ADVERTISEMENT

ರಕ್ತದಾನ ಮಾಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 8:45 IST
Last Updated 13 ಜುಲೈ 2012, 8:45 IST

ಗದಗ: ಅಪಘಾತಗಳಲ್ಲಿ ಗಾಯಗೊಂಡ ವರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಆದ್ದರಿಂದ ಸ್ವ ಇಚ್ಛೆಯಿಂದ ರಕ್ತದಾನ ಮಾಡಿದರೆ ಅದನ್ನು ಸಂಗ್ರಹಿಸಿ ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಸವರಾಜೇಶ್ವರಿ ಪಾಟೀಲ ಹೇಳಿದರು.

ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ  ಕೆ.ವಿ.ಎಸ್.ಆರ್. ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ  ಉದ್ಘಾಟಿಸಿ ಮಾತನಾಡಿದದರು.  ಸ್ವಯಂ  ಪ್ರೇರಿತರಾಗಿ ಯಾವುದೇ ಭಯ ಮತ್ತು ಆತಂಕಗಳಿಗೆ ಒಳಗಾಗದೇ  ರಕ್ತದಾನ ಮಾಡಬೇಕು.
 
18 ರಿಂದ 60 ವಯಸ್ಸಿನ ಕನಿಷ್ಟ 45 ಕೆ.ಜಿ. ದೇಹ ತೂಕ ಹೊಂದಿರುವ ಆರೋಗ್ಯವಂತ  ಪುರುಷ  ಹಾಗೂ ಮಹಿಳೆಯರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ ಎಂದರು.  ರಕ್ತದಾನದಿಂದ ಶೇ. 80 ರಷ್ಟು ಹೃದಯಾಘಾತ ತಡೆಯಬಹುದು. ರಕ್ತದಲ್ಲಿನ ಕೊಲೆಸ್ಟ್ರಲ್ ಕಡಿಮೆ ಮಾಡಬಹುದು. ಹೊಸ ರಕ್ತದ ಉತ್ಪತ್ತಿಗೆ ಉತ್ತೇಜನ ದೊರೆಯುವುದಲ್ಲದೇ ಮನುಷ್ಯನ ನೆನಪಿನ ಶಕ್ತಿ ಹೆಚ್ಚುತ್ತದೆ.  ಹಾಗೂ ಮನುಷ್ಯ ಇನ್ನಷ್ಟು ಸದೃಢ ಕಾಯರಾಗಿ ಹೆಚ್ಚು ಕಾಲ ಬದುಕಬಹುದು ಎಂದು ಹೇಳಿದರು.

ಸಂಕೇತ ಪಿ.ಯು. ಕಾಲೇಜಿನ ಪ್ರಾಂಶುಪಾಲ ಪಿ.ಎಸ್. ಕಾಶಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಡಾ.  .ಆರ್.ಎನ್.ಗೋಡಬೋಲೆ ಮಾತನಾಡಿ, ಯುವಕರಲ್ಲಿ ರಕ್ತದಾನದ ಬಗ್ಗೆ ಅನೇಕ ಹೆದರಿಕೆಗಳಿವೆ. ಅದು ದೂರವಾಗಬೇಕು.    ರಕ್ತದಾನದ ಬಗ್ಗೆ ಸರಿಯಾದ ತಿಳುವಳಿಕೆ ಮೂಡಿಸುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು. ಇನ್ನರ್‌ವೀಲ್ ಅಧ್ಯಕ್ಷೆ  ಶಕುಂತಲಾ ಸಿಂಧೂರ, ಪ್ರಾಂಶುಪಾಲ ಹೊಳೆಯಪ್ಪ ಕಲಬುರ್ಗಿ, ಡಾ. ಅನಂತ ಶಿವಪುರ ಮಾತನಾಡಿದರು. 

ಇನ್ನರ್‌ವೀಲ್‌ನ ಕಾರ್ಯದರ್ಶಿ ಅನ್ನಪೂರ್ಣ ವರವಿ, ಎನ್.ಎಸ್.ಎಸ್. ಅಧಿಕಾರಿ ಜಿ.ಎಮ್. ಹಕಾರಿ, ಡಾ. ಪಿ.ಎಚ್. ಕಬಾಡಿ,  ಮಹೇಶ್ವರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಮಾರ್ಷಿಲ್ , ಕೆ.ಎಸ್.ಎಸ್. ಪದವಿ ಕಾಲೇಜಿನ ಪ್ರಾಂಶುಪಾಲ ಎಮ್. ಎನ್. ಕಾಮನಹಳ್ಳಿ ಹಾಜರಿದ್ದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕೆ. ಸ್ವಾಗತಿಸಿದರು.  ಜಿಲ್ಲಾ ಆರೋಗ್ಯಾಧಿಕಾರಿ ಡಾ. ಡಿ.ಬಿ. ಚನ್ನಶೆಟ್ಟಿ ಮಾತನಾಡಿದರು.  ಮೇಲ್ವಿಚಾರಕರಾದ ಬಿ.ಬಿ. ಲಾಳಗಟ್ಟಿ  ವಂದಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎನ್. ಮೊಸರಕಲ್ಲ ನಿರೂಪಿಸಿದರು. ಶಕುಂತಲಾ ಸಿಂಧೂರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿದಂತೆ  5 ಮಂದಿ ರಕ್ತದಾನ ಮಾಡಿದರು. 

ಇದಕ್ಕೂ ಮುನ್ನ ನಗರದ ಮುನ್ಸಿಪಲ್ ಕಾಲೇಜಿನಿಂದ ಆರಂಭಗೊಂಡ ಜಾಥಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಟಿ.ರುದ್ರೇಗೌಡ ಚಾಲನೆ ನೀಡಿದರು. ಪ್ರಮುಖ ಬೀದಿಗಳಲ್ಲಿ  ಶಾಲಾ- ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.