ADVERTISEMENT

ಶ್ವೇತಾ ಬೆಟ್ಟಣ್ಣವರ ಸಾಧನೆಗೆ ಅಡ್ಡಿಯಾಗದ ಅಂಧತ್ವ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 9:02 IST
Last Updated 3 ಡಿಸೆಂಬರ್ 2013, 9:02 IST

ಮುಂಡರಗಿ: ಅಂಗವೈಕಲ್ಯ ಶಾಪವೆಂದು ಭಾವಿಸದೆ ಸವಾಲಾಗಿ ಸ್ವೀಕರಿಸಿ ಶ್ರಮಪಟ್ಟರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು ತೋರಿಸಿಕೊಟ್ಟ ಹಲವು ಸಾಧಕರು  ಕಣ್ಮುಂದೆ ಇದ್ದಾರೆ. ಮುಂಡರಗಿ ತಾಲ್ಲೂಕಿನ ಸಿಂಗಟಾಲೂರ ಗ್ರಾಮದ ಶ್ವೇತಾ ರೇಣುಕಾ ಬೆಟ್ಟಣ್ಣವರ ಹುಟ್ಟುತ್ತಲೇ ಅಂಧರು. ಕ್ರೀಡೆಯಲ್ಲಿ ಅಪ್ರತಿಮ ಸಾಧನೆ ಮಾಡಿ ಕೈ ಕಾಲು ಗಟ್ಟಿಯಾಗಿರುವವರು ಹುಬ್ಬೇರಿಸುವಂತೆ  ಸಾಧನೆ ಮಾಡಿದ್ದಾಳೆ.  ಈ ಮೂಲಕ ಕಣ್ಣಿಲ್ಲದವರೂ ಜೀವನದಲ್ಲಿ ಏನನ್ನಾದರು ಸಾಧಿಸಬಲ್ಲರು ಎನ್ನುವುದನ್ನು ತೋರಿಸಿಕೊಟ್ಟಿದ್ದಾಳೆ.

ಮುಂಡರಗಿ ತಾಲ್ಲೂಕಿನ ಸಿಂಗಟಾಲೂರ ಎಂಬ ಕುಗ್ರಾಮದ ರೇಣುಕಪ್ಪ ಹಾಗೂ ಈರಮ್ಮ ದಂಪತಿ  ಪುತ್ರಿ ಶ್ವೇತಾ ಹುಟ್ಟು ಕುರುಡಳು. ಬೇಸರ ಪಟ್ಟುಕೊಳ್ಳದೇ ಓಣಿಯ ಇತರ ಮಕ್ಕಳೊಡನೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ತೆರಳಿ ಆರನೇ ತರಗತಿವರೆಗೆ ಓದಿದಳು. ಬ್ರೈಲ್ ಲಿಪಿಯು ಶಾಲೆಯಲ್ಲಿ ಲಭ್ಯವಿಲ್ಲದ ಕಾರಣ ಶಾಲೆಯನ್ನು ಅರ್ಧಕ್ಕೆ ಮೊಟುಕುಗೊಳಿಸಿ ಕ್ರೀಡೆಯಲ್ಲಿ ಏನನ್ನಾದರೂ ಸಾಧಿಸಲು ನಿರ್ಧರಿಸಿದಳು.

ಅಂಧತ್ವ ಹೊರತುಪಡಿಸಿ ದೈಹಿಕವಾಗಿ ಆರೋಗ್ಯವಾಗಿದ್ದ ಶ್ವೇತಾ ಗುಂಡು ಎಸೆತ ಹಾಗೂ ಭಲ್ಲೆ ಎಸೆತ ಅಭ್ಯಾಸ ಮಾಡಲು ಆರಂಭಿಸಿದಳು. ಸಿಂಗಟಾಲೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಿಂದ ಕಬ್ಬಿಣದ ಗುಂಡು ಹಾಗೂ ಭಲ್ಲೆಗಳನ್ನು ಪಡೆದು ತಂದೆ ರೇಣುಕಪ್ಪ ಅವರೇ ಮಗಳಿಗೆ ಗುಂಡು ಹಾಗೂ ಭಲ್ಲೆ ಎಸೆತಗಳನ್ನು ಕಲಿಸಿದರು.

ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 14 ಮತ್ತು 17 ವರ್ಷದೊಳಗಿನ ಅಂಗವಿಕಲ  ಶಾಲಾ ಮಕ್ಕಳ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ನಲ್ಲಿ  ಗುಂಡು ಎಸೆತ   ವಿಭಾಗದಲ್ಲಿ ಶ್ವೇತಾ ಪ್ರಥಮ ಸ್ಥಾನ ಪಡೆದು ಗ್ರಾಮಕ್ಕೆ ಕೀರ್ತಿ ತಂದಳು.

ಸಾಧಿಸಬೇಕೆನ್ನುವ ಮಹತ್ವಾಂಕ್ಷೆ ಹೊಂದಿರುವ ಶ್ವೇತಾಳಿಗೆ ಸೂಕ್ತ ತರಬೇತಿ ಹಾಗೂ ಸೌಲಭ್ಯ ದೊರೆತರೆ ಉತ್ತಮ ಕ್ರೀಡಾಪಟುವಾಗಲಿದ್ದಾಳೆ. ಬ್ರೈಲ್ ಲಿಪಿಯ ಸಹಾಯದಿಂದ ಮಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡ­ಬೇಕೆನ್ನುವ ಆಸೆ ಹೊಂದಿರುವ ಶ್ವೇತಾಳ ಪೋಷಕರಿಗೂ ಮಾಹಿತಿ ಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.