ADVERTISEMENT

ಮುಕ್ತಿಮಂದಿರದಲ್ಲಿ ಮರಳು ಕಳವು

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 9:19 IST
Last Updated 18 ಜೂನ್ 2018, 9:19 IST

ಲಕ್ಷ್ಮೇಶ್ವರ: ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆ ಕಾಮಗಾರಿಗೆ ಸಂಗ್ರಹಿಸಲಾಗಿದ್ದ ನೂರಾರು ಟ್ರ್ಯಾಕ್ಟರ್ ಮರಳನ್ನು ಕದ್ದು ಸಾಗಿಸಲಾಗಿದೆ.

ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಬೃಹತ್ ಪ್ರಮಾಣದಲ್ಲಿ ಸಿದ್ಧವಾಗುತ್ತಿರುವ ತ್ರಿಕೋಟಿ ಲಿಂಗ ಸ್ಥಾಪನೆಗಾಗಿ ಭರದಿಂದ ಕೆಲಸ ಸಾಗಿದ್ದು ಇನ್ನು ಕೆಲ ದಿನಗಳಲ್ಲಿ ಈ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮರಳನ್ನು ಸಂಗ್ರಹಿಸಲಾಗಿದೆ. ಇದನ್ನು ಅರಿತ ಕೆಲವು ದುಷ್ಕರ್ಮಿಗಳು ಕಳೆದ 10-15 ದಿನಗಳಿಂದ ನಿತ್ಯ ಮಧ್ಯರಾತ್ರಿ ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ.

ಮಠಕ್ಕೆ ಸಂಬಂಧಿಸಿದವರು ಮರಳು ಸಂಗ್ರಹ ಮಾಡಿದ್ದ ಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಮರಳು ಸಾಗಿಸಿದ್ದು ಕಂಡು ಬಂದಿತು. ಶನಿವಾರ ನಸುಕಿನ ಜಾವ ಟ್ರ್ಯಾಕ್ಟರ್‌ಗಳು ಮರಳು ತುಂಬುತ್ತಿರುವುದನ್ನು ಗಮನಿಸಿದ ಕೆಲವರು ಮರಳುಗಳ್ಳರನ್ನು ಹಿಡಿಯಲು ಹೋದಾಗ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಮಠದ ಸಿಬ್ಬಂದಿ ಮತ್ತು ಭಕ್ತರು ಅಟ್ಟಿಸಿಕೊಂಡು ಹೋಗಿ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

ಎರಡು ಬೈಕ್‍ಗಳು ಸಹ ಸ್ಥಳದಲ್ಲಿ ಪತ್ತೆಯಾಗಿವೆ. ಮರಳು ತುಂಬಿದ ಟ್ರ್ಯಾಕ್ಟರ್‌ ಅನ್ನು ಚಾಲಕನ ಸಮೇತ ಹಿಡಿದಿದ್ದಾರೆ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.

‘ಕ್ಷೇತ್ರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆ ನಡೆದಿದೆ. ಹಿರಿಯ ಜಗದ್ಗುರುಗಳ ಕನಸು ಈಡೇರಿಸುವ ನಿಟ್ಟಿನಲ್ಲಿ ಲಿಂಗ ಸ್ಥಾಪನೆಯ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುವ ಉದ್ಧೇಶದಿಂದ ಕಾಮಗಾರಿಗೆ ಅಗತ್ಯವಾದ ಎಲ್ಲ ಕಚ್ಚಾ ಸಾಮಗ್ರಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಲಾಗಿದೆ. ದಿವಂಗತ ಹರಿಸಾ ಖೋಡೆ ಸೇರಿ ಹಲವರು ಸಹಾಯ ಮಾಡಿದ್ದಾರೆ. ಆದರೆ ಮರಳನ್ನು ಕದ್ದು ಸಾಗಿಸಿರುವ ಘಟನೆ ನಿಜಕ್ಕೂ ಬೇಸರದ ಸಂಗತಿ’ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಖೇದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.