ADVERTISEMENT

ರಂಗಕಲಾವಿದರ ಕಾಲೊನಿ ಸುಭದ್ರಮ್ಮ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 5:50 IST
Last Updated 10 ಅಕ್ಟೋಬರ್ 2011, 5:50 IST

ಮುಂಡರಗಿ: `ಆರ್ಥಿಕ ಭದ್ರತೆ ಇಲ್ಲದೆ ನನ್ನ ಕಣ್ಣೆದುರಿನಲ್ಲಿಯೇ ನೂರಾರು ಬಡ ಕಲಾವಿದರ ಕುಟುಂಬ ಬೀದಿಗೆ ಬೀಳುತ್ತಿವೆ, ಇರಲು ಸೂರಿಲ್ಲದೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲಾಗದೆ, ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ನರಳುತ್ತಿರುವವರನ್ನು ನೋಡುತ್ತಿದ್ದರೆ ಕರಳು ಚುರ್ ಎನ್ನುತ್ತದೆ. ಇದಕ್ಕಾಗಿ ಕಲಾವಿದರ ಕಾಲೊನಿ ಎಂಬ ಹೆಸರಿನಲ್ಲಿ ಪ್ರತಿಯೊಬ್ಬ ರಂಗ ಕಲಾವಿದರಿಗೆ ಸರಕಾರ ಮನೆಗಳನ್ನು ನಿರ್ಮಿಸಿಕೊಡಬೇಕು~ ಎಂದು ಹಿರಿಯ ರಂಗ ಕಲಾವಿದೆ ಹಾಗೂ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಸುಭದ್ರಮ್ಮ ಮನ್ಸೂರ ಆಗ್ರಹಿಸಿದರು.

ಗದುಗಿನ ಪಂಡಿತ ಪುಟ್ಟರಾಜ ಗವಾಯಿ ನಾಟ್ಯ ಸಂಘದ ಸಹಾಯಾರ್ಥ ಮುಂಡರಗಿಯ ಹವ್ಯಾಸಿ ಕಲಾವಿದರ ಸಂಘವು ಪಟ್ಟಣದಲ್ಲಿ ಏರ್ಪಡಿಸಿರುವ `ರಕ್ತರಾತ್ರಿ~ ನಾಟಕದಲ್ಲಿ ಪಾತ್ರ ನಿರ್ವಹಿಸಲು ಬಂದಿರುವ ಅವರು ಭಾನುವಾರ `ಪ್ರಜಾವಾಣಿ~ಯೊಂದಿಗೆ ತಮ್ಮ ಮನದ ನೋವು, ನಿರಾಸೆಗಳನ್ನು ಹಂಚಿಕೊಂಡರು.

`ಈಚಿನ ವರ್ಷಗಳಲ್ಲಿ ಸದಭಿರುಚಿಯ ನಾಟಕ ಹಾಗೂ ಸಿನಿಮಾಗಳನ್ನು ನೋಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ದೂರದರ್ಶನದ ಭರಾಟೆಯಲ್ಲಿ ವೃತ್ತಿ ರಂಗಭೂಮಿ ಹಾಗೂ ವೃತ್ತಿ ಕಲಾವಿದರ ಭವಿಷ್ಯ ಚಿಂತಾಜನಕವಾಗಿದೆ~ ಎಂದು ಅವರು ಅವರು ಕಳವಳ ವ್ಯಕ್ತಪಡಿಸಿದರು.

`ಈ ನೆಲದ ಕಲ್ಲು, ಮಣ್ಣು, ಗಿಡ, ಮರಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಸರಕಾರ ನಿತ್ಯ ನೂರಾರು ತಾಪತ್ರಯಗಳಿಂದ ನರಳುತ್ತಿರುವ ಬಡ ರಂಗಕಲಾವಿದರ ಬದುಕನ್ನು ಹಸನು ಮಾಡುವ ಕುರಿತು ಕಿಂಚಿತ್ತೂ ಯೋಚಿಸದೆ ಇರುವುದು ದುರ್ದೈವದ ಸಂಗತಿಯಾಗಿದೆ~ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

`ರಂಗದ ಮೇಲೆ ಮಹಾರಾಜ, ಮಹಾರಾಣಿಯರಾಗಿ ಮೆರೆಯುವ ಕಲಾವಿದರ ತೆರೆಯ ಹಿಂದಿನ ಬದುಕು ದಯನೀಯವಾಗಿದೆ. ಅವಕಾಶ ಹಾಗೂ ಅಗತ್ಯವಿದ್ದಾಗ ಮಾತ್ರ ಕೆಲಸ ನೀಡಿ ದುಡಿಸಿಕೊಳ್ಳುವ ವೃತ್ತಿ ನಾಟಕ ಕಂಪನಿಗಳ ಮಾಲೀಕರು ನಂತರ ಕಲಾವಿದರನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕುತ್ತಾರೆ. ಅಂತಹ ಸಂದರ್ಭಗಳಲ್ಲಿ ಬಡ ಕಲಾವಿದ ತಾನು ಬೀದಿಗೆ ಬೀಳುವುದಲ್ಲದೆ ತನ್ನ ಕುಟುಂಬವನ್ನೂ ಬೀದಿಗೆ ತರಬೇಕಾದ ಪರಸ್ಥಿತಿ ನಿರ್ಮಾಣವಾಗುತ್ತದೆ~ ಎಂದು ಅವರು ವ್ಯಥೆಪಟ್ಟರು.

`ಈಚಿನ ವರ್ಷಗಳಲ್ಲಿ ವೃತ್ತಿ ರಂಗಭೂಮಿಯ ಯುವ ಕಲಾವಿದರಲ್ಲಿ ಕಲೆಯೆಡೆಗಿನ ಬದ್ಧತೆ ತುಂಬಾ ಕಡಿಮೆಯಾಗುತ್ತಿದೆ. ಹೊಟ್ಟೆ ಹೊರೆಯುವುದಕ್ಕೆ ರಂಗಭೂಮಿಗೆ ಬರುವವರ ಸಂಖ್ಯೆ ಹೆಚ್ಚಾಗತೊಡಗಿದೆ. ಹೀಗಾಗಿ ರಂಗ ಭೂಮಿಯೆಡೆಗಿನ ಅವರ ಪ್ರೀತಿ, ಬದ್ಧತೆಯನ್ನು ಯಾರೂ ಪ್ರಶ್ನಿಸದಂತಾಗಿದೆ. ಸುಮಾರು ಆರು ದಶಕಗಳ ಕಾಲ ಬಣ್ಣದ ಬದುಕಿನಲ್ಲಿ ಇರುವ ನನಗೆ ವೃತ್ತಿ ಜೀವನದಲ್ಲಿ ಹಲವಾರು ಗುರುಗಳು ಮಾರ್ಗದರ್ಶನ ಮಾಡಿದ್ದಾರೆ. 60 ವರ್ಷ ರಂಗಭೂಮಿಯಲ್ಲಿದ್ದರೂ ನಾನು ಈಗಲೂ ಕಲಿಯಕೆಯ ಹಂತದಲ್ಲಿದ್ದೇನೆ~ ಎಂದು ನೆನಪುಗಳನ್ನು ಅವರು ಮೆಲುಕು ಹಾಕಿದರು.

 `ಬೇರೆ ಬೇರೆ ಕಾರಣಗಳಿಂದ ಇಡೀ ದೇಶದ ಗಮನ ಸೆಳೆದಿರುವ ಬಳ್ಳಾರಿಯಲ್ಲಿ ಅವನತಿಯ ಹಾದಿಯಲ್ಲಿರುವ ಕಲಾ ಪ್ರೇಮಿ ಸಂಘಕ್ಕೆ ಕಾಯಕಲ್ಪ ನೀಡಲು ಸರಕಾರವನ್ನು ಒಳಗೊಂಡಂತೆ ಯಾರೂ ಮುಂದೆ ಬರುತ್ತಿಲ್ಲ. ಬರೀ ಕೋಟಿಗಳ ಲೆಕ್ಕದಲ್ಲಿ ಮಾತನಾಡುತ್ತಿರುವ ಬಳ್ಳಾರಿಯ ಜನತೆ ಕಲಾ ಪ್ರೇಮಿ ಸಂಘದ ಪುನಶ್ಚೇತನಕ್ಕೆ ಸಹಾಯ ಹಸ್ತ ನೀಡದಿರುವುದು ಸೋಜಿಗದ ಸಂಗತಿಯಾಗಿದೆ~ ಎಂದು ಅವರು ಆಶ್ವರ್ಯ ವ್ಯಕ್ತಪಡಿಸಿದರು.

ಕೂಡ್ಲಿಗಿಯ ವೃತ್ತಿ ಕಲಾವಿದೆ ಬಾಣದ ಶಿವಕುಮಾರಿ ಹಾಗೂ ಇಲಕಲ್ಲಿನ ಕಲಾವಿದೆ ಉಮಾರಾಣಿ ಬಾರಿಗಿಡದ ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.