ADVERTISEMENT

ಸ್ಲಂ ನಿವಾಸಿಗಳ ಧರಣಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 9:50 IST
Last Updated 18 ಜನವರಿ 2011, 9:50 IST

ಗದಗ: ಕೊಳಚೆ ಪ್ರದೇಶದ ನಿವಾಸಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ಸದಸ್ಯರು ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಸೋಮವಾರ ಧರಣಿ ಸತ್ಯಾಗ್ರಹ ನಡೆಸಿದರು. ಕೊಳಚೆ ಪ್ರದೇಶದ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯ ಮುಂಗಡ ಪತ್ರದಲ್ಲಿ ಪಾಲು, ಭೂಮಿ ಹಕ್ಕು ಖಾತ್ರಿ, ನಗರ ಬಡವರ ಕುಡಿಯುವ ನೀರಿನ ಖಾಸಗೀಕರಣ ಮತ್ತು ಪಡಿತರ ವಿತರಣೆಯಲ್ಲಿ ಯೂನಿಟ್ ಪದ್ಧತಿ ರದ್ದುಗೊಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಬದಲಾಗಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾಯೆಗೆ ತಿದ್ದುಪಡಿ ತಂದು ಕೊಳಚೆ ಪ್ರದೇಶದ ಜನರ ರಕ್ಷಣೆಗಾಗಿ ಅಗತ್ಯವಿರುವ ನೀತಿ ಜಾರಿಗೆ ತರಬೇಕು. ಕೊಳಚೆ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಅಗತ್ಯವಿರುವ ಹಣಕಾಸನ್ನು ವೀಸಲಿರಿಸಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ನಗರದ ಬಡಜನರಿಗೆ ಮೂಲಭೂತ ಸೇವೆ ನೀಡಲು ಶೇ. 28ರಷ್ಟು ಹಣವನ್ನು ಸ್ಥಳಿಯ ಸಂಸ್ಥೆಗಳು ತಮ್ಮ ಮುಂಗಡಪತ್ರದಲ್ಲಿ ಮೀಸಲಿಡಬೇಕು. ಸರಕಾರದ ನಿರ್ದೇಶನದಂತೆ ರಾಜ್ಯದಲ್ಲಿರುವ ಘೋಷಿತ ಮತ್ತು ಅಘೋಷಿತ ಕೊಳಚೆ ಪ್ರದೇಶಗಳಿಗೆ ಗುರುತಿನ ಚೀಟಿ, ನೋಂದಣೆ ಪತ್ರವನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನೀಡಬೇಕು.  ಕನ್ನಡ ಗಂಗಾ ಯೋಜನೆ ಹೆಸರಿನಲ್ಲಿ ಸ್ಥಳೀಯ ಸಂಸ್ಥೆಗಳ ಅಧೀನದಲ್ಲಿರುವ ಸಂಪನ್ಮೂಲವನ್ನು ಖಾಸಗಿ ಕಂಪನಿಗಳಿಗೆ ವಹಿಸುತ್ತಿರುವ ನಿಲುವಿನಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ಪಡಿತರ ವ್ಯವಸ್ಥೆಯಲ್ಲಿರುವ ಯೂನಿಟ್ ಪದ್ಧತಿ ರದ್ದುಗೊಳಿಸಿ ಒಂದು ಕುಟುಂಬಕ್ಕೆ ಅಗತ್ಯವಿರುವಷ್ಟು ಆಹಾರ ಧಾನ್ಯವನ್ನು ನಗರ ಪ್ರದೇಶ ಬಡಜನರಿಗೆ ಸಬ್ಸಿಡಿ ದರದಲ್ಲಿ ್ಲಪೂರೈಸಬೇಕು. ಅವಳಿ ನಗರದಲ್ಲಿ ಅಧಿಕೃತ 48 ಕೊಳಚೆ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಅಶೋಕ ಕುಡತಿನ್ನಿ, ಇಮ್ತಿಯಾಜ್ ಮಾನ್ವಿ, ವೆಂಕಟೇಶಯ್ಯ, ಅಶೋಕ ಮ್ಯಾಗೇರಿ, ರವಿಕುಮಾರ ಬೆಳಮಕರ, ಉಮಾದೇವಿ ಕಾತರಕಿ, ದುರಗಪ್ಪ ನವಲಗುಂದ, ಮಂಜುನಾಥ ತಳವಾರ, ಶರೀಫ್ ಬಿಳೆಯಲಿ, ಮೆಹಬೂಬ್ ಮುಳಗುಂದ, ಅಬ್ದುಲಖಾರದ್ ಮಕಾನದಾರ್, ವಿರೂಪಾಕ್ಷಿ ಯಾದಗೀರ, ಈಶ್ವರ ತಳಗಡೆ, ಬಾಬುಖಾನ್ ರೋಣ, ಪರಸಪ್ಪ ಬಳ್ಳಾರಿ, ಶಾಂತವ್ವ ಮಡಿವಾಳರ, ಜಂದಿಸಾಬ್ ಬಳ್ಳಾರಿ ಮತ್ತಿತರರು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.