ADVERTISEMENT

ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 6:20 IST
Last Updated 21 ಫೆಬ್ರುವರಿ 2012, 6:20 IST

ಗದಗ: ಮಹಿಳೆಯರು ಜೀವನದಲ್ಲಿ ಎದುರಾಗುವ ಸಮಸ್ಯೆ, ದೌರ್ಜನ್ಯಗಳನ್ನು ಧೈರ್ಯದಿಂದ ಎದುರಿಸಬೇಕು ಎಂದು ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶ ಆರ್.ಜೆ. ಸತೀಶಸಿಂಗ್ ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಶಿಶು ಅಭಿವೃದ್ಧಿ ಯೋಜನೆಯಡಿ ಈಚೆಗೆ ನಿವೃತ್ತ ನೌಕರರ ಸಂಘದ ಸಭಾಂಗಣದಲ್ಲಿ ನಡೆದ `ಕಾನೂನು ಸಾಕ್ಷರತಾ ರಥ~ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರದಂತೆ. ಮಕ್ಕಳಿಗೆ ಆಸ್ತಿ ಮಾಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ. ಮಹಿಳೆಯರ ಮೇಲೆ ನಡೆಯುವ ಶೋಷಣೆ ನಿಲ್ಲಿಸಲು ಸಾಕ್ಷರತೆ ಹಾಗೂ ಕಾನೂನು ಅರಿವು ಅಗತ್ಯ ಎಂದು ಹೇಳಿದರು.

ವಕೀಲರಾದ ಸುಮಾ ಶ್ರೀಗಿರಿ ಅವರು `ಕೌಟುಂಬಿಕ ದೌರ್ಜನ್ಯ ತಡೆ ನಿಷೇಧ ಕಾಯ್ದೆ~ ಕುರಿತು ಉಪನ್ಯಾಸ ನೀಡಿ, ಸಮಸ್ಯೆಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧವಾಗುತ್ತದೆ. ಪ್ರತಿಯೊಂದು ಸಮಸ್ಯೆಗೆ ಪರಿಹಾರವಿದೆ. ಅದನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಮಹಿಳೆಯರು ತಮ್ಮ ಸಮಸ್ಯೆಗಳಿಗೆ ಶಿಶು ಅಭಿವೃದ್ಧಿ ಯೋಜನೆ ಇಲಾಖೆಯಲ್ಲಿನ ಉಚಿತ ಕಾನೂನು ಸಲಹಾ ಕೇಂದ್ರಕ್ಕೆ ಭೇಟಿ ನೀಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

  ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಎಂ.ಎಸ್. ಪಾಟೀಲ, ನ್ಯಾಯಾಧೀಶರಾದ ಉಮೇಶ ಮೂಲಿಮನಿ, ಎಲ್.ಆರ್. ಕುರಣೆ, ಕಾವೇರಿ ಹಾಗೂ ನಗರಸಭೆ ಸದಸ್ಯ ಸದಾನಂದ ಪಿಳ್ಳಿ ಹಾಜರಿದ್ದರು. ಭಾರತಿ ಶೆಲವಡಿ ಪ್ರಾರ್ಥಿಸಿದರು. ಆರ್.ಬಿ. ಚಳ್ಳಮರದ ಸ್ವಾಗತಿಸಿದರು. ಎಸ್.ವಿ. ಕಬಾಡಿ ಕಾರ್ಯಕ್ರಮ ನಿರೂಪಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.