ಲಕ್ಷ್ಮೇಶ್ವರ: ಬಹಳಷ್ಟು ರೈತರು ರಸ್ತೆಗಳನ್ನೇ ಕಣಗಳನ್ನಾಗಿ ಮಾಡಿಕೊಂಡು ಅಲ್ಲಿಯೇ ಒಕ್ಕಲಿ ಕಾರ್ಯಗಳನ್ನು ಪೂರೈಸುತ್ತಿರುವುದು ಎಲ್ಲೆಡೆ ಸಾಮಾನ್ಯವಾಗಿ ಕಂಡು ಬರುತ್ತಿದೆ. ಆದರೆ ಇದು ವಾಹನ ಸವಾರರಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ.
ಮುಂಗಾರು ಹಂಗಾಮಿನ ಹವೀಜದಿಂದ ಹಿಡಿದು ಹಿಂಗಾರು ಹಂಗಾಮಿನ ಧಾನ್ಯಗಳ ಒಕ್ಕಲಿಗೆ ರಸ್ತೆಗಳನ್ನೇ ಅವಲಂಬಿಸಿದ್ದಾರೆ. ಸದ್ಯ ಕುಸುಬಿ ಸುಗ್ಗಿ ಜೋರಾಗಿದೆ. ತಾಲ್ಲೂಕಿನ ಎಲ್ಲ ಗ್ರಾಮಗಳ ರಸ್ತೆಗಳಲ್ಲಿ ಕುಸುಬಿ ರಾಶಿ ಕಾಣುತ್ತಿದೆ. ಕಟಾವು ಮಾಡಿದ ಕುಸುಬಿಯನ್ನು ರೈತರು ವಾಹನ ಸಂಚರಿಸುವ ರಸ್ತೆಗಳಲ್ಲಿ ಹಾಕಿ ಒಕ್ಕಲಿಗೆ ಸರಳ ವಿಧಾನ ಕಂಡುಕೊಂಡಿದ್ದಾರೆ.ಆದರೆ, ಇದರಿಂದ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದೆ. ಕೆಲ ಗ್ರಾಮಗಳಲ್ಲಿ ರಸ್ತೆ ಮಧ್ಯದಲ್ಲಿಯೇ ಒಕ್ಕಲಿಗಾಗಿ ಬೆಳೆಯನ್ನು ರಾಶಿ ಹಾಕಲಾಗುತ್ತಿದೆ. ಕುಸುಬಿ ಜಾರುವ ಗುಣ ಹೊಂದಿದ್ದು, ಇದು ದ್ವಿಚಕ್ರ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ. ಕೆಲವು ಬೈಕ್ ಸವಾರರು ಜಾರಿ ಬಿದ್ದು ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ ಉದಾಹರಣೆಗಳು ಇವೆ.
‘ಒಕ್ಕಲಿ ನಂತರ ರೈತರು ಕುಸುಬಿ ಕಸಕ್ಕೆ ರಸ್ತೆ ಪಕ್ಕದಲ್ಲಿಯೇ ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ಅರಣ್ಯ ಇಲಾಖೆಯವರು ರಸ್ತೆಯ ಇಕ್ಕೆಲಗಳಲ್ಲಿ ಬೆಳೆಸುತ್ತಿರುವ ಗಿಡ ಮರಗಳೂ ಸಹ ಬೆಂಕಿಗೆ ಆಹುತಿ ಆಗುತ್ತಿವೆ. ಪರಿಸರ ಉಳಿಸುವ ಸಲುವಾಗಿ ರೈತರು ಸೂಕ್ತ ಸ್ಥಳಗಳಲ್ಲಿ ಒಕ್ಕಲಿ ಕೆಲಸ ಮಾಡಿದರೆ ಎಲ್ಲರಿಗೂ ಅನುಕೂಲ ಆಗುತ್ತದೆ’ ಎಂದು ಅವರು ಹೇಳಿದರು.
**
ಕುಸುಬಿ ಹಾಕಿದ ರಸ್ತೆದಾಗ ಬೈಕ್ ಓಡಿಸಬೇಕಂದ್ರ ಭಾಳ ಹುಷಾರ್ ಇರಬೇಕ್ರೀ. ಇಲ್ಲಾಂದ್ರ ಜಾರಿ ಬೀಳೋದು ಗ್ಯಾರಂಟಿ – ಸುರೇಶ, ಬೈಕ್ ಸವಾರ.
**
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.