ADVERTISEMENT

ಶಿಕ್ಷಣದಿಂದ ಮಾತ್ರ ಗ್ರಾಮೀಣ ಅಭಿವೃದ್ಧಿ: ಸಚಿವ ಕಳಕಪ್ಪ ಬಂಡಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 6:00 IST
Last Updated 17 ಆಗಸ್ಟ್ 2012, 6:00 IST

ಗಜೇಂದ್ರಗಡ: ಶಿಕ್ಷಣದಿಂದ ಮಾತ್ರ ಗ್ರಾಮೀಣ ಪ್ರದೇಶಗಳ ಸರ್ವಾಗೀಂಣ ಅಭಿವೃದ್ದಿ ಸಾಧ್ಯ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಜಾರಿಗೊಳಿಸಿದ ಶೈಕ್ಷಣಿಕ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾ ಉಸ್ತು ವಾರಿ ಸಚಿವ ಕಳಕಪ್ಪ ಬಂಡಿ ಹೇಳಿದರು.

ಇಲ್ಲಿಗೆ ಸಮೀಪದ ಇಟಗಿ ಗ್ರಾಮದ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹತ್ತಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಿವೆ. ಹೀಗಿದ್ದರೂ ಗ್ರಾಮೀಣ ಪ್ರದೇಶದ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಹಾಜರಾತಿ ಕೊರತೆಯನ್ನು ಎದುರಿಸುತ್ತಿರುವುದು ನೋವಿನ ಸಂಗತಿ ಎಂದರು.

ಸರ್ಕಾರಿ ಶಿಕ್ಷಣ ಸಂಸ್ಥೆಗಳಿಂದ ವಂಚಿತಗೊಂಡು ಖಾಸಗಿ ಶಿಕ್ಷಣ ಸಂಸ್ಥೆಗಳ ಅಬ್ಬರಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದ ರೋಣ ತಾಲ್ಲೂಕು ಶೈಕ್ಷಣಿಕವಾಗಿ ತೀರಾ ಹಿಂದುಳಿದಿತ್ತು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದುಬಾರಿ ಮೊತ್ತದ ಪ್ರವೇಶ ಶುಲ್ಕ ನೀಡಿ ಶಿಕ್ಷಣ ಪಡೆಯಲು ಸಾಧ್ಯವಾಗದ ಅಸಂಖ್ಯಾತ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿಯೇ ಓದನ್ನು ಮೊಟಕುಗೊಳಿಸಿ, ಭವಿಷ್ಯತ್ತಿನ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ವಿಫಲವಾದವರ ಸಂಖ್ಯೆಯೇ ಅಧಿಕ ಎಂದರು.

ಕಳೆದ ಆರೂವರೆ ದಶಕದಲ್ಲಿ ರೋಣ ತಾಲ್ಲೂಕಿನಲ್ಲಿ ತಲೆ ದೋರಿದ್ದ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಕೊರಗನ್ನು ನೀಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಪರಿಣಾಮ 2004 ರಿಂದ ಇಲ್ಲಿಯ ವರೆಗೆ 24 ಪ್ರೌಢ ಶಾಲೆ, 8 ಪದವಿ ಪೂರ್ವ ಕಾಲೇಜ, 1 ಪದವಿ ಕಾಲೇಜ, 1 ಡಿಪ್ಲೋಮಾ ಕಾಲೇಜ, ಸಿಬಿಎಸ್ಸಿ ಮಾದ ರಿಯ ಆದರ್ಶ ಮಹಾವಿದ್ಯಾಲಯ ಹಾಗೂ ಕಿತ್ತೂರ ಚನ್ನಮ್ಮ ಮಹಾವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ ಎಂದರು.

ಸರ್ಕಾರಿ ಶಿಕ್ಷಣ ಸ್ಥಾಪನೆಯ ಜೊತೆಗೆ ಸ್ವಂತ ಕಟ್ಟಡವಿಲ್ಲ ಎಂಬ ಕೊರಗನ್ನು ನಿವಾರಿಸಲಾಗಿದೆ. 8 ಕೋಟಿ ವೆಚ್ಚದಲ್ಲಿ ಡಿಪ್ಲೋಮಾ ಕಾಲೇಜು ಕಟ್ಟಡ, 69 ಲಕ್ಷ ವೆಚ್ಚದಲ್ಲಿ ವಿಜ್ಞಾನ ಪದವಿ ಕಾಲೇಜು ಕಟ್ಟಡ, 62 ಲಕ್ಷ ವೆಚ್ಚದಲ್ಲಿ ಪದವಿ ಪೂರ್ವ ಕಾಲೇಜು ಕಟ್ಟಡ ಸೇರಿದಂತೆ ಪ್ರತಿಯೊಂದು ಸರ್ಕಾರಿ ಶಿಕ್ಷಣ ಸಂಸ್ಥೆಗೂ ಸ್ವಂತ ಕಟ್ಟಡ ನಿರ್ಮಿಸಲಾಗಿದೆ ಎಂದರು.

ಜಿ.ಪಂ ಅಧ್ಯಕ್ಷೆ ಬಸವರಾಜೇಶ್ವರಿ ಪಾಟೀಲ, ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ದೊಡ್ಡಗೌಡರ, ಹೊಳೆ ಆಲೂರ ಎಪಿಎಂಸಿ ಅಧ್ಯಕ್ಷ ಅಮರೇಶ ಅರಳಿ,
ರೋಣ ಮತ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚನ್ನು ವಣಗೇರಿ ಮುಂತಾದವರು ಉಪಸ್ಥಿತರ್ದ್ದಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.