ADVERTISEMENT

ಮೂಲ ಸೌಲಭ್ಯ ವಂಚಿತ ನೂತನ ಬಡಾವಣೆಗಳು

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 4:58 IST
Last Updated 24 ಜೂನ್ 2013, 4:58 IST

ಲಕ್ಷ್ಮೇಶ್ವರ: ಪಟ್ಟಣ ಬೆಳೆದಂತೆ ಅದರ ಜೊತೆ ಸುತ್ತಮುತ್ತ ಹತ್ತಾರು ನೂತನ ಬಡಾವಣೆಗಳು ನಿರ್ಮಾಣವಾಗಿದ್ದು, ಮೂಲ ಸೌಕರ್ಯಗಳ ಕೊರತೆಯಿಂದ ಈಗ ಅವು ನರಳುತ್ತಿವೆ. ನೂತನ ಬಡಾವಣೆಗಳಲ್ಲಿ ಸುಸಜ್ಜಿತ ರಸ್ತೆ ಇಲ್ಲ, ಚರಂಡಿ ಇಲ್ಲ, ಬೀದಿ ದೀಪಗಳ ವ್ಯವಸ್ಥೆ ಇಲ್ಲ, ಅಷ್ಟೇ ಏಕೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಆದರೂ ಸಹ ಈ ಎಲ್ಲ `ಇಲ್ಲ'ಗಳ ನಡುವೆಯೂ ಜನರು ಇಲ್ಲಿ ವಾಸಿಸುತ್ತಿದ್ದಾರೆ.

ಮೂಲ ಸೌಕರ್ಯ ವಂಚಿತ ಬಡಾವಣೆಯಲ್ಲಿ 16ನೇ ವಾರ್ಡ್‌ನ ವ್ಯಾಪ್ತಿಗೊಳಪಡುವ ಈಶ್ವರ ನಗರ ಮತ್ತು ಲಕ್ಷ್ಮೀ ನಗರಗಳು ಪ್ರಮುಖವಾಗಿದ್ದು ಈ ಎರಡೂ ಬಡಾವಣೆಗಳು ಉಳಿದ ಎಲ್ಲ ಬಡಾವಣೆಗಳಿಗಿಂತ ಬಹಳ ದೊಡ್ಡವು. ಇಲ್ಲಿ ನೂರಾರು ಕುಟುಂಬಗಳು ಹತ್ತಾರು ವರ್ಷಗಳಿಂದ ಹೊಸ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಆದರೆ ಮೂಲ ಸೌಕರ್ಯ ಎನ್ನುವುದು ಮಾತ್ರ ಇಲ್ಲಿ ಮರೀಚಿಕೆ.

ಬಡಾವಣೆ ನಿರ್ಮಾಣವಾಗಿ ಇಪ್ಪತ್ತು ವರ್ಷ ಕಳೆದರೂ ಇಲ್ಲಿ ಯಾವುದೇ ಸೌಲಭ್ಯ ಇಲ್ಲದಿರುವುದು ನಿಜಕ್ಕೂ ಅಚ್ಚರಿಯೇ ಸರಿ. 
ಈಶ್ವರ ನಗರ ತಗ್ಗು ಪ್ರದೇಶದಲ್ಲಿ ಇದ್ದು ಇಲ್ಲಿ ಸುಸಜ್ಜಿತ ಚರಂಡಿ ಇಲ್ಲ. ಹೀಗಾಗಿ ನಿವಾಸಿಗಳು ಉಪಯೋಗಿಸಿದ ಕೊಳಚೆ ನೀರು ನೇರವಾಗಿ ಜನರು ಓಡಾಡುವ ರಸ್ತೆ ಮೇಲೆಯೇ ಹರಿಯುತ್ತದೆ. ಹೀಗಾಗಿ ಜನತೆ ಕೊಳಚೆ ನೀರನ್ನು ತುಳಿದಾಡಿಕೊಂಡೇ ಓಡಾಡಬೇಕಾದ ಅನಿವಾರ್ಯತೆ ಇದೆ.

ಇದರ ಜೊತೆಗೆ ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗುತ್ತದೆ. ಆದರೂ ಕೂಡ ಸಂಬಂಧಿಸಿದ ಪುರಸಭೆ ಮಾತ್ರ ಇತ್ತ ಗಮನ ಹರಿಸಿಲ್ಲ. `ಗಟಾರ ರಸ್ತೆ ಮಾಡ್ರೀ ಅಂತಾ ಭಾಳ ಸಲಾ ಮುನ್ಸಿಪಾಲ್ಟಿಗೆ ಕೇಳಕೊಂಡೇವಿ ಆದ್ರೂ ಅವ್ರ ಯಾವದ ಕೆಲ್ಸಾ ಮಾಡಿಲ್ಲ' ಎಂದು ನಿವಾಸಿ ಗಿರೀಶ ಸಜ್ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ. ಕುಡಿಯುವ ನೀರಿನ ಪೈಪ್‌ಲೈನ್‌ಗಳನ್ನು ಚರಂಡಿಯಲ್ಲಿಯೇ ಹಾಕಲಾಗಿದ್ದು ಆಕಸ್ಮಾತ್ ಪೈಪ್‌ಲೈನ್ ಒಡೆದರೆ ಇಲ್ಲಿನ ನಿವಾಸಿಗಳಿಗೆ ರಾಡಿ ನೀರೇ ಗತಿ.

ಇನ್ನು ಲಕ್ಷ್ಮೀನಗರ, ಈಶ್ವರ ನಗರದ ಮೇಲ್ಭಾಗದಲ್ಲಿದ್ದು ಇಲ್ಲಿಯೂ ನೂರಾರು ಕುಟುಂಬಗಳು ವಾಸವಾಗಿವೆ. ಲಕ್ಷ್ಮೀನಗರದಲ್ಲಿಯೂ ಸಹ ಸುಸಜ್ಜಿತ ಚರಂಡಿ, ರಸ್ತೆಗಳನ್ನು ನಿರ್ಮಾಣ ಮಾಡಿಲ್ಲ. ಮಳೆಗಾಲದಲ್ಲಿ ಇಲ್ಲಿನ ದೊಡ್ಡ ಗುಂಡಿಯಲ್ಲಿ ಐದಾರು ಅಡಿ ಎತ್ತರಕ್ಕೆ ನೀರು ನಿಲ್ಲುತ್ತಿದ್ದು ಇದು ಮಕ್ಕಳಿಗೆ ಅಪಾಯಕಾರಿ ಪ್ರದೇಶವಾಗಿದೆ. ಇದರ ಜೊತೆಗೆ ಕೆಲವರು ಪ್ಲಾಟ್ ಖರೀದಿಸಿ ಮನೆ ಕಟ್ಟಿಸದೆ ಹಾಗೆಯೇ ಬಿಟ್ಟಿದ್ದು ಖಾಲಿ ಪ್ಲಾಟ್‌ಗಳಲ್ಲಿ ಗಿಡಗಂಟಿಗಳು ಬೆಳೆದು ಕಾಡಿನಂತಾಗಿವೆ.

`ಕಂಬ ಇದ್ದರೂ ಸರಿಯಾಗಿ ಲೈಟ್ ಹತ್ತಂಗಿಲ್ರೀ. ಲೈಟ್ ಹಾಕ್ಸರೀ ಅಂತಾ ಮುನ್ಸಿಪಾಲ್ಟಿ ಸದಸ್ಯರಿಗೆ ಹೇಳಿದ್ರೂ ಯಾವ ಪ್ರಯೋಜನ ಆಗಿಲ್ರೀ' ಎಂದು ಲಕ್ಷ್ಮೀನಗರದ ನಿವಾಸಿ ಶೋಭಾ ಲಮಾಣಿ ತಮ್ಮ ಸಿಟ್ಟು ಹೊರ ಹಾಕುತ್ತಾರೆ. ಕಸ ಹಾಕಲು ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ನೂತನ ಬಡಾವಣೆಗಳು ಹಂದಿಗಳ ಬಡಾವಣೆಯಾಗಿ ಮಾರ್ಪಾಡಾಗಿದ್ದು ಇಲ್ಲಿ ಎಲ್ಲಿ ನೋಡಿದರೂ ಬಿಡಾಡಿ ಹಂದಿಗಳ ಹಿಂಡು ಕಂಡು ಬರುತ್ತವೆ. ಈ ಕುರಿತು ಪುರಸಭೆ ಮುಖ್ಯಾಧಿಕಾರಿ ವಿ.ಬಿ. ಬೂದಿಹಾಳ ಅವರನ್ನು ಸಂರ್ಪಕಿಸಿದಾಗ `ಎರಡೂ ಬಡಾವಣೆಗಳು ಬಹಳ ದೊಡ್ಡದಿದ್ದು ಸದ್ಯ ಬೀದಿ ದೀಪಗಳ ವ್ಯವಸ್ಥೆಗೆ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ. ಇದರ ಜೊತೆಗೆ 2013-14ನೇ ಸಾಲಿನ ಎಸ್‌ಎಫ್‌ಸಿ ಅನುದಾನದಲ್ಲಿ ಈ ಬಾರಿ ಪಕ್ಕಾ ಚರಂಡಿ ಮತ್ತು ರಸ್ತೆ ನಿರ್ಮಿಸಲು ಯೋಜನೆ ರೂಪಿಸಲಾಗುವುದು' ಎಂದು ತಿಳಿಸುತ್ತಾರೆ.

ಒಟ್ಟಿನಲ್ಲಿ ಊರಿಗೆ ಭೂಷಣಪ್ರಾಯ ಆಗಬೇಕಿದ್ದ ನೂತನ ಬಡಾವಣೆಗಳು ಯಾವುದೇ ಸೌಲಭ್ಯ ಕಾಣದೆ ಹಾಳು ಕೊಂಪೆಯಂತಾಗಿವೆ. ಈಗಲಾದರೂ ಪುರಸಭೆ ಆಡಳಿತ ಮಂಡಳಿ ಹೊಸ ಬಡಾವಣೆಗಳಿಗೆ ಮೂಲ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಬೇಕಾದ ಅಗತ್ಯ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.