ADVERTISEMENT

ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 12:10 IST
Last Updated 10 ಮಾರ್ಚ್ 2011, 12:10 IST

ಶಿರಹಟ್ಟಿ: ‘ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಭೆ ಕುರಿತು ನಿರ್ಲಕ್ಷ್ಯ ಭಾವನೆ ಹೊಂದಿರುವ ಎಲ್ಲ ತಾಲ್ಲೂಕು ಮಟ್ಟದ ಅಧಿಕಾರಿಗಳ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ನಿಂಬಣ್ಣ ಮಡಿವಾಳರ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಒತ್ತಾಯಿಸಿದರು.

ಮಂಗಳವಾರ ಸ್ಥಳಿಯ ಸಾಮರ್ಥ್ಯಸೌಧ ಭವನದಲ್ಲಿ ಜರುಗಿದ ತಾ.ಪಂ. ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಬಾರಿ ಸಭೆಗೆ ಗೈರು ಹಾಜರಾಗುವುದು ಕೆಲವು ಅಧಿಕಾರಿಗಳಿಗೆ ರೂಢಿಯಾಗಿದೆ. ಇದು ಹೀಗೆ ಮುಂದುವರಿದಲ್ಲಿ ಜನತೆಯ ಸಮಸ್ಯೆಗಳನ್ನು ಪರಿಹರಿಸುವುದು ಯಾವಾಗ’ ಎಂದು ಪ್ರಶ್ನಿಸಿದರು.

‘ಸ್ಥಳೀಯ ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ ಮಾತ್ರೆಗಳು ಲಭ್ಯವಿದ್ದರೂ ಖಾಸಗಿ ಅಂಗಡಿಗಳಲ್ಲಿ ಮಾತ್ರೆಗಳನ್ನು ಬರೆದು ಕೊಡುತ್ತಿರುವ ಸಂಪ್ರದಾಯ ಮುಂದುವರಿದಿದೆ.ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ವೈದ್ಯರಿಗೆ ಕನ್ನಡ ಭಾಷೆ ಬರುತ್ತಿಲ್ಲ. ಇದರಿಂದ ಗ್ರಾಮೀಣ ಭಾಗದ ಜನತೆಗೆ ತೀವ್ರ ತೊಂದರೆಯಾಗಿದೆ’ ಎಂದು ಮಡಿವಾಳರ ಸಭೆಯಲ್ಲಿ ಪ್ರಸ್ಥಾಪಿಸಿದರು.

‘ತಾಲ್ಲೂಕಿನ ಸೂರಣಗಿ, ಕೊಂಚಿಗೇರಿ, ಬಾಲೇಹೊಸೂರ, ತಾರಿಕೊಪ್ಪ, ಹೆಬ್ಬಾಳ, ಕೊಗನೂರ, ಛಬ್ಬಿ, ಮಾಗಡಿ, ಯಳವತ್ತಿ, ಬಡ್ನಿ ಮತ್ತಿತರ ಕೆಲವು ಗ್ರಾಮಗಳಲ್ಲಿ ಅರಣ್ಯ ಇಲಾಖೆ ಆಶ್ರಯದಲ್ಲಿ ತಗ್ಗುಗಳನ್ನು ತೋಡಲಾಗಿದ್ದು, ಸಸಿಗಳನ್ನು ಹಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು’ ಎಂದು  ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಖಾಜಿ ಸಭೆಗೆ ಮಾಹಿತಿ ನೀಡಿದರು.

ಪಡಿತರ ಚೀಟಿಗಳಲ್ಲಿ ಭಾವಚಿತ್ರ ಇಲ್ಲದಿರುವ ಕಾರ್ಡಗಳಿಗೆ ನ್ಯಾಯಬೆಲೆ ಅಂಗಡಿಯವರು ಆಹಾರ ಧಾನ್ಯವನ್ನು ನೀಡಲು ನಿರಾಕರಿಸುತ್ತಿದ್ದು, ಇದರಿಂದ ಕೆಲ ಬಡಜನತೆಗೆ ತೀವ್ರ ತೊಂದರೆಯಾಗಿದೆ. ಅವರಿಗೆ ಪಡಿತರ ವಿತರಣೆ ಮಾಡುವ ವ್ಯವಸ್ಥೆಯನ್ನು ಇಲಾಖೆ ಅಧಿಕಾರಿಗಳು ಮಾಡಬೇಕೆಂದು ಮಡಿವಾಳರ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರು.ಬಡಜನತೆಗೆ ತಲುಪಬೇಕಾದ ಕಾರ್ಡ್‌ಗಳು ಶ್ರೀಮಂತರ ಪಾಲಾಗಿದ್ದು, ಈ ಕುರಿತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

ತಾ.ಪಂ. ಅಧ್ಯಕ್ಷ ಶಿವನಗೌಡರ ಕಂಠಿಗೌಡರ, ಉಪಾಧ್ಯಕ್ಷೆ ಗಂಗವ್ವ ಈಶ್ವರಪ್ಪ ಲಮಾಣಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.  ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಿ. ಮೋಹನ ಸ್ವಾಗತಿಸಿದರು. ಎಸ್.ಬಿ. ಚವಡಿ ವಂದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.