ADVERTISEMENT

ಹುಬ್ಬಳ್ಳಿ–ಗದಗ ರಸ್ತೆ ಅಗಲೀಕರಣ: 15 ವರ್ಷದ ಆಲದ ಮರ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 3 ಜೂನ್ 2017, 6:14 IST
Last Updated 3 ಜೂನ್ 2017, 6:14 IST
ಗದಗ ತಾಲ್ಲೂಕಿನ ಹೊಸಹಳ್ಳಿ ಕ್ರಾಸ್‌ನಿಂದ  ಕೀಳಲಾದ 15 ವರ್ಷದ ಆಲದ ಮರವೊಂದನ್ನು 12 ಕಿಮೀ ದೂರದಲ್ಲಿರುವ ಗದುಗಿನ ಭೀಷ್ಮ ಕೆರೆ ಆವರಣಕ್ಕೆ ಗುರುವಾರ ಸ್ಥಳಾಂತರಿಸಿ ನೆಡಲಾಯಿತು. ಮರ ಸ್ಥಳಾಂತರದ ವಿವಿಧ ಚಿತ್ರಗಳು
ಗದಗ ತಾಲ್ಲೂಕಿನ ಹೊಸಹಳ್ಳಿ ಕ್ರಾಸ್‌ನಿಂದ ಕೀಳಲಾದ 15 ವರ್ಷದ ಆಲದ ಮರವೊಂದನ್ನು 12 ಕಿಮೀ ದೂರದಲ್ಲಿರುವ ಗದುಗಿನ ಭೀಷ್ಮ ಕೆರೆ ಆವರಣಕ್ಕೆ ಗುರುವಾರ ಸ್ಥಳಾಂತರಿಸಿ ನೆಡಲಾಯಿತು. ಮರ ಸ್ಥಳಾಂತರದ ವಿವಿಧ ಚಿತ್ರಗಳು   

ಗದಗ: ಹುಬ್ಬಳ್ಳಿ–ಗದಗ- ರಸ್ತೆ ಅಗಲೀಕರಣ ಸಂದರ್ಭದಲ್ಲಿ ಧರೆಗುರುಳಬಹುದಾದ ನೂರಾರು ಮರಗಳನ್ನು ಅರಣ್ಯ ಇಲಾಖೆ ಗುರುತಿಸಿದ್ದು, ಇವುಗಳನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿ, ನೆಡುವ ಯೋಜನೆ ರೂಪಿಸಿದೆ.

ತಾಲ್ಲೂಕಿನ ಹೊಸಹಳ್ಳಿ ಕ್ರಾಸ್‌ನಿಂದ  ಕೀಳಲಾದ 15 ವರ್ಷದ ಆಲದ ಮರವೊಂದನ್ನು 12 ಕಿಮೀ ದೂರದಲ್ಲಿರುವ ಗದುಗಿನ ಭೀಷ್ಮ ಕೆರೆ ಆವರಣಕ್ಕೆ ಗುರುವಾರ ಸ್ಥಳಾಂತರಿಸಿ ನೆಡಲಾಯಿತು.

‘ಈಗಾಗಲೇ ಬೆಂಗಳೂರಿನಲ್ಲಿ ಮರಗಳನ್ನು ಸ್ಥಳಾಂತರಿಸಿ ನೆಡುವ ಯೋಜನೆ ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ಜಿಲ್ಲೆಯಲ್ಲೂ ಮರಗಳನ್ನು ಸ್ಥಳಾಂತರಿಸುವ ಯೋಜನೆ ರೂಪಿಸಲಾಗಿದೆ. ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ 7 ಮರಗಳನ್ನು ಸ್ಥಳಾಂತರಿಸಲಾಗುವುದು. ಇದಕ್ಕಾಗಿ ಭೀಷ್ಮ ಕೆರೆ ಆವರಣದಲ್ಲಿ 5 ಗುಂಡಿಗಳನ್ನು ಹಾಗೂ ಪಾಪನಾಶಿ ಬಳಿ 2 ಗುಂಡಿಗಳನ್ನು ತೆಗೆಯಲಾಗಿದೆ. ಜೂನ್‌ 4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಅಧಿಕೃತವಾಗಿ ಇದಕ್ಕೆ ಚಾಲನೆ ನೀಡಲಿದ್ದಾರೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ADVERTISEMENT

‘ಹೊಸಹಳ್ಳಿ ಕ್ರಾಸ್ ಬಳಿ  ಇದ್ದ ಈ ಆಲದ ಮರದ ಸುತ್ತ ಗುಂಡಿ ತೆಗೆದು ಕಳೆದ 5 ದಿನಗಳಿಂದ  ನೀರು ಹಾಕಿ ಮಣ್ಣು ಹಾಗೂ ಬೇರುಗಳನ್ನು ಸಡಿಲಿಸಲಾಗಿತ್ತು. ಭೀಷ್ಮ ಕೆರೆ ಆವರಣದಲ್ಲಿ ತೆಗೆದ ಗುಂಡಿಗೂ ಕಳೆದ 5 ದಿನಗಳಿಂದ ನೀರು ಹರಿಸಲಾಗಿತ್ತು. ಗುರುವಾರ ಬೆಳಿಗ್ಗೆ ತಾಯಿ ಬೇರು ಹಾಗೂ ಮಣ್ಣು ಸಹಿತವಾಗಿ ಗಿಡವನ್ನು ಬೃಹತ್ ಕ್ರೇನ್ ಮೂಲಕ ಕಿತ್ತು, ಭಾರಿ ವಾಹನದಲ್ಲಿ ಭೀಷ್ಮಕೆರೆ ಆವರಣಕ್ಕೆ ತಂದು, ಇಲ್ಲಿ ತೆಗೆಯಲಾಗಿದ್ದ ಗುಂಡಿಯಲ್ಲಿ ನೆಡಲಾಯಿತು. ಈ ಗುಂಡಿಗೆ ಕ್ರಿಮಿನಾಶಕ, ಗೊಬ್ಬರವನ್ನು ಹಾಕಲಾಗಿತ್ತ’ ಎಂದು ಆರ್‌ಎಫ್‌ಒ ಪತ್ತಾರ ಮಾಹಿತಿ ನೀಡಿದರು.

ಸ್ಥಳಾಂತರಿಸಿದ ಆಲದ ಮರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪೂಜೆ ಸಲ್ಲಿಸಿದರು. ‘ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಮರಗಳ ಮಾರಣಹೋಮ ತಪ್ಪಿಸಲು ಸ್ಥಳಾಂತರಿಸುವ ಯೋಜನೆ ರೂಪಿಸಲಾಗಿದೆ. ಒಂದು ಮರ ಸ್ಥಳಾಂತರಿಸಲು ಅಂದಾಜು  ₹ 15 ಸಾವಿರ ವೆಚ್ಚವಾಗಲಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ವಿಶೇಷ ಯೋಜನೆ, ಉದ್ಯೋಗ ಖಾತ್ರಿ ಹಾಗೂ ವಿವಿಧ ಮೂಲಗಳಿಂದ ಅನುದಾನ ಬಳಸಲಾಗುತ್ತದೆ. ಮರಗಳ ಸ್ಥಳಾಂತರಕ್ಕೆ ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಬೇಕು’ ಎಂದು  ಪಾಟೀಲ ಮನವಿ ಮಾಡಿದರು.  ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ, ಶಾಸಕ ಬಿ.ಆರ್. ಯಾವಗಲ್, ಡಿ.ಸಿ ಮನೋಜ್‌ ಜೈನ್‌, ಎಸ್‌.ಪಿ. ಸಂತೋಷಬಾಬು,ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ  ಕ್ಷೀರಸಾಗರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.