ಮೆಣಸಗಿ (ತಾ.ರೋಣ): `ಪವಾಡ ಪುರುಷ~ ಎಂದೇ ಹೆಸರಾದ ಇಲ್ಲಿಯ ಲಿಂಗ ಬಸವೇಶ್ವರರ ರಥೋತ್ಸವ ಗುರುವಾರ ಸಂಜೆ ಸಂಭ್ರಮದಿಂದ ನಡೆಯಿತು. ಗದಗ, ಧಾರವಾಡ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ರಸ್ತೆಯ ಎರಡೂ ಬದಿ ನಿಂತಿದ್ದ ಅಸಂಖ್ಯ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಧನ್ಯತಾಭಾವ ಅನುಭವಿಸಿದರು. ಜಾತ್ರೆಯ ಅಂಗವಾಗಿ ಮಕ್ಕಳ ಆಟಿಕೆ ಸಾಮಾನುಗಳು, ಬೆಂಡು-ಬತ್ತಾಸುಗಳ ಮಾರಾಟದ ಭರಾಟೆ ಜೋರಾಗಿತ್ತು.
ಲಿಂಗ ಬಸವೇಶ್ವರರು `ಮಣ್ಣಿನ ಗೋಡೆ~ಯನ್ನು ನಡೆಸಿದ್ದಲ್ಲದೆ, ಜಲವನ್ನೇ ತುಪ್ಪವನ್ನಾಗಿ ಪರಿವರ್ತಿಸಿ ಭಕ್ತರಿಗೆ ಹಂಚುವ ಮೂಲಕ ಪವಾಡ ಮಾಡಿದ್ದರು ಎನ್ನುವ ಪ್ರತೀತಿ ಇದೆ. ಆದ್ದರಿಂದಲೇ ಅವರನ್ನು `ಪವಾಡ ಪುರುಷ~ ಎಂದೇ ಕರೆಯ ಲಾಗುತ್ತಿತ್ತು. ಸುತ್ತಲಿನ ಜಿಲ್ಲೆಗಳಾದ್ಯಂತ ಲಿಂಗ ಬಸವೇಶ್ವರರ ಅಸಂಖ್ಯ ಭಕ್ತರು ಇದ್ದಾರೆ.
ಮೆಣಸಗಿಯನ್ನೇ ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡರೂ ಕೊನೆಗೆ ಅವರು ಲಿಂಗೈಕ್ಯರಾಗಿದ್ದು ಬಾದಾಮಿ ತಾಲ್ಲೂಕು ಸುಳ್ಳ ಗ್ರಾಮದಲ್ಲಿ. ಇಂತಹ ಮಹಾ ಚೇತನವನ್ನು ಆದಿ ಪುರುಷನನ್ನಾಗಿ ಹೊಂದಿದ ಲಿಂಗ ಬಸವೇಶ್ವರ ಮಠವು ಪಂಚ ಮಠವಾಗಿ ರೂಪುಗೊಂಡಿದೆ. ಮೆಣಸಗಿ, ಭೋಪಳಾಪುರ, ಗುಳಗಂದಿ, ಬೆಳವಣಕಿವರೆಗೆ ತನ್ನ ಕಾರ್ಯಕ್ಷೇತ್ರ ಹೊಂದಿದೆ.
10ರಂದು ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ನಡೆಯಲಿದ್ದು, 11ರಂದು ಸಾಮೂಹಿಕ ವಿವಾಹ ಸಮಾರಂಭವನ್ನು ಸಂಘಟಿಸಲಾಗಿದೆ ಎಂದು ಮಠದ ಮುಖ್ಯಸ್ಥರಾದ ಮುದಿಯಪ್ಪಯ್ಯಸ್ವಾಮಿ ಹಿರೇಮಠ ಮತ್ತು ಅಶೋಕ ಚೌಕಿಮಠ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.