ADVERTISEMENT

ಲಂಬಾಣಿ ಜನಾಂಗದ ಮತಾಂತರ; ಕಳವಳ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 9:05 IST
Last Updated 18 ಫೆಬ್ರುವರಿ 2011, 9:05 IST

ಗದಗ: ‘ಲಂಬಾಣಿ ಜನಾಂಗದಲ್ಲಿ ಇತ್ತೀಚೆಗೆ ಮತಾಂತರ ಹೆಚ್ಚಾಗುತ್ತಿದೆ’ ಎಂದು ಬಂಜಾರ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ನಾಯ್ಕ ಕಳವಳ ವ್ಯಕ್ತಪಡಿಸಿದರು.ಕರ್ನಾಟಕ ಪ್ರದೇಶ ಲಂಬಾಣಿ ಬಂಜಾರ ಕಲ್ಯಾಣ ಸಂಘ ಗದಗ ಜಿಲ್ಲಾ ಘಟಕ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸೇವಾಲಾಲ ಮಹಾರಾಜರ 272ನೇ ಜಯಂತ್ಯುತ್ಸವ ಹಾಗೂ ಸಾಂಸ್ಕೃತಿಕ ಕಲಾ ಮೇಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಲಂಬಾಣಿ ಜನಾಂಗಕ್ಕೆ ದೊರೆಯುವ ಸೌಲಭ್ಯಗಳು ಮತಾಂತರಗೊಂಡವರಿಗೆ ಸಿಗದಂತೆ ಎಚ್ಚರ ವಹಿಸಬೇಕು ಎಂದು ಸಮಾಜದ ಮುಖಂಡರಾದ ಕಾರಬಾರಿ ಹಾಗೂ ಡಾವ್ ಅವರಿಗೆ ಸಲಹೆ ನೀಡಿದರು. ‘ಒಂದು ಅಗುಳ ಕಂಡರೆ ಕಾಗೆ ತನ್ನ ಬಳಗವನ್ನು ಕರೆಯುವ ರೀತಿ ಇದ್ದ ಲಂಬಾಣಿ ಸಮಾಜ ಪ್ರಸ್ತುತ ಕವಲು ದಾರಿ ಹಿಡಿದಿದೆ. ಪಾಶ್ಚಿಮಾತ್ಯರನ್ನು ಒಲಿಸಿಕೊಳ್ಳುವ ಸಲುವಾಗಿ ಮತಾಂತರದ ಪ್ರವೃತ್ತಿ ಹೆಚ್ಚಾಗುತ್ತಿದೆ. ನಮ್ಮ ಭಾಷೆ, ಸಂಸ್ಕೃತಿಯನ್ನು ಮರೆಯುವಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದು ಅವರು ಭಾವುಕರಾದರು.

‘ತಾಂಡಾಗಳಲ್ಲಿ ಹುಟ್ಟಿ-ಬೆಳೆದು ನೌಕರಿ ಪಡೆದ ಹಾಗೂ ರಾಜಕಾರಣದ ಮೂಲಕ ಉನ್ನತ ಸ್ಥಾನ-ಮಾನ ಗಳಿಸಿಕೊಂಡವರೂ ಲಂಬಾಣಿ ಸಮಾಜವನ್ನು ಕಡೆಗಣಿಸುತ್ತಿದ್ದಾರೆ. ಅಧಿಕಾರ, ಹಣ ನೋಡಿದ ತಕ್ಷಣ ಎಲ್ಲವೂ ಮರೆತು ಹೋಗುತ್ತದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಲಂಬಾಣಿ ಸಮಾಜದಲ್ಲಿ ಕಿತ್ತು ತಿನ್ನುವ ಬಡತನದಿಂದಾಗಿ ಮಕ್ಕಳ ಮಾರಾಟ ಅಧಿಕವಾಗಿದೆ. ಈ ಪಿಡುಗು ತೊಲಗಬೇಕು. ನಮ್ಮ ಸಮಾಜ ಬಾಂಧವರು ಯುದ್ಧದಲ್ಲಿ ಹೋರಾಟ ಮಾಡಿದ ನಿಪುಣರು, ಬಲಾಢ್ಯರು.  ನಿಮ್ಮ ರಟ್ಟೆಯಲ್ಲಿ ಇರುವ ಶಕ್ತಿಯನ್ನು ಬಳಕೆ ಮಾಡಿಕೊಂಡು ದುಡಿಯಿರಿ, ಬಡತನವನ್ನು ಹೋಗಲಾಡಿಸಿ, ಮಕ್ಕಳನ್ನು ಚೆನ್ನಾಗಿ ಸಾಕಿ, ಬೆಳೆಸಿ’ ಎಂದು ಸಮಾಜದ ಜನರಿಗೆ ಕಿವಿಮಾತನ್ನು ಹೇಳಿದರು.

169 ಕೋಟಿ ಅನುದಾನ ಬೇಡಿಕೆ: ಈ ವರ್ಷದ ಬಜೆಟ್‌ನಲ್ಲಿ ಬಂಜಾರ ತಾಂಡಾ ಅಭಿವೃದ್ಧಿ ನಿಗಮಕ್ಕೆ 169 ಕೋಟಿ ರೂಪಾಯಿ ಅನುದಾನವನ್ನು ನೀಡಬೇಕು ಎನ್ನುವ ಬೇಡಿಕೆ ಇಡಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ತಾಂಡಾಗಳಲ್ಲಿ ಮೂಲ ಸೌಕರ್ಯ, ಸೇವಾಲಾಲ್ ಸಮುದಾಯ ಭವನ, ಸಾಂಪ್ರದಾಯಿಕ ಉಡುಪುಗಳ ಕಸೂತಿ ಕೇಂದ್ರಗಳನ್ನು ತೆರೆಯಲು ಸರ್ಕಾರ 80 ಕೋಟಿ ರೂಪಾಯಿ ಅನುದಾನ ನೀಡಿದೆ. ಇದರಲ್ಲಿ 60 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.ಗದಗ ಜಿಲ್ಲೆಯಲ್ಲೂ ಕಸೂತಿ ಕೇಂದ್ರವನ್ನು ತೆರೆಯಲಾಗುತ್ತದೆ. ಸ್ಥಳೀಯ ಶಾಸಕರು ಯಾವ ಪ್ರದೇಶವನ್ನು ಸೂಚಿಸುತ್ತಾರೋ ಅದನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದರು.

ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ, ಲಿಂಗಸಗೂರು ಛಾವಣಿ ವಿಜಯ ಮಹಾಂತೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ, ನಾಗಾವಿ ತಾಂಡಾದ ಜಲಶಂಕರ ಆಶ್ರಮದ ಶಂಕರಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಪ್ರದೇಶ ಲಂಬಾಣಿ ಬಂಜಾರ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಕೃಷ್ಣಾ ನಾಯಕ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ರಾಮಣ್ಣ ಲಮಾಣಿ, ಶ್ರೀಶೈಲಪ್ಪ ಬಿದರೂರ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಎಸ್.ಎನ್.ಪಾಟೀಲ, ಜಲಜಾ ನಾಯಕ್, ಮಾಜಿ ಸಚಿವ ಎಸ್.ಎಸ್. ಪಾಟೀಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚಂಬವ್ವ ಪಾಟೀಲ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಕಮಲಾಬಾಯಿ ಪೂಜಾರ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶಾರದಾ ತೋಟದ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಕಾಂತ ಖಟವಟೆ, ಟಿ.ಎಚ್. ಕಾರಭಾರಿ, ಕೆ.ಎಲ್. ಪೂಜಾರ, ಈಶಪ್ಪ ಶಿವಪ್ಪ ನಾಯಕ, ಎಚ್.ಆರ್. ನಾಯಕ. ಕೃಷ್ಣಾಜಿ ಚವ್ಹಾಣ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.