ADVERTISEMENT

ಮಹಾದಾಯಿ ಧರಣಿ 687ನೇ ದಿನಕ್ಕೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2017, 6:18 IST
Last Updated 3 ಜೂನ್ 2017, 6:18 IST
ನರಗುಂದದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 687ನೇ ದಿನವಾದ ಗುರುವಾರ ಮಹಾದಾಯಿ ಹೋರಾಟ ಸಮಿತಿ ಸದಸ್ಯ ಯಮನಪ್ಪ ಕುರಿ ಮಾತನಾಡಿದರು
ನರಗುಂದದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 687ನೇ ದಿನವಾದ ಗುರುವಾರ ಮಹಾದಾಯಿ ಹೋರಾಟ ಸಮಿತಿ ಸದಸ್ಯ ಯಮನಪ್ಪ ಕುರಿ ಮಾತನಾಡಿದರು   

ನರಗುಂದ: ಉತ್ತರ ಕರ್ನಾಟಕ ಭಾಗದ ರೈತರು ಮಹಾದಾಯಿ ನೀರು ಕೇಳುತ್ತಿದೆ. ಇದರಲ್ಲಿ ಯಾರ ಸ್ವಾರ್ಥವೂ ಇಲ್ಲ. ಆದರೆ, ಇದನ್ನು  ರಾಜಕೀಯ ಮುಖಂಡರು ತಪ್ಪಾಗಿ ಭಾವಿಸಿ ಪ್ರತಿಷ್ಠೆ ತಂದೊಡ್ಡಿರುವುದು ಸಲ್ಲದು. ಯೋಜನೆ ಅನುಷ್ಠಾನಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣ ಎಂದು ಮಹಾದಾಯಿ  ಹೋರಾಟ ಸಮಿತಿ ಸದಸ್ಯ ಯಮನಪ್ಪ ಕುರಿ ಹೇಳಿದರು.

ಇಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 687ನೇ ದಿನವಾದ ಗುರುವಾರ ಅವರು ಮಾತನಾಡಿದರು.

ನಾವು ಕೇಳುತ್ತಿರುವ ನೀರು ನಮ್ಮ ಮೂಲಭೂತ ಹಕ್ಕು. ಅದನ್ನು ಈಡೇರಿಸದ ಸರ್ಕಾರಗಳು ಇದ್ದೂ ಸತ್ತಂತೆ. ಇದಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದರು.
ಮಹಾದಾಯಿ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಾ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಆಹ್ವಾನಿಸುತ್ತಿರುವುದು ಕೇವಲ ತೋರಿಕೆಯಾಗಬಾರದು, ಕಾರ್ಯ ಯಶಸ್ವಿಯಾಗಬೇಕು. ಇದಕ್ಕೆ ಅಂತಿಮ ಪರಿಹಾರ ರೂಪಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಮಹಾದಾಯಿ ಹೋರಾಟ ಸಮಿತಿ ಹಿರಿಯ ಸದಸ್ಯ ವೆಂಕಪ್ಪ ಹುಜರತ್ತಿ ಮಾತನಾಡಿ, ಜನಪ್ರತಿನಿಧಿಗಳು ರೈತರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದರು.

ಬರುವ ಚುನಾವಣೆಗಳು ಇವರಿಗೆ ಕಠಿಣದ ಹಾದಿ ಎಂಬುದನ್ನು ಅರಿತು ರೈತರ ಹತ್ತಿರ ಬರಬೇಕು ಎಂದರು. ಪ್ರಧಾನಿ ಮೋದಿ ಅವರು ಮಹಾದಾಯಿ ವಿಷಯದಲ್ಲಿ ಹೆಚ್ಚಿನ ಒಲವು ತೋರಬೇಕು. ಎರಡೇ ಸಂಸದರನ್ನು ಹೊಂದಿರುವ ಗೋವಾದ ಮೊಂಡುತನವನ್ನು ಶಮನ ಮಾಡಲು ನಮ್ಮ 28 ಸಂಸದರು ಮುಂದಾಗಬೇಕು. ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಶ್ರೀಶೈಲ ಮೇಟಿ ಮಾತನಾಡಿ, ರೈತರ ಹೋರಾಟವನ್ನು ತೀವ್ರವಾಗಿ ಕಡೆಗಣಿಸುವ ರಾಜಕೀಯ ವ್ಯಕ್ತಿಗಳಿಗೆ ಅವನತಿ ಸಮೀಪಿಸುತ್ತಿದೆ. ಇದಕ್ಕೆ ಅಂತ್ಯ ಹಾಡಿ ರೈತ ಪರ ಸರ್ಕಾರದ ಆಯ್ಕೆಗೆ ಮುಂದಾಗಬೇಕು ಎಂದರು.

ಚಂದ್ರಗೌಡ ಪಾಟೀಲ, ಎಸ್‌.ಕೆ. ಗಿರಿಯಣ್ಣವರ, ಎಸ್‌.ಬಿ.ಜೋಗಣ್ಣವರ,  ಎ.ಪಿ.ಪಾಟೀಲ, ಜಗನ್ನಾಥ ಮುಧೋಳೆ, ಯಲ್ಲಪ್ಪ ಚಲುವಣ್ಣವರ, ರಾಯವ್ವ ಕಟಗಿ,  ಯಲ್ಲಪ್ಪ ಹುಜರತ್ತಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.