ADVERTISEMENT

ರಾಮದೇವ ಯೋಗ ಮೋಡಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2011, 5:40 IST
Last Updated 23 ಏಪ್ರಿಲ್ 2011, 5:40 IST
ರಾಮದೇವ ಯೋಗ ಮೋಡಿ
ರಾಮದೇವ ಯೋಗ ಮೋಡಿ   

ಗದಗ: ಬೆಳಕು ಮೂಡುವ ಮುನ್ಸೂಚನೆಯಾಗಿ ಗಾಢ ಕತ್ತಲು ಆವರಿಸಿತ್ತು. ಒಬ್ಬರ ಮುಖ ಮತ್ತೊಬ್ಬರಿಗೆ ಕಾಣದಷ್ಟು ಕತ್ತಲು. ರಾತ್ರಿ ಬೇರೆ ಜಡಿ ಮಳೆ, ಮುಂಜಾನೆ ಚಳಿ. ಆದರೆ ಇದ್ಯಾವುದನ್ನು ಲೆಕ್ಕಿಸದೇ ಜನ ಪ್ರವಾಹದೋಪಾದಿಯಲ್ಲಿ ವಿದ್ಯಾದಾನ ಸಮಿತಿ ಮೈದಾನದತ್ತ ಹೊರಟ್ಟರು. ಎಲ್ಲರದ್ದೂ ಒಂದೇ ಗುರಿ. ಬಾಬಾ ರಾಮದೇವರ ಅವರು ಹೇಳಿಕೊಡುವ ಪಾಠವನ್ನು ಕಣ್ಣಾರೆ ಕಂಡು, ಕಿವಿಯಾರೆ ಕೇಳಿ ತಿಳಿದುಕೊಳ್ಳಬೇಕು ಎನ್ನುವ ಮಹದಾಸೆ.

ಆ ಸಮಯ ಬಂದೇ ಬಿಟ್ಟಿತು. ಎದೆಯವರೆಗೂ ಇಳಿಬಿಟ್ಟಿ ಗಡ್ಡ, ಕಾಷಾಯ ವಸ್ತ್ರತೊಟ್ಟ, ಕಟ್ಟು ಮಸ್ತಾದ ದೇಹವನ್ನು ಹೊತ್ತ ಮಧ್ಯ ವಯಸ್ಕ ವ್ಯಕ್ತಿ ವೇದಿಕೆಗೆ ಹತ್ತಿದೊಡನೆ ಮೈದಾನದಲ್ಲಿ ನೆರೆದಿದ್ದ ಸಹಸ್ರಾರು ಕಂಠದಿಂದ ‘ಭಾರತ್ ಮಾತಾ ಕೀ ಜೈ’ ಎನ್ನುವ ಉದ್ಘೋಷ. ಇಡೀ ವಾತಾವರಣ ದೇಶಭಕ್ತಿಯ ಒಡ್ಡೋಲಗವಾಯಿತು.

ಇಂತಹ ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಮುನ್ನಡಿ ಬರೆದವರು ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ್ ಟ್ರಸ್ಟ್ ಸಂಸ್ಥೆಗಳು. ವಿದ್ಯಾದಾನ ಸಮಿತಿ ಮೈದಾನದಲ್ಲಿ ಶುಕ್ರವಾರ ನಡೆದ ಯೋಗ ಶಿಬಿರದಲ್ಲಿ ಮಹಿಳೆಯರು, ಮಕ್ಕಳು, ಪುರುಷರು ಎಲ್ಲರೂ ಭಾಗವಹಿಸಿ ಸುಮಾರು ಎರಡೂವರೆ ಗಂಟೆಗಳ ಕಾಲ ದೇಹವನ್ನು ದಂಡನೆಗೆ ಒಳಪಡಿಸಿದರು. ಅಂತಿಮವಾಗಿ ತನ್ಮಯತೆಯ ಅನುಭೂತಿ ಪಡೆದುಕೊಂಡರು.

ವೇದಿಕೆಯ ಮೇಲೆ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ, ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ, ಸ್ವಾಮಿ ನಿರ್ಭಯಾನಂದ ಸರಸ್ವತಿ ಆಸೀನರಾಗಿ, ಬಹು ಹತ್ತಿರದಿಂದ ಬಾಬಾ ರಾಮದೇವ ಪ್ರಸ್ತುತ ಪಡಿಸಿದ ಯೋಗದ ವಿವಿಧ ಭಂಗಿಗಳನ್ನು ವೀಕ್ಷಿಸಿದರು.

ಇಡೀ ವೇದಿಕೆಯ ತುಂಬಾ ಪಾದರಸದಂತೆ ಓಡಾಡಿಕೊಂಡು ಯೋಗದ ವಿವಿಧ ಆಸನಗಳ ಬಗ್ಗೆ ವಿವರಣೆ ನೀಡುತ್ತಾ, ಕೆಲವೊಂದು ಕ್ಲಿಷ್ಟ ಆಸನಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸುತ್ತಾ ಎರಡು ಗಂಟೆಗಳ ಕಾಲ ಇಡೀ ಜನಸ್ತೋಮವನ್ನು ತಮ್ಮ ಮುಷ್ಠಿಯಲ್ಲಿ ಹಿಡಿದುಕೊಂಡಿದರು.

ಭಸ್ತಿಕ ಪ್ರಾಣಾಯಾಮ, ಕಲಾಲ ಭಾಜಿ, ಅನುಲೋಮ ವಿಲೋಮ, ಉಜ್ಜಾಯಿ, ಬ್ರಹ್ಮರಿ, ಪ್ರಣವ, ಚಕ್ರ ದಂಡಾಸನ, ಸರ್ವಾಂಗಾಸನ, ಗರುಡಾಸನ, ದಂಡಾಸನ ಸೇರಿದಂತೆ ವಿವಿಧ ಆಸನಗಳನ್ನು ಮಾಡುತ್ತಲೇ ಯೋಗ ಮತ್ತು ಪ್ರಾಣಾಯಾಮದ ಮಹತ್ವವನ್ನು ನೆರೆದ ಜನಸಮೂಹಕ್ಕೆ ತಿಳಿಸಿದರು. ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತ, ಮಧ್ಯ-ಮಧ್ಯ ಕನ್ನಡದಲ್ಲಿ ಕೆಲವೊಂದು ನುಡಿಗಳನ್ನು ಹೇಳಿ ಜನಮಾನಸಕ್ಕೆ ಹತ್ತಿರವಾದರು ಬಾಬಾ ರಾಮದೇವ.

ಮನುಷ್ಯ ರೋಗಗಳಿಂದ ಮುಕ್ತನಾಗಲು ಯೋಗಾಸನ ಅವಶ್ಯ. ಯೋಗಾಸನದಿಂದ ರಕ್ತದೊತ್ತಡ, ಮಧುಮೇಹ, ಹೃದಯ ಕಾಯಿಲೆ, ಮಾನಸಿಕ ಒತ್ತಡ, ಖಿನ್ನತೆ, ಕೀಳರಿಮೆ ಮುಂತಾದವುಗಳಿಂದ ಮುಕ್ತರಾಗಲು ಯೋಗವೊಂದೆ ಮಾರ್ಗ ಎಂದು ಬಾಬಾ ರಾಮದೇವ್ ಬೋಧಿಸಿದರು.

ಕೇವಲ ಯೋಗ ಹೇಳಿಕೊಡುವುದಕ್ಕೆ ಮಾತ್ರ ವೇದಿಕೆಯನ್ನು ಸೀಮಿತಗೊಳಿಸದೇ ಭ್ರಷ್ಟಾಚಾರ ವಿರೋಧಿ ಆಂದೋಲನ ತಿಳಿವಳಿಕೆ ನೀಡಿದರು. ‘ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು ದೆಹಲಿಗೆ ಯಾರು ಬರುತ್ತೀರಿ. ಕೈ ಮೇಲೆತ್ತಿ’ ಎಂದಾಗ, ಮೈದಾನದಲ್ಲಿ ನೆರೆದಿದ್ದ 15 ಸಾವಿರಕ್ಕೂ ಹೆಚ್ಚು ಮಂದಿ ಒಟ್ಟಾಗಿ ಕೈಯೆತ್ತಿ ಬೆಂಬಲ ವ್ಯಕ್ತಪಡಿಸಿದರು.

ಹೊಸಳ್ಳಿಯ ಅಭಿನವ ಬೂದೀಶ್ವರ ಸ್ವಾಮೀಜಿ, ಶಾಸಕ ಶ್ರೀಶೈಲಪ್ಪ ಬಿದರೂರ  ವಿಧಾನ ಪರಿಷತ್ ಸದಸ್ಯ ವಿಜಯ ಸಂಕೇಶ್ವರ, ಮಾಜಿ ಶಾಸಕ ಡಿ.ಆರ್. ಪಾಟೀಲ, ನಗರಸಭೆ ಸದಸ್ಯರಾದ ರಾಮಕೃಷ್ಣ ಪಾಂಡ್ರೆ, ಜಯಶ್ರೀ ಉಗಲಾಟದ, ಭಾರತ ಸ್ವಾಭಿಮಾನ ಟ್ರಸ್ಟ್‌ನ ಅಧ್ಯಕ್ಷ ರುದ್ರಣ್ಣ ಗುಳಗುಳಿ, ಮೃತ್ಯುಂಜಯ ಸಂಕೇಶ್ವರ, ವಿಜಯಕುಮಾರ ಗಡ್ಡಿ, ಡಾ. ಅನಂತ ಶಿವಪೂರ, ಸಂಗಮೇಶ ದುಂದೂರ, ಜಯಂತಿಲಾಲ ಕವಾಡ, ಜಿಲ್ಲಾಧಿಕಾರಿ ಡಾ. ಎಸ್. ಶಂಕರನಾರಾಯಣ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ರವಿಕುಮಾರ ನಾಯಕ್, ನಿರ್ಮಲಾ ಪಾಟೀಲ, ಶಿವಾನಂದ ಗಿಡ್ನಂದಿ, ಬಿ.ಎಂ. ಹಿರೇಮಠ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.