ADVERTISEMENT

ಮಾನಸಿಕ ಬೆಳವಣಿಗೆಗೆ ಶಿಕ್ಷಣ ಅಗತ್ಯ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 9:35 IST
Last Updated 9 ಸೆಪ್ಟೆಂಬರ್ 2011, 9:35 IST

ಗದಗ: ಮಗುವಿನ ಮಾನಸಿಕ, ಬೌದ್ಧಿಕ ಹಾಗೂ ಶಾರೀರಿಕ ಬೆಳವಣೆಗೆಗೆ ಶಿಕ್ಷಣ ಅಗತ್ಯ ಎಂದು ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶ ಆರ್.ಜೆ. ಸತೀಶಸಿಂಗ್ ಅಭಿಪ್ರಾಯಪಟ್ಟರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಬೆಟಗೇರಿಯ ಬನಶಂಕರಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಾಲಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಗುವಿಗೆ ಮೊದಲು ಶಿಕ್ಷಣ ದೊರೆಯುವುದು ಅಂಗನವಾಡಿಗಳಲ್ಲಿ, ಆದ್ದರಿಂದ ಮಗುವಿನ ಸರ್ವತೋಮುಖ ಬೆಳವಣೆಗೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಸಂಸ್ಕಾರ ಹಾಗೂ ನೈತಿಕತೆಯನ್ನು ಬೆಳೆಸಬೇಕು ಎಂದು ಹೇಳಿದರು.

ನ್ಯಾಯಾಧೀಶ ಉಮೇಶ ಮೂಲಿಮನಿ ಮಾತನಾಡಿ, ಈ ಹಿಂದೆ ಲೋಕ ಅದಾಲತ್ ಜಾರಿಯಲ್ಲಿತ್ತು. ಅದಕ್ಕಿಂತ ಮಧ್ಯಸ್ಥಿಕಾ ಕೇಂದ್ರ ಭಿನ್ನವಾಗಿದೆ. ಮೂರನೇಯ ತಟಸ್ಥ ವ್ಯಕ್ತಿಯು ಯಾವುದೇ ವ್ಯಾಜ್ಯದಲ್ಲಿನ ವಿವಾದವು ನ್ಯಾಯಾಲಯದಲ್ಲಿ ವಿಚಾರಣೆಗೆ ಹೋಗದೆ ಅದರಲ್ಲಿನ ಪಕ್ಷಗಾರರು ತಮ್ಮ ನಡುವಿನ ವಿವಾದಗಳನ್ನು ಮಾತುಕತೆಯ ಮೂಲಕ ಸುಲಭವಾಗಿ  ಇತ್ಯರ್ಥಪಡಿಸಿಕೊಳ್ಳಲು ಸಹಾಯ ಮಾಡಲು ಒಂದು ಪ್ರತಿಕ್ರಿಯೆ ಮಧ್ಯಸಿಕೆಗೆ ಕೇಂದ್ರವಾಗಿದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿದೇರ್ಶಕ ಎಚ್.ಜೆ. ಚಂದ್ರಶೇಖರಯ್ಯಾ ಮಾತನಾಡಿ, ಉಚಿತ ಕಾನೂನು ಸೇವೆಗಳ ಪ್ರಾಧಿಕಾರದಿಂದ ತ್ವರಿತವಾಗಿ ನ್ಯಾಯ ಪಡೆದುಕೊಳ್ಳಬಹುದಾಗಿದೆ. ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ಆರ್. ಗುಡೂರ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರು ವಿಶೇಷ ಮಾಹಿತಿಯನ್ನು ಒಳಗೊಂಡ ಕರಪತ್ರ ಬಿಡುಗಡೆಗೊಳಿಸಲಾಯಿತು. ಎಂ.ಎ. ಫಣಿಬಂದ ಹಾಗೂ ರುಕ್ಮಣಿ ಬಾಕಳೆ ಉಪನ್ಯಾಸ ನೀಡಿದರು. ನಗರಸಭೆ ಸದಸ್ಯ ದಶರಥ ಕೊಳ್ಳಿ ಮತ್ತಿತರರು ಹಾಜರಿದ್ದರು. ಎ.ಎಸ್. ಮಕಾನದಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.