಯಥೆ. ಮುಂಗಾರು ಪೂರ್ಣ ವಿಫಲವಾಯಿತು. ಹಿಂಗಾರು ಆಗಸ್ಟ್ ಮೊದಲ ವಾರ ಆರಂಭವಾಗ ಬೇಕಿದ್ದು ದು ಈ ವರೆಗೂ ಬಿತ್ತನೆಗೆ ಆಗತ್ಯ ವಾದಷ್ಟು ಮಳೆ ಆಗಿಲ್ಲ. ಹಾಗಾಗಿ ಹಿಂಗಾರು ಹಂಗಾಮಿನ ಮುಖ್ಯ ಬೆಳೆ ಜೋಳ, ಗೋಧಿ ಉತ್ಪಾ ದನೆಯೂ ಕುಂಠಿತಗೊಳ್ಳುತ್ತದೆ~ ಎನ್ನು ವುದು ಕೃಷಿ ಇಲಾಖೆ ಅಧಿಕಾರಿಗಳ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT