ಗಜೇಂದ್ರಗಡ: ಶಾಸಕರಿಗಿಲ್ಲದ ನಿಗಮ ಮಂಡಳಿ ಅಧ್ಯಕ್ಷಗಿರಿ ಒಲಿಸಿಕೊಳ್ಳಲು ವಿವಿಧ ಸಮುದಾಯಗಳ ಮುಖಂಡರು ಶಾಸಕರ ದುಂಬಾಲು ಬಿದ್ದಿದ್ದಾರೆ!
ಸುದೀರ್ಘ ರಾಜಕೀಯ ವನವಾಸ ಅನುಭವಿಸಿದ್ದ ಮಾಜಿ ಶಾಸಕ ಜಿ.ಎಸ್.ಪಾಟೀಲ ಈಗ ಹಾಲಿಯಾಗಿದ್ದಾರೆ.
ರಾಜಕೀಯ ಅಜ್ಞಾತ ವಾಸದಿಂದ ಹೊರ ಬರಬೇಕಾದರೆ ಶಾಸಕ ಜಿ.ಎಸ್.ಪಾಟೀಲರು ಗೆಲ್ಲಲೇ ಬೇಕಿತ್ತು. ಆದರೆ, ಪ್ರಬಲ ಸಮುದಾಯಕ್ಕೆ ಸೇರದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲರಿಗೆ ಕಾಂಗ್ರೆಸ್ ಪಕ್ಷದ ಬಲವೊಂದರಿಂದ ಗೆಲುವು ಸುಲಭವಾಗಿರಲಿಲ್ಲ.
ಮತ ಕ್ಷೇತ್ರದ ಜಾತಿವಾರು ಸಮೀಕ್ಷೆ ನಡೆಸಿದ ಪಾಟೀಲರಿಗೆ ಮತ ಕ್ಷೇತ್ರದ ಕೆಲ ಪ್ರಬಲ ಸಮುದಾಯಗಳನ್ನು ಓಲೈಸಬೇಕಾದ ಅನಿವಾರ್ಯತೆ ಎದುರಾಯಿತು. ಹೀಗಾಗಿಯೇ ಪಾಟೀಲರು ಮತ ಕ್ಷೇತ್ರದ ಎರಡನೇ ಪ್ರಬಲ ಸಮುದಾಯವೊಂದರ ಮತಗಳನ್ನು ಪಡೆಯುವುದಕ್ಕಾಗಿ ಆ ಸಮುದಾಯದ ಮುಖಂಡರೊಬ್ಬರಿಗೆ ನಿಗಮ ಮಂಡಳಿಯ ಅಧ್ಯಕ್ಷಗಿರಿ ಒಲಿಸಿಕೊಡುವುದಾಗಿ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದರು.
ಇದನ್ನೇ ಅಸ್ತ್ರವನ್ನಾಗಿಸಿಕೊಂಡ ಮತ ಕ್ಷೇತ್ರದ ಇನ್ನುಳಿದ ಕೆಲ ಪ್ರಬಲ ಸಮುದಾಯಗಳು `ನಮ್ಮ ಸಮಾಜದ ಮುಖಂಡರೊಬ್ಬರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡಿಸಿ' ಎಂದೂ ಶಾಸಕರ ದುಂಬಾಲು ಬಿದ್ದಿವೆ.
ಪ್ರಹಸನ: ಅಧಿವೇಶನ ಮುಗಿಯುವವರೆಗೂ ತಟಸ್ಥ ನಿಲುವು ತಾಳಿದ್ದ ಮತ ಕ್ಷೇತ್ರದ ಪ್ರಬಲ ಸಮುದಾಯಗಳಾದ ಕುರುಬ, ಮುಸ್ಲಿಂ, ಗಾಣಿಗ, ರೆಡ್ಡಿ ಬಣಜಿಗ ಸಮುದಾಯಗಳು `ನಿಮ್ಮ ಗೆಲುವಿಗೆ ನಮ್ಮ ಸಮುದಾಯವೂ ಶ್ರಮಿಸಿದೆ. ಹೀಗಾಗಿ ನಮ್ಮ ಸಮುದಾಯದ ಮುಖಂಡರೊಬ್ಬರಿಗೆ ನಿಗಮ ಮಂಡಳಿ ಕೊಡಿಸಿ' ಎಂದು ಶಾಸಕ ಜಿ.ಎಸ್.ಪಾಟೀಲರಿಗೆ ಮನವಿ ಕೊಟ್ಟಿದ್ದಾರೆ. ಮತ ಕ್ಷೇತ್ರದ ಪ್ರಬಲ ಸಮುದಾಯಗಳು ನಿಗಮ ಮಂಡಳಿ ಅಧ್ಯಕ್ಷರಿಗಿರಿ ಒಲಿಸಿಕೊಳ್ಳುವುದಕ್ಕಾಗಿ ನಡೆಸಿರುವ ಪ್ರಯತ್ನವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ ಉಳಿದ ಸಣ್ಣ-ಪುಟ್ಟ ಸಮುದಾಯಗಳು `ನಮ್ಮ ಸಮುದಾಯಕ್ಕೂ ನಿಗಮ ಮಂಡಳಿ ಕೊಡಿ' ಎಂದು ನಿತ್ಯ ಶಾಸಕರ ಮನೆ ಎಡತಾಕುತ್ತಿವೆ. ಇದಕ್ಕೆ ಪುಷ್ಠಿ ಎನ್ನುವಂತೆ ಕಳೆದ ಕೆಲ ದಿನಗಳ ಹಿಂದೆ ಗಜೇಂದ್ರಗಡದ ಮಾಜಿ ಸಂಸದರೊಬ್ಬರ ಆಪ್ತರಿಗೆ ನಿಗಮ ಮಂಡಳಿ ನೀಡಿ ಎಂದು ಗಜೇಂದ್ರಗಡದ ಕಾಂಗ್ರೆಸ್ ಮುಖಂಡರು ಶಾಸಕ ಜಿ.ಎಸ್.ಪಾಟೀಲರನ್ನು ಭೇಟಿ ಮಾಡಿದಾಗ, `ಯಾರಿಗೆ ನಿಗಮ ಮಂಡಳಿ ನೀಡಬೇಕು ಎಂಬುದು ನನಗೆ ಗೊತ್ತಿದೆ. ಪದೇ ಪದೇ ನಿಗಮ ಮಂಡಳಿ ಇವರಿಗೆ ನೀಡಿ... ಎಂದು ಯಾರನ್ನು ನನ್ನ ಬಳಿ ಕರೆದುಕೊಂಡು ಬರಬೇಡಿ' ಎಂದು ಗದರಿಸಿ ಕಳುಹಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರುಗಳೇ ಹೇಳುತ್ತಿದ್ದಾರೆ. ಸದ್ಯ ನಿಗಮ ಮಂಡಳಿ ಪ್ರಹಸನ ಶಾಸಕ ಜಿ.ಎಸ್.ಪಾಟೀಲರಿಗೆ ಮಾತ್ರ ತಲೆನೋವಾಗಿ ಪರಿಣಮಿಸಿದೆ.
ಕಗ್ಗಂಟು: 2001 ರಲ್ಲಿ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ಶಾಸಕ ಜಿ.ಎಸ್.ಪಾಟೀಲ ತಮ್ಮ ಪಕ್ಷದ ಹಾಗೂ ಕುರುಬ ಸಮುದಾಯದ ಪ್ರಮುಖ ನಾಯಕ ವಿ.ಆರ್.ಗುಡಿಸಾಗರ್ ಅವರನ್ನು 2003 ರಲ್ಲಿ ಎಂ.ಎಸ್.ಐ.ಎಲ್ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸುವಲ್ಲಿ ಯಶಸ್ವಿಯಾದರು.
ರೋಣ ಮತ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗೆ ಕುರುಬ ಸಮುದಾಯದ ಕೃಪಾ ಕಟಾಕ್ಷ ಬೇಕೇ ಬೇಕು. ಆದರೆ, 2004, 2008ರಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ ಅವರಿಗೆ ಒಲಿದಿದ್ದ ಕುರುಬ ಸಮಾಜ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಜಿ.ಎಸ್.ಪಾಟೀಲರ ಬೆನ್ನಬಿದ್ದಿತ್ತು.
ಹೀಗಾಗಿಯೇ ಸುದೀರ್ಘ ರಾಜಕೀಯ ವನವಾಸದ ಬಳಿಕ ಮಾಜಿಯಾಗಿದ್ದವರು ಹಾಲಿಯಾದರು. ಹೀಗಾಗಿ ಸದ್ಯ ಶಾಸಕ ಜಿ.ಎಸ್.ಪಾಟೀಲ ಅವರು ಕೊಟ್ಟ ಮಾತಿನಂತೆ ಕುರುಬ ಸಮುದಾಯಕ್ಕೆ ಯಾವುದಾದರೊಂದು ನಿಗಮ ಮಂಡಳಿ ಒಲಿಸಿಕೊಸಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ವಾಸಣ್ಣ ಕುರುಡಗಿ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಜಿ.ಎಸ್.ಗಡ್ಡದೇವರಮಠ, ರವಿ ದಂಡಿನ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದ ಮೂಲಕಗಳ ಪ್ರಕಾರ ಜಿಲ್ಲೆಗೆ ಎರಡು ನಿಗಮ ಮಂಡಳಿಗಳು ಲಭ್ಯವಾಗಬಹುದು ಎನ್ನಲಾಗುತ್ತಿದೆ.
ನಾ ಮುಂದು... ತಾ ಮುಂದು...
ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ರೋಣ ವಿಧಾನ ಸಭೆ ಕ್ಷೇತ್ರದಲ್ಲಿ ವಿವಿಧ ಸಮುದಾಯಗಳ ಮುಖಂಡರುಗಳು ನಿಗಮ ಮಂಡಳಿ ಅಧ್ಯಕ್ಷಗಿರಿ ಒಲಿಸಿಕೊಳ್ಳಲು ನಾ ಮುಂದು... ತಾ ಮುಂದು... ಎನ್ನುತ್ತಿರುವುದು ಹಾಲಿ ಶಾಸಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಆದರೆ, ಬಲಿಷ್ಠ ಸಮುದಾಯಗಳು ನಿಗಮ ಮಂಡಳಿ ಅಧ್ಯಕ್ಷಗಿರಿಗೆ ದುಂಬಾಲು ಬಿದ್ದಿರಿವುದು ಕೆಲ ಸಮುದಾಯಗಳ ಕೆಣ್ಣು ಕೆಂಪಾಗಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.