ADVERTISEMENT

ರೂ.6.38 ಕೋಟಿ ಕ್ರಿಯಾಯೋಜ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 8:50 IST
Last Updated 22 ಫೆಬ್ರುವರಿ 2011, 8:50 IST

ಗಜೇಂದ್ರಗಡ: ರೋಣ ತಾಲ್ಲೂಕಿನ ಪ್ರಾಥಮಿಕ ಶಾಲೆಗಳಿಗೆ ಅಗತ್ಯ ಇರುವ ಮೂಲ ಸೌಲಭ್ಯಗಳನ್ನು ಕಲ್ಪಿಸಲು ರೂ. 6.38ಕೋಟಿ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್.ಗುಡ್ಲಾನವರ ತಿಳಿಸಿದರು.ಸೋಮವಾರ ಇಲ್ಲಿನ ಶ್ರೀ ಜಗದ್ಗುರು ತೋಂಟದಾರ್ಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮ ಮತ್ತು ನೂತನ ಅಡುಗೆ ಕೋಣೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ತಾಲ್ಲೂಕಿನ ಎಲ್ಲ ಪ್ರಾಥಮಿಕ ಶಾಲೆಗಳಿಗೆ ಅಗತ್ಯ ಇರುವ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ಕೊಠಡಿ, ಪ್ರಯೋಗಾಲಯ, ಗ್ರಂಥಾಲಯ ಇತ್ಯಾದಿಗಳನ್ನು ಒದಗಿಸುವ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಕೊಡಲಾಗುವುದು. ಜೊತೆಗೆ ತಾಲ್ಲೂಕಿನ 11 ಪ್ರೌಢಶಾಲೆಗಳಿಗೆ ಅಗತ್ಯ ಇರುವ ಕೊಠಡಿಗಳ ನಿರ್ಮಾಣಕ್ಕೂ ರೂ. 50 ಲಕ್ಷ ಅನುದಾನ ಬಿಡುಗಡೆಗೆ ಈಗಾಗಲೇ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ಅನ್ನದಾಸೋಹಕ್ಕೆ ಮೊದಲ ಪ್ರಾಶಸ್ತ್ಯವನ್ನು ಕೊಟ್ಟಿದ್ದರು. ಅದೇ ಮಾದರಿಯಲ್ಲಿ ಇದೀಗ ಶಿಕ್ಷಣ ಇಲಾಖೆ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದಿದೆ ಎಂದ ಅವರು, ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೆ ತಂದ ಯೋಜನೆಗಳನ್ನು ಸದ್ಬಳಿಕೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಬಿಸಿಯೂಟ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕಳಕಪ್ಪ ಬಂಡಿ ಅವರ ಪತ್ನಿ ಸಂಯುಕ್ತಾ ಬಂಡಿ ಅವರು, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಜೊತೆಗೆ ಇಂಗ್ಲಿಷ ಭಾಷೆಯ ಜ್ಞಾನವು ಅತ್ಯಗತ್ಯವಾಗಿದೆ. ಆದರೆ, ಕನ್ನಡಕ್ಕೆ ಮೊದಲ ಆದ್ಯತೆ ಕೊಟ್ಟು ನಂತರ ಇತರೆ ಭಾಷೆಗಳನ್ನು ಕಲಿಯುವುದು ಒಳ್ಳೆಯದು ಎಂದರು.

ಜ್ಞಾನ ದಾಸೋಹದ ಜೊತೆ ಅನ್ನದಾಸೋಹವು ಅಗತ್ಯವಾಗಿದ್ದು, ಮಕ್ಕಳ ಶಾರೀರಿಕ ಬೆಳವಣಿಗೆಗೆ ಪೌಷ್ಠಿಕಾಂಶಯುಕ್ತ ಆಹಾರ ಬೇಕಿದ್ದು, ಈ ದಿಸೆಯಲ್ಲಿ ಬಿಸಿಯೂಟ ಯೋಜನೆ ಅತ್ಯಂತ ಮಹತ್ತರವಾಗಿದೆ. ದೇಶದಲ್ಲಿ ಅನ್ನ ಸಿಗದೇ ಅದೆಷ್ಟೋ ಮಕ್ಕಳು ಉಪವಾಸ ಅನುಭವಿಸುತ್ತಿದ್ದಾರೆ. ಹೀಗಾಗಿ ಶಾಲೆಗಳಲ್ಲಿ ಕೊಡುವ ಊಟವನ್ನು ವಿದ್ಯಾರ್ಥಿಗಳು ಕೆಡಿಸದೇ ಸರಿಯಾದ ರೀತಿಯಲ್ಲಿ ಬಳಿಕೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಕ್ಷೇತ್ರ ಸಮನ್ವಯ ಅಧಿಕಾರಿ ಐ.ಆರ್. ಅಕ್ಕಿ, ನಿವೃತ್ತ ಶಿಕ್ಷಕ ಎಸ್.ಬಿ. ಹಿರೇಮಠ ಮಾತನಾಡಿದರು. ಸಂಸ್ಥೆಯ ಚೇರಮನ್ ಎಸ್.ಎಲ್. ಹಿರೇಮನಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಲ್ಲೂಕು ಅಕ್ಷರ ದಾಸೋಹ ನಿರ್ದೇಶಕ ವಿ.ಬಿ. ಸಂಗನಾಳ, ಪುರಸಭೆ ಅಧ್ಯಕ್ಷೆ ಅಕ್ಕಮ್ಮ ರಾಮಜಿ, ಪುರಸಭೆ ಶಹರಿ ರೋಜಗಾರ ಯೋಜನೆಯ ಅಧ್ಯಕ್ಷೆ ಬಸಮ್ಮ ಸಾಲಿಮಠ, ಪುರಸಭೆ ಸದಸ್ಯೆ ರೇಖಾ ರಂಗ್ರೇಜ, ವೀರಶೈವ ಸಮಾಜದ ಅಧ್ಯಕ್ಷ ಬಿ.ಎಂ. ಸಜ್ಜನರ, ಅಜಿತ ವಂದಕುದರಿ ಹಾಜರಿದ್ದರು. ಸಂಸ್ಥೆಯ ಕಾರ್ಯದರ್ಶಿ ಅಶೋಕ ಹೊನವಾಡ ಸ್ವಾಗತಿಸಿದರು. ರಮೇಶ ಜೂಚನಿ ವಂದಿಸಿದರು. ಎ.ಎಸ್. ಸಿಂಹಾಸನದ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.