ADVERTISEMENT

ಸಮುದಾಯಗಳ ಅಭಿವೃದ್ಧಿಗೆ ಶಿಕ್ಷಣ ಅವಶ್ಯ: ಹಿರೇಮನಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 4:59 IST
Last Updated 24 ಜೂನ್ 2013, 4:59 IST

ಗಜೇಂದ್ರಗಡ: ಶ್ರೇಣಿಕೃತ ಸಮಾಜದಲ್ಲಿ ಸಮುದಾಯಗಳ ಅಭಿವೃದ್ಧಿಗೆ ಶಿಕ್ಷಣ ಅವಶ್ಯ. ಈ ಹಿನ್ನೆಲೆಯಲ್ಲಿ ಪಾಲಕರು ತಮ್ಮ ಕಷ್ಟ-ಕಾರ್ಪಣ್ಯಗಳನ್ನು ಬದಿಗಿಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗುವುದು ಸೂಕ್ತ ಎಂದು ಅನ್ನದಾನೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಅಧ್ಯಕ್ಷ ಎಸ್.ಎಲ್. ಹಿರೇಮನಿ ಸಲಹೆ ನೀಡಿದರು.

ನಗರದ ರೋಣ ರಸ್ತೆಯಲ್ಲಿನ ಅನ್ನದಾನೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಉಜ್ವಲಗೊಳಿಸುವ ಮಹದಾಸೆಯಿಂದ ಸರ್ಕಾರಗಳು ಸಾಕಷ್ಟು ಸರಕಾರಿ ಶಿಕ್ಷಣ ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ನಿಲಯಗಳ ಸ್ಥಾಪನೆಗೆ ಆದ್ಯತೆ ನೀಡಿವೆ. ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದು ಸೂಕ್ತ ಎಂದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿಯೂ ಗ್ರಾಮೀಣ ಪ್ರದೇಶದ ಶೇ.40 ರಷ್ಟು ಪಾಲಕರು ಮಕ್ಕಳ ಶೈಕ್ಷಣಿಕ ಪ್ರಗತಿಯತ್ತ ಗಮನ ಹರಿಸದಿರುವುದರಿಂದಾಗಿ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಿಂದ ವಂಚಿತಗೊಂಡಿವೆ. ಹೀಗಾಗಿ ಗ್ರಾಮೀಣ ಪ್ರದೇಶದ ಪಾಲಕರು ತಮ್ಮ ಕಷ್ಟ-ಕಾರ್ಪಣ್ಯಗಳನ್ನು ಬದಿಗಿಟ್ಟು ಮಕ್ಕಳಿಗೆ ಸಮರ್ಪಕ ಶಿಕ್ಷಣ ಕೊಡಿಸಲು ಮುಂದಾಗಬೇಕು. ಅಂದಾಗ ಮಾತ್ರ ಕುಟುಂಬದ ಜತೆಗೆ ಸಮುದಾಯಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಅನಕ್ಷರತೆ ನಿವಾರಣೆಗಾಗಿ ಸರಕಾರಗಳು ಸಾಕಷ್ಟು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿವೆ.
ಹೀಗಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಅನಕ್ಷರತೆ ಸಮಸ್ಯೆ ಜೀವಂತವಾಗಿ ಉಳಿದಿದೆ. ಹೀಗಾಗಿಯೇ ಗ್ರಾಮೀಣ ಪ್ರದೇಶಗಳು ಸರ್ವಾಂಗೀಣ ಅಭಿವೃದ್ಧಿಯಿಂದ ವಂಚಿತಗೊಂಡು ಕುಗ್ರಾಮಗಳಂತೆ ನರಳುತ್ತಿವೆ. ಸುಶಿಕ್ಷಿತ ಪ್ರತಿಭಾವಂತ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿನ ಅನಕ್ಷರಸ್ಥರಿಗೆ ಬಿಡುವಿನ ಸಮಯದಲ್ಲಿ ಅಕ್ಷರ ಜ್ಞಾನವನ್ನು ನೀಡುವ ಮೂಲಕ ಗ್ರಾಮೀಣರನ್ನು ಸುಶಿಕ್ಷಿತರನ್ನಾಗಿಸಲು ಶ್ರಮಿಸಬೇಕು ಎಂದರು.

ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಪಾಲಕರ ಹಾಗೂ ಸಮಾಜ ಪಾತ್ರ ಅತ್ಯಂತ ಮಹತ್ವದಾಗಿದೆ. ಶೇ.18 ರಷ್ಟು ಪಾತ್ರವನ್ನು ಪಾಲಕರು ನಿರ್ವಹಿಸಿದರೆ, ಶೇ.82 ರಷ್ಟು ಪಾತ್ರವನ್ನು ಸಮಾಜ ನಿಭಾಯಿಸಿರುತ್ತದೆ.

ಹೀಗಾಗಿ ವಿದ್ಯಾರ್ಥಿಗಳ ಭವಿಷ್ಯತ್ತಿನಲ್ಲಿ ಉತ್ತಮ ಸಾಧನೆಗಳನ್ನು ಮಾಡಿದಾಗ ಸಮಾಜದ ಋಣ ತೀರಿಸುವ ಕಾರ್ಯಕ್ಕೆ ಮುಂದಾಗಬೇಕು. ಅಂದಾಗ ಮಾತ್ರ ವಿದ್ಯಾರ್ಥಿ ಜೀವನ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಎ.ಪಿ. ಗಾಣಗೇರ ಮಾತನಾಡಿ, ವಿದ್ಯಾರ್ಥಿಗಳ ಪಾಲಕರ ಪರಿಶ್ರಮಕ್ಕೆ ತಕ್ಕ ಓದಿನಲ್ಲಿ ತೊಡಗಬೇಕು. ಪಾಲಕರ ಪರಿಶ್ರಮವನ್ನು ಅರ್ಥ ಮಾಡಿಕೊಳ್ಳದೆ ಓದಿನಲ್ಲಿ ತೊಡಗುವ ವಿದ್ಯಾರ್ಥಿಗಳ ಓದು ಯಶಸ್ವಿಗೊಳ್ಳುವುದಿಲ್ಲ.

ಹೀಗಾಗಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಓದಿಗೆ ಮುಂದಾಗುವುದರೊಂದಿಗೆ ಪಾಲಕರ ಕನಸುಗಳನ್ನು ಸಾಕಾರಗೊಳಿಸಲು ಮುಂದಾಗಬೇಕು ಎಂದರು.

ಉಪನ್ಯಾಸಕ ಎಂ.ಎಂ. ಹೆಬ್ಬಾಳ ಉಪನ್ಯಾಸ ನೀಡಿದರು. ಗಜೇಂದ್ರಗಡ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಡಾ. ಬಿ.ವ್ಹಿ. ಕಂಬಳ್ಯಾಳ, ಎಸ್.ಎಸ್. ಪಟ್ಟೇದ, ಉಪನ್ಯಾಸಕ ಶಿವಾನಂದ ಅಂದಾನಪ್ಪನವರ, ಬಸವರಾಜ ಮಾದಿ, ಬಸವರಾಜ ಚಿನಿವಾಲರ, ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುತ್ತಣ್ಣ ಮ್ಯಾಗೇರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.