ADVERTISEMENT

ರೈಲು ಮಾರ್ಗಕ್ಕೆ ಆಗ್ರಹಿಸಿ ಜಾಥಾ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2013, 6:57 IST
Last Updated 20 ಫೆಬ್ರುವರಿ 2013, 6:57 IST
ಗದಗದಿಂದ ಮುಂಡರಗಿ ಮಾರ್ಗವಾಗಿ ಹೂವಿನಹಡಗಲಿ ಹಾಗೂ ಹರಪನಹಳ್ಳಿಯವರೆಗೆ ನೂತನ ರೈಲು ಮಾರ್ಗ ಮಂಜೂರಾತಿಗಾಗಿ ಒತ್ತಾಯಿಸಿ ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಕಾರ್ಯಕರ್ತರು ಹುಬ್ಬಳ್ಳಿಯ ನೈರುತ್ಯ ವಲಯ ಕಚೇರಿ ಮುಂದೆ ಧರಣಿಗೆ ಸತ್ಯಾಗ್ರಹ ಕೈಗೊಳ್ಳಲು ಕೈಗೊಂಡ ಜಾಥಾಕ್ಕೆ ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಚಾಲನೆ ನೀಡಿದರು.
ಗದಗದಿಂದ ಮುಂಡರಗಿ ಮಾರ್ಗವಾಗಿ ಹೂವಿನಹಡಗಲಿ ಹಾಗೂ ಹರಪನಹಳ್ಳಿಯವರೆಗೆ ನೂತನ ರೈಲು ಮಾರ್ಗ ಮಂಜೂರಾತಿಗಾಗಿ ಒತ್ತಾಯಿಸಿ ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಕಾರ್ಯಕರ್ತರು ಹುಬ್ಬಳ್ಳಿಯ ನೈರುತ್ಯ ವಲಯ ಕಚೇರಿ ಮುಂದೆ ಧರಣಿಗೆ ಸತ್ಯಾಗ್ರಹ ಕೈಗೊಳ್ಳಲು ಕೈಗೊಂಡ ಜಾಥಾಕ್ಕೆ ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಚಾಲನೆ ನೀಡಿದರು.   

ಮುಂಡರಗಿ: ಗದಗದಿಂದ ಮುಂಡರಗಿ ಮಾರ್ಗ ವಾಗಿ ಹೂವಿನಹಡಗಲಿ ಹಾಗೂ ಹರಪನ ಹಳ್ಳಿವರೆಗೆ ನೂತನ ರೈಲು ಮಾರ್ಗ ಮಂಜೂರಾ ತಿಗಾಗಿ ಆಗ್ರಹಿಸಿ ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಕಾರ್ಯಕರ್ತರು ಹುಬ್ಬಳ್ಳಿಯ ನೈರುತ್ಯ ವಲಯ ಕಚೇರಿ ಮುಂದೆ ಧರಣಿಗೆ ಸತ್ಯಾಗ್ರಹ ಕೈಗೊಳ್ಳಲು ಅನ್ನದಾನೀಶ್ವರ ಮಠದಿಂದ ತೆರಳಿದರು.

ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಜಾಥಾಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ, ಸದಾ ಬರಗಾಲದಿಂದಾಗಿ ಈ ಭಾಗದ ರೈತರು ಹಾಗೂ ಕೂಲಿ ಕಾರ್ಮಿಕರು ದೂರದ ನಗರ ಮತ್ತು ಪಟ್ಟಣಗಳಿಗೆ ಗುಳೆ ಹೋಗುತ್ತಿದ್ದಾರೆ. ಈ ಭಾಗಕ್ಕೆ ನೂತನ ರೈಲು ಮಾರ್ಗ ಮಂಜೂ ರಾದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಆಶ್ರಯದಲ್ಲಿ ತಾಲ್ಲೂಕಿನ ವಿವಿಧ ಸಂಘಟನೆಗಳ ಕಾರ್ಯಕರ್ತರು ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿರುವುದು ತುಂಬಾ ದುರ್ದೈವದ ಸಂಗತಿಯಾಗಿದೆ ಎಂದು ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಸಂಚಾಲಕ ಬಸವರಾಜ ನವಲಗುಂದ ಈ ಸಂದರ್ಭದಲ್ಲಿ ವಿಷಾದ ವ್ಯಕ್ತಪಡಿಸಿದರು.

ಎಲ್ಲ ರೀತಿಯಿಂದಲೂ ತೀರಾ ಹಿಂದುಳಿದಿರುವ ಈ ಭಾಗಕ್ಕೆ ನೂತನ ರೈಲು ಮಾರ್ಗದ ಅವಶ್ಯ ಇದ್ದು, ಕೇಂದ್ರ ಸರಕಾರ ತಕ್ಷಣ ನೂತನ ರೈಲು ಮಾರ್ಗ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು. ಈ ಕುರಿತಂತೆ ಸಂಸದ ಶಿವಕುಮಾರ ಉದಾಸಿ, ರಾಜ್ಯ ಸರಕಾರದ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಈಗಾಗಲೇ ಹಲವು ಬಾರಿ ಪತ್ರ ಬರೆದಿದ್ದು ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಈ ಭಾಗದ ಎಲ್ಲ ಹಂತದ ಜನಪ್ರತಿನಿಧಿಗಳು ಕೇವಲ ಅಧಿಕಾರಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ, ಜನರ ಸಮಸ್ಯೆಗಳ ಕುರಿತಂತೆ ನಿಜವಾದ ಕಾಳಜಿ ಇಲ್ಲ ಎಂದು ದೂರಿದರು. ನೂತನ ರೈಲು ಮಾರ್ಗ ಮಂಜೂರಾತಿಗಾಗಿ ಹೋರಾಟ ಅಗತ್ಯ ಎಂದು ಮಾಜಿ ಎಪಿಎಂಸಿ ಸದಸ್ಯ ಕೊಟ್ರಗೌಡ ಪಾಟೀಲ ಮನವಿ ಮಾಡಿದರು.

ಬಸವರಾಜ ದೇಸಾಯಿ, ಶಂಕ್ರಪ್ಪ ಬಾರಿಕಾಯಿ, ಎಚ್.ವಿರೂಪಾಕ್ಷಗೌಡ, ಕಾಂತರಾಜ ಹಿರೇಮಠ, ವೈ.ಎಚ್.ಭಜಂತ್ರಿ, ಸಹದೇದೇವಪ್ಪ ಭಜಂತ್ರಿ, ಡಿ.ಎಸ್.ಕಟ್ಟಿಮನಿ, ಎ.ಡಿ.ಕುಲಕರ್ಣಿ, ಮೋಹನ ಗೌಡ ಪಾಟೀಲ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.