ADVERTISEMENT

ಲಕ್ಕುಂಡಿ: ಪೈಪ್‌ಲೈನ್ ಕಾಮಗಾರಿ ತಡೆಹಿಡಿದ ರೈತರು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 6:00 IST
Last Updated 17 ಅಕ್ಟೋಬರ್ 2011, 6:00 IST

ಗದಗ: ಮುನ್ಸೂಚನೆ ಇಲ್ಲದೆ ರೈತರ ಜಮೀನಿನಲ್ಲಿ ಜೆಸಿಬಿ ಯಂತ್ರದ ಮೂಲಕ ಗುಂಡಿ ತೆಗೆಯುತ್ತಿದ್ದ ಕಾರ್ಯವನ್ನು ತಡೆಹಿಡಿದ ಘಟನೆ ತಾಲ್ಲೂಕಿನ ಲಕ್ಕುಂಡಿಯಲ್ಲಿ ಶನಿವಾರ ಸಂಜೆ ನಡೆದಿದೆ.

ಬೆಂಗಳೂರಿನ ದಾಬೋಲ ಗ್ಯಾಸ್ ಕಂಪೆನಿಯ ಪೈಪ್‌ಲೈನ್ ಅಳವಡಿಕೆಗಾಗಿ ಜಮೀನುಗಳಲ್ಲಿ ಗುಂಡಿ ತೆಗೆಯಲಾಗುತ್ತಿತ್ತು. ಇದರಿಂದ ಆಕ್ರೋಶಗೊಂಡ ರೈತರು ಯಂತ್ರಗಳನ್ನು ತಡೆಹಿಡಿದರು. ಕೊನೆಗೆ ಕಂಪೆನಿಯವರು ಕಾಮಗಾರಿಯನ್ನು ಅರ್ಧಕ್ಕೆ ಬಿಟ್ಟು ಕಾಲ್ಕಿತ್ತರು.

ಲಕ್ಕುಂಡಿ ಗ್ರಾಮದ ಅಂದಾಜು 80 ಎಕರೆ ಭೂಮಿಯಲ್ಲಿ  ಈ ಯೋಜನೆ ಕಾಮಗಾರಿ ನಡೆಯುತ್ತಿದೆ. ಕಳೆದ ತಿಂಗಳಲ್ಲಿ ಕೇವಲ ಒಂದು ನೋಟಿಸ್ ಮಾತ್ರ ನೀಡಿ ಈಗ ಯಾವುದೇ ಪರಿಹಾರ ನೀಡದೆ ಕಾಮಗಾರಿ ಆರಂಭಿಸಿ ಬಿ.ಟಿ ಹತ್ತಿ, ಸೂರ್ಯಕಾಂತಿ, ಉಳ್ಳಾಗಡ್ಡಿ ಬೆಳೆಯನ್ನು ಹಾನಿಮಾಡಿದ್ದಾರೆ ಎಂದು ರೈತರು ಆರೋಪಿಸಿದರು.

ಈ ವಿಚಾರವಾಗಿ ಗ್ರಾಮದಲ್ಲಿ ಸಭೆ ಸೇರಿದ ರೈತರು ಹಾನಿಗೊಳಗಾದ ಬೆಳೆಗೆ ಪರಿಹಾರ ಹಾಗೂ ವಶಪಡಿಸಿಕೊಳ್ಳುತ್ತಿರುವ ಭೂಮಿಗೆ ರೈತರು ನಿಗದಿಪಡಿಸುವ ಬೆಲೆಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. 

ಸಭೆಯಲ್ಲಿ ಶಿವಪ್ಪ ಮಂಗಳೂರ, ಬಸವಣ್ಣೆಪ್ಪ ಬಳಿಗೇರ, ಮಲ್ಲಪ್ಪ ಕಮತರ,  ಈರಪ್ಪ ಕಮತರ, ಮರಿಯಪ್ಪ ವಡ್ಡರ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.