ಅಡವಿಸೋಮಾಪುರ (ಗದಗ ತಾ.): ಗ್ರಾಮಸಭೆಯಲ್ಲಿ ಸಮರ್ಪಕ ಮಾಹಿತಿ ನೀಡದ ಹೆಸ್ಕಾಂ ಮತ್ತು ಪಶು ವೈದ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಗೋಣಿ ಬಸವೇಶ್ವರ ದೇವಸ್ಥಾನದಲ್ಲಿ ಜರುಗಿದ ಗ್ರಾಮ ಸಭೆಯಲ್ಲಿ ಶಿಥಿಲಗೊಂಡಿರುವ ವಿದ್ಯುತ್ ಕಂಬ ಬದಲಾವಣೆ ಮಾಡದಿರುವುದು ಹಾಗೂ ಜೋತು ಬಿದ್ದಿರುವ ತಂತಿ ದುರಸ್ತಿ ಕೈಗೊಳ್ಳದಿರುವುದಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯ್ತಿ ಸದಸ್ಯ ಪ್ರಲ್ಹಾದ ಹೊಸಳ್ಳಿ ಅವರು ಲಕ್ಕುಂಡಿ ಹೆಸ್ಕಾಂ ಶಾಖಾಧಿಕಾರಿ ಎಂ.ಎಸ್.ದೊಡ್ಡಮನಿ ಅವರನ್ನು ಪ್ರಶ್ನಿಸಿದರು. ಈಗಾಗಲೇ ಹಿಂದಿನ ಗ್ರಾಮಸಭೆಯಲ್ಲಿ ಸೂಚನೆ ನೀಡಿದ್ದರೂ ಕ್ರಮ ಕೈಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಎಷ್ಟು ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ, ಔಷಧ ಲಭ್ಯತೆ ಹಾಗೂ ಯಾವ ಗ್ರಾಮಕ್ಕೆ ಭೇಟಿ ನೀಡಲಾಗಿದೆ ಎಂಬ ಇಒ ಎಸ್.ಎಂ.ಪಿಡಶೆಟ್ಟಿ ಪ್ರಶ್ನೆಗೆ ಪಾಪನಾಶಿ ವೈದ್ಯಾಧಿಕಾರಿ ಭರತ್ ಭೂಷಣ ಅವರು ದಾಖಲೆಗಳು ಕಚೇರಿಯಲ್ಲಿವೆ ಎಂದು ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಒ, ಮುಂದಿನ ಸಭೆಯಲ್ಲಿ ಪೂರ್ಣ ಮಾಹಿತಿಯೊಂದಿಗೆ ಹಾಜರಾಗುವಂತೆ ನಿರ್ದೇಶನ ನೀಡಿದರು.
ಗ್ರಾಮಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೊಟೀಸ್ ಜಾರಿಗೊಳಿಸಿ 15 ದಿನದೊಳಗೆ ಉತ್ತರಿಸುವಂತೆ ಮತ್ತು ಸಭೆಯಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ಕ್ರಮ ತೆಗೆದುಕೊಂಡಿರುವುದನ್ನು ತಿಳಿಸದಿದ್ದರೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇಒ ಎಚ್ಚರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ. ವಿ. ತಿಮ್ಮೋಪುರ, ಸಹಾಯಕ ಕೃಷಿ ಅಧಿಕಾರಿ ಎಂ. ಎಸ್. ಹಿರೇಮಠ, ತೋಟಗಾರಿಕೆ ಸಹಾಯಕ ಅಧಿಕಾರಿ ಬಿ. ಟಿ. ಕಿತ್ತೂರ, ಆರೋಗ್ಯ ಸಹಾಯಕ ಸಿ. ಆರ್. ಹೆಬ್ಬಳ್ಳಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ತುಕಾರಾಮ ಹುಲಗಣ್ಣವರ ಸ್ವಾಗತಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.