ADVERTISEMENT

ಹತ್ತಿ ಬೆಳೆದ ರೈತರಿಗೀಗ ಕಣ್ಣೀರೆ ಗತಿ...

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 6:00 IST
Last Updated 15 ಅಕ್ಟೋಬರ್ 2012, 6:00 IST
ಹತ್ತಿ ಬೆಳೆದ ರೈತರಿಗೀಗ ಕಣ್ಣೀರೆ ಗತಿ...
ಹತ್ತಿ ಬೆಳೆದ ರೈತರಿಗೀಗ ಕಣ್ಣೀರೆ ಗತಿ...   

ಗಜೇಂದ್ರಗಡ: ಸಾಂಪ್ರದಾಯಿಕ ಬೆಳೆಗಳಿಂದ ದೂರ ಉಳಿದು ವಾಣಿಜ್ಯ ಬೆಳೆಗಳತ್ತ ಹೆಚ್ಚು ಆಕರ್ಷಿತರಾದ ನೇಗಿಲಯೋಗಿ  ವಾಣಿಜ್ಯ ಬೆಳೆ ಬೆಳೆದ ತಪ್ಪಿಗೆ ಕೈಕೈಹಿಸುಕಿಕೊಳ್ಳುವಂತಾಗಿದೆ.

ತಲೆಮಾರುಗಳಿಂದಲೂ ಸಾಂಪ್ರದಾಯಿಕ ಬೆಳೆಗಳಾದ ಬಿಳಿಜೋಳ, ಗೋಧಿ, ಕಡಲೆ, ಹೆಸರು ಮುಂತಾದ ಬೆಳೆಗಳನ್ನು ಬೆಳೆದು ನೆಮ್ಮದಿಯ ಬದುಕು ಸಾಗಿಸುತ್ತಿದ್ದ ನೇಗಿಲಯೋಗಿಗಳು ಸಾಂಪ್ರದಾಯಿ ಕ ಬೆಳೆಗಳಿಗೆ ವಿದಾಯ ಹೇಳಿ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ನೀಡುವ ಪ್ರಮುಖ ವಾಣಿಜ್ಯ ಬೆಳೆ ಎಂದೇ ಹೆಸರಾದ `ಹತ್ತಿ~ ಬೆಳೆಗೆ ಮುಂದಾಗಿ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.

ಹೇಳಿಕೊಳ್ಳಲೂ ನೀರಾವರಿ ಯೋಜನೆಯಿಲ್ಲದ ಈ ಭಾಗದಲ್ಲಿ ಕೊಳವೆ ಬಾವಿ ನೀರಾವರಿಗಿಂತ ಒಣ ಬೇಸಾಯ ಪದ್ಧತಿಯೇ ಹೆಚ್ಚು ರೂಢಿಯಲ್ಲಿದೆ. ಒಂದು ಕಾಲದಲ್ಲಿ ಆಹಾರ ಬೆಳೆಗಳನ್ನು ಪ್ರಧಾನವಾಗಿ ಬೆಳೆಯುತ್ತಿದ್ದ ಗಜೇಂದ್ರಗಡ, ಸೂಡಿ, ಇಟಗಿ, ರಾಜೂರ, ಮುಶಿಗೇರಿ, ಹಿರೇಅಳಗುಂಡಿ, ಚಿಕ್ಕಅಳಗುಂಡಿ, ಲಕ್ಕಲಕ್ಕಟ್ಟಿ, ನಾಗೇಂದ್ರಗಡ, ನೆಲ್ಲೂರ, ಕಾಲಕಾಲೇಶ್ವರ ಮುಂತಾದ ಗ್ರಾಮಗಳಲ್ಲಿ ಕೆಲವು ವರ್ಷಗಳಿಂದ ಒಂದೊಂದೇ ಆಹಾರ ಬೆಳೆಗಳು ಮಾಯವಾಗಿ ಈ ಜಾಗವನ್ನು ವಾಣಿಜ್ಯ ಬೆಳೆಗಳು ಆವರಿಸಿಕೊಂಡಿವೆ.

ರೈತರ ವಾಣಿಜ್ಯ ಬೆಳೆಗಳ ಮೇಲಿನ ಮೋಹದಿಂದಾಗಿಯೇ ಕಳೆದ ಮೂರ‌್ನಾಲ್ಕು ವರ್ಷಗಳಲ್ಲಿ ಸಾಂಪ್ರದಾಯಿಕ ಬೆಳೆಗಳು ಭಾರಿ ಪ್ರಮಾಣದಲ್ಲಿ ಕ್ಷೀಣಿಸಿವೆ. ಹೀಗಾಗಿಯೇ ಆಹಾರ ಉತ್ಪನ್ನಗಳಿಗೆ ಹಾಹಾಕಾರ ಉಂಟಾಗಿದೆ. ಇದರ ಬಗ್ಗೆ ಅರಿವು ಇರದ ರೈತ ಮಾತ್ರ ಝಣ ಝಣ ಹಣ ಬರುವ ಬೆಳೆ ಹತ್ತಿ ಬೆಳೆಯುವುದರಲ್ಲಿ ಮಗ್ನನಾಗಿದ ಆರಂಭದ ವರ್ಷವೇ ಕಷ್ಟದ ದಿನಗಳನ್ನು ಎದುರಿಸುತ್ತಿರುವುದು ದುರಾದೃಷ್ಟಕರ ಸಂಗತಿಯೇ ಸರಿ.

 ಹತ್ತಿಗಾಗಿ ಕೊಳವೆ ಬಾವಿಗಳು: ಬೆಲೆ ಕುಸಿತ, ಕೀಟಬಾಧೆ, ಅತಿವೃಷ್ಟಿ, ಅನಾವೃಷ್ಟಿ ಹೀಗೆ ಒಂದಿಲ್ಲೊಂದು ಸಂಕಷ್ಟಗಳನ್ನು ಎದುರಿಸುತ್ತಾ ಬರೀ ನಷ್ಟದ ಬೇಸಾಯವನ್ನೇ ಮಾಡಿಕೊಂಡು ಬಂದಿದ್ದ ಈ ಭಾಗದ ರೈತರಿಗೆ ಕಳೆದ ಎರಡು ವರ್ಷಗಳಿಂದ ಎದುರಾದ ಭೀಕರ ಬರ ಪರಿಸ್ಥಿತಿಯನ್ನು ಎದುರಿಸುವುದು ಸವಾಲಾಗಿ ಪರಿಣಮಿಸಿತು. ಬರದ ಬವಣೆಯಿಂದ ಹೊರ ಬರುವುದಕ್ಕಾಗಿಯೇ 2010 ರಿಂದ ಇಲ್ಲಿಯವರೆಗೆ 15,892 ಕ್ಕೂ ಅಧಿಕ ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ.

ಈ ಎಲ್ಲ ಕೊಳವೆ ಬಾವಿಗಳ ಉದ್ದೇಶ ಮಾತ್ರ `ಹತ್ತಿ~ ಬೆಳೆಯು ವುದಕ್ಕಾಗಿಯೇ ಎಂಬುದೇ ವಿಶೇಷ. ಕೃಷಿ ಇಲಾಖೆಯ ಪ್ರಕಾರ ಕಳೆದ ವರ್ಷ 12,362 ಹೆಕ್ಟೇರ್ ಹತ್ತಿ ಬೆಳೆದರೆ, ಪ್ರಸಕ್ತ ವರ್ಷ 14,365 ಹೆಕ್ಟೇರ್ ಹತ್ತಿ ಬೆಳೆಯಲಾಗಿದೆ. ಆದರೆ, 400 ರಿಂದ 500 ಅಡಿ ಆಳದ ವರೆಗೆ ಕೊಳವೆ ಬಾವಿಗಳನ್ನು ಕೊರೆಯಿಸಿ ಕಷ್ಟ ಪಟ್ಟು ಬೆಳೆದ `ಹತ್ತಿ~ ತೇವಾಂಶದ ಕೊರತೆ, ನೊಣ ರೋಗ ಇತ್ಯಾದಿ ಸಮಸ್ಯೆಗಳಿಂದಾಗಿ ಲಾಭವಿರಲಿ ಬೆಳೆಗೆ ಮಾಡಿದ ಖರ್ಚು ಸಹ ಕೈಸೇರದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಳೆದ ಎರಡು ವರ್ಷಗಳಿಂದ ಗಜೇಂದ್ರಗಡ ವ್ಯಾಪ್ತಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ನೆಲೆಯೂರಿರುವ `ಹತ್ತಿಬೀಜ~ ಕಂಪೆನಿಗಳು ಇಲ್ಲಿನ ರೈತರನ್ನು ಮನಬಂದಂತೆ ವಂಚಿಸುತ್ತಿವೆ.  ಹತ್ತಿ ಬೆಳೆದ ರೈತರಿಗೆ ಕಂಪೆನಿಗಳು ಅಸಮರ್ಪಕ ಮಾಹಿತಿ ನೀಡಿ ರೈತರಿಂದ ಭಾರಿ ಪ್ರಮಾಣದ ಲಾಭ ಪಡೆಯುತ್ತಿದ್ದರೂ ರೈತರಿಗೆ ಮಾತ್ರ ಕವಡೆ ಕಾಸು ದೊರೆಯದಂತೆ ನೋಡಿಕೊಳ್ಳುತ್ತಿವೆ. ಜೊತೆಗೆ ರೈತರು ಬೆಳೆದ ಹತ್ತಿ, ಹತ್ತಿಬೀಜಕ್ಕೆ ಯೋಗ್ಯಬೆಲೆ ನಿಗದಿಪಡಿಸದೆ, ತೀರಾ ಕಡಿಮೆ ಬೆಲೆಗಳಿಗೆ ಖರೀದಿಸುವ ಮೂಲಕ ರೈತರನ್ನು ಹಗಲು ದರೋಡೆ ಮಾಡುತ್ತಿವೆ.

ಕಂಪೆನಿಗಳ ಸರ್ವಾಧಿಕಾರತ್ವ ಧೋರಣೆಯಿಂದಾಗಿ ಹತ್ತಿ ಬೆಳೆದ ರೈತರು ಮಾತ್ರ ಕಣ್ಣೀರಲ್ಲಿ ಕೈತೊಳೆಯುವಂತಾಗಿರುವುದು ವಿಪರ್ಯಾಸವೇ ಸರಿ. ಇನ್ನಾದರೂ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಂಡು ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿ ಪಡಿಸುವರೇ ಎಂಬುದನ್ನು ಈಗಾಲಾದರೂ ಕಾದು ನೋಡಬೇಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.