ADVERTISEMENT

ಸುಸಜ್ಜಿತ ಆಸ್ಪತ್ರೆಗೆ ಮಹಿಳಾ ವೈದ್ಯರ ಕೊರತೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 7:11 IST
Last Updated 17 ಜೂನ್ 2013, 7:11 IST
ಲಕ್ಷ್ಮೇಶ್ವರದ ಸುಸಜ್ಜಿತ ಸರ್ಕಾರಿ ಆಸ್ಪತ್ರೆ.
ಲಕ್ಷ್ಮೇಶ್ವರದ ಸುಸಜ್ಜಿತ ಸರ್ಕಾರಿ ಆಸ್ಪತ್ರೆ.   

ಲಕ್ಷ್ಮೇಶ್ವರ: ಜಿಲ್ಲೆಯ ಎರಡನೇ ದೊಡ್ಡ ಪಟ್ಟಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಲಕ್ಷ್ಮೇಶ್ವರದಲ್ಲಿ ಸರ್ಕಾರ 35 ಹಾಸಿಗೆಯ ಸುಸಜ್ಜಿತ ಬೃಹತ್ ಆಸ್ಪತ್ರೆ ನಿರ್ಮಿಸಿದೆ. ಆದರೆ ಸರಿಯಾದ ವೈದ್ಯ ರನ್ನು ಮಾತ್ರ ನೇಮಕ ಮಾಡುತ್ತಿಲ್ಲ. ಹೀಗಾಗಿ ನೆಪ ಮಾತ್ರಕ್ಕೆ ಆಸ್ಪತ್ರೆ ಇದೆ ಎನ್ನುವಂತಾಗಿದೆ.

ಲಕ್ಷ್ಮೇಶ್ವರ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ನಿತ್ಯ 200-300ರವರೆಗೆ ರೋಗಿಗಳು ರೋಗ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಸಮುದಾಯ ಕೇಂದ್ರಕ್ಕೆ ಆಗಮಿಸುತ್ತಾರೆ. ಇಷ್ಟು ರೋಗಿಗಳನ್ನು ತತಾಸಣೆ ಮಾಡಿ ಚಿಕಿತ್ಸೆ ನೀಡಬೇಕಾದರೆ ಕನಿಷ್ಠ ನಾಲ್ಕು ಜನ ವೈದ್ಯರ ಅವಶ್ಯಕತೆ ಇದೆ. ಆದರೆ ಸದ್ಯಇಬ್ಬರು ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅಲ್ಲದೆ ಆಸ್ಪತ್ರೆಗೆ ಸ್ತ್ರೀರೋಗ ವೈದ್ಯರ ಅಗತ್ಯ ಬಹಳ ಇದೆ. ಕೆಲ ದಿನಗಳ ಹಿಂದಷ್ಟೆ ಸ್ತ್ರೀರೋಗ ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದರು. ಅವರು ದವಾಖಾನೆಯಲ್ಲಿ ಇದ್ದಷ್ಟು ದಿನ ಮಹಿಳೆಯರು ಅದರಲ್ಲಿಯೂ ಗರ್ಭಿಣಿ ಬರುತ್ತಿದ್ದರು. ಇದರಿಂದಾಗಿ ಬಡ ಗರ್ಭಿಣಿ ಮಹಿಳೆಯರಿಗೆ ಬಹಳ ಅನುಕೂಲವಾಗಿತ್ತು. ಆದರೆ ಕಾರಣಾಂತರಗಳಿಂದ ಈಗ ಕೆಲ ದಿನಗಳಿಂದ ಸ್ತ್ರೀರೋಗ ವೈದ್ಯರು ಕರ್ತವ್ಯಕ್ಕೆ ಬರುತ್ತಿಲ್ಲ. ಹೀಗಾಗಿ ಗರ್ಭಿಣಿ ಮಹಿಳೆಯರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ.

`ನೋಡ್ರ್ಯಪಾ ನನ್ನ ಮಗಳ್ನ ದವಾಖಾನಿಗೆ ಕರಕೊಂಡ ಬಂದೇನಿ. ಆದ್ರ ಅದೇನಾ ಸ್ಕ್ಯಾನಿಂಗ್ ಅಂತ. ಅದನ್ನ ಮಾಡಸಾಕ ಬ್ಯಾರೆ ಕಡೆ ಕಳಸಾಕತ್ತಾರ' ಎಂದು ಗುರುವಾರ ಹಳ್ಳಿಯಿಂದ ಗರ್ಭಿಣಿ ಮಗಳನ್ನು ಆಸ್ಪತ್ರೆಗೆ ಕರೆ ತಂದಿದ್ದ ವೃದ್ಧೆ ಲಕ್ಷ್ಮವ್ವ ತನ್ನ ಅಳಲು ತೋಡಿಕೊಂಡಳು.

`ಇದ... ದವಾಖಾನಿಯೊಳಗ ನನ್ನ ಒಂದನೇ ಮಗಳ ಹೆರಿಗೆ ಸುಲಭವಾಗಿ ಆಗಿತ್ತು. ಆದರ ಹಿಂದಿದ್ದ ಮಹಿಳಾ ವೈದ್ಯರು ಈಗ ಬ್ಯಾರೆ ಕಡೆ ಹೋಗ್ಯಾರಂತ. ಹಿಂಗಾಗಿ ಎರಡನೇ ಮಗಳ ಹೆರಿಗೆಗಾಗಿ ಖಾಸಗಿ ದವಾಖಾನೆಗೆ ಹೋಗಬೇಕಾಗೈತಿ' ಎಂದು ಖಾಸಗಿ ಶಾಲೆ ಶಿಕ್ಷಕ ಅಣ್ಣಿಗೇರಿ ತಮ್ಮ ನೋವು ವ್ಯಕ್ತಡಿಸುತ್ತಾರೆ.

ಅದರಂತೆ ಸಿಬ್ಬಂದಿಯ ಕೊರತೆ ದವಾಖಾನೆಯ ಮತ್ತೊಂದು ಪ್ರಮುಖ ಸಮಸ್ಯೆ. ಅಗತ್ಯ ಸಿಬ್ಬಂದಿ ಇಲ್ಲದಿರುವುದರಿಂದ ಹೆರಿಗೆ ಭತ್ಯೆ, ಮಡಿಲು ಕಿಟ್ ವಿತರಣೆ ಸೇರಿದಂತೆ ಮತ್ತಿತರ ಸಾಮಾನ್ಯ ಕೆಲಸಗಳು ವೇಳೆಗೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದು ಹೇಳಿಕೊಳ್ಳಲು ದೊಡ್ಡ ಆಸ್ಪತ್ರೆ. ಆದರೆ ಸರಿಯಾದ ಶೌಚಾಲಯವೇ ಇಲ್ಲ.

`ಆಸ್ಪತ್ರೆ ಸಮಸ್ಯೆಗಳನ್ನು ಬಗೆ ಹರಿಸುವಂತೆ ಅನೇಕ ಸಲ ದೊಡ್ಡ ಅಧಿಕಾರಿಗಳಿಗೆ ತಿಳಿಸಿದ್ರೂ ಅವ್ರ ಯಾವ್ದ ಕ್ರಮಕೈಗೊಂಡಿಲ್ಲ. ಆಸ್ಪತ್ರೆ ಸುತ್ತಮುತ್ತ ಭಾಳ ಕಸಾಕಡ್ಡಿ ತುಂಬೈತಿ. ಇದ ರಿಂದಾಗಿ ಆಸ್ಪತ್ರೀನ... ರೋಗ ಬರೋ ಕೇಂದ್ರ ಆಗೈತಿ. ಕಾರಣ ಜಿಲ್ಲಾ ವೈದ್ಯಾ ಧಿಕಾರಿಗಳು ಈ ಕಡೆ ಗಮನ ಕೊಡಬೇಕು' ಎಂದು ಪುರಸಭೆ ಸದಸ್ಯ ರಾಮಣ್ಣ ರಿತ್ತಿ ಒತ್ತಾಯಿಸುತ್ತಾರೆ.

ಒಟ್ಟಿನಲ್ಲಿ ಪಟ್ಟಣದ ಸಮುದಾಯ ಕೇಂದ್ರ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದು ಈಗಲಾದರೂ ಜಿಲ್ಲಾಡಳಿತ ಇತ್ತ ಗಮನ ಹರಿಸಿ ತುರ್ತಾಗಿ ಸ್ತ್ರೀರೋಗ ವೈದ್ಯರನ್ನು ಆಸ್ಪತ್ರೆಗೆ ನೇಮಕ ಮಾಡ ಬೇಕಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.