ADVERTISEMENT

ಯಡಿಯೂರಪ್ಪ ಇಲ್ಲದ ಬಿಜೆಪಿಗೆ ಭವಿಷ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 6:30 IST
Last Updated 16 ಅಕ್ಟೋಬರ್ 2012, 6:30 IST

ಗಜೇಂದ್ರಗಡ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಲ್ಲದ ಬಿಜೆಪಿ ಪಕ್ಷಕ್ಕೆ ಭವಿಷ್ಯವಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ವರಿಷ್ಠರು ಯಡಿಯೂರಪ್ಪ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗುವುದು ಸೂಕ್ತ ಎಂದು ಬಾಳೆ ಹೊನ್ನೂರು ರಂಭಾಪುರಿ ಸ್ವಾಮೀಜಿ ಸಲಹೆ ನೀಡಿದರು.

 ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಅವರ ನಿವಾಸದಲ್ಲಿ ಸೋಮವಾರ ಆಯೋಜಿಸ ಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಇಲ್ಲದ ಬಿಜೆಪಿ ಪಕ್ಷವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಬಿಜೆಪಿ ಪಕ್ಷಕ್ಕೆ ಯಡಿಯೂರಪ್ಪ ಅವರ ಕೊಡುಗೆ ಅಮೋಘ.
 
ಸುದೀರ್ಘ ನಾಲ್ಕು ದಶಕಗಳ ಕಾಲ ಹಗಲಿರುಳು ಶ್ರಮಿಸಿ  ಬಿಜೆಪಿ ಪಕ್ಷವನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ತಂದಿದ್ದಾರೆ. ಇಂತಹ ಸಂದರ್ಭದಲ್ಲಿ ಪಕ್ಷದಲ್ಲಿನ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಚಿತಾವಣೆ ಯಿಂದಾಗಿ ಯಡಿಯೂರಪ್ಪ ನವರಿಗೆ ನೋವಾಗಿದೆ. ಇದನ್ನು ಸರಿಪಡಿಸುವ ಕಾರ್ಯಕ್ಕೆ ಬಿಜೆಪಿ ವರಿಷ್ಠರು ಮುಂದಾಗಬೇಕ್ತಿತು ಎಂದರು.  

 ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯವಿಲ್ಲ: ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ. ಈ ಹಿಂದೆ ಅನೇಕ ನಾಯಕರು ಪ್ರಾದೇಶಿಕ ಪಕ್ಷ ಕಟ್ಟಿ ಸೋಲುಂಡಿದ್ದಾರೆ. ಯಾವುದೇ ಒಂದು ಪಕ್ಷವನ್ನು ಬಲಿಷ್ಠಗೊಳಿಸಲು ಸಾಕಷ್ಟು ಶ್ರಮ. ಹೋರಾಟಗಳು ನಿರಂತರವಾಗಿರಬೇಕು ಎಂದು ಹೇಳಿದರು.

 ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ. ಆದ್ದರಿಂದ ಮಾಜಿ ಮುಖ್ಯಮಂತ್ರಿಗಳು ಪ್ರಾದೇಶಿಕ ಪಕ್ಷಕಟ್ಟುವ ಬದಲು ಬಿಜೆಪಿಯಲ್ಲಿಯೇ ಉಳಿಯುವುದು ಸೂಕ್ತ ಎಂಬ ಸಲಹೆಯನ್ನು ನೀಡಿದರು.
 ವೈಶಿಷ್ಟ್ಯ ಪೂರ್ಣ ದಸರಾ: ಗಂಗಾವತಿ ನಗರದಲ್ಲಿ ನಡೆಯಲ್ಲಿರುವ ಶರನ್ನವರಾತ್ರಿ ದಸರಾ ದರ್ಬಾರ್‌ನಲ್ಲಿ ವಿಶಿಷ್ಟ ಕಾರ್ಯಕ್ರಮಗಳು ಜರುಗಲಿವೆ. 5 ಅಮೂಲ್ಯ ಸಾಹಿತ್ಯ ಕೃತಿಗಳು ಬಿಡುಗಡೆಯಾಗಲಿವೆ. ನಿರ್ಮಲ ನುಡಿ, ಪಂಚಾ ಚಾರ್ಯ, ರಂಭಾಪುರಿ ಬೆಳಕು ಎಂಬ ಮೂರು ಕೃತಿಗಳು ಬಿಡುಗಡೆ ಯಾಗಲಿವೆ. 

 ಚಿಕ್ಕಮಂಗಳೂರು ಜಿಲ್ಲೆಯ ಬಸಾಪುರ ಗ್ರಾಮದ ಬಿ.ಎಂ. ಭೋಜೆಗೌಡರಿಗೆ `ರಂಭಾಪುರಿ ಯುವ ಸಿರಿ~ ಪ್ರಶಸ್ತಿಯನ್ನು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಕಳಕಪ್ಪ ಬಂಡಿ ಅವರಿಗೆ `ವೀರಶೈವ ಸಿರಿ~ ಪ್ರಶಸ್ತಿಯನ್ನು ಮತ್ತು ಬೆಂಗಳೂರಿನ ಡಾ.ಎಸ್.ವಿದ್ಯಾಶಂಕರ ಅವರಿಗೆ `ಸಾಹಿತ್ಯ ಸಿರಿ~ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ರಂಭಾಪುರಿ ಶ್ರೀಗಳು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.