ADVERTISEMENT

‘ನೈಸರ್ಗಿಕ ಬಣ್ಣ ಬಳಕೆಗೆ ಆದ್ಯತೆ ನೀಡಿ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 8:16 IST
Last Updated 5 ಡಿಸೆಂಬರ್ 2013, 8:16 IST

ಗಜೇಂದ್ರಗಡ: ‘ಕೈಮಗ್ಗ ನೇಕಾರಿಕೆಯಲ್ಲಿ ನೈಸರ್ಗಿಕ ಬಣ್ಣ ಬಳಕೆ ಮಾಡಿ ಬಟ್ಟೆ ತಯಾರಿಕೆ ಕಾರ್ಯಕ್ಕೆ ರಾಜ್ಯದಲ್ಲಿಶೀಘ್ರ ಚಾಲನೆ ದೊರೆಯಲಿದೆ’ ಎಂದು ಶಿವಮೊಗ್ಗದ ಹೆಗ್ಗೋಡು ಚರಕ ಮತ್ತು ದೇಶಿ ಸಂಸ್ಥೆಯ ಸಂಸ್ಥಾಪಕ ಪ್ರಸನ್ನ ಹೇಳಿದರು.

ಬುಧವಾರ ಇಲ್ಲಿನ ಬನಶಂಕರಿ ಸಹಕಾರಿ ಸಂಘ ಹಾಗೂ ಆದಿ­ಶಕ್ತಿ ನೇಕಾರರ ಸಹಕಾರಿ ಸಂಘಗಳಿಗೆ ಭೇಟಿ ಚರ್ಚಿಸಿದ ಅವರು, ‘ರಾಜ್ಯದ ಕೈಮಗ್ಗ ನೇಕಾರಿಕೆಗೆ ವಿಶ್ವ ಮಾನ್ಯತೆ ಇದೆ. ಆದರೆ ವಿದ್ಯುತ್‌ ಮಗ್ಗ ಹಾಗೂ ಆಧುನಿಕತೆಯ ರಾಸಾಯನಿಕ ಬಣ್ಣಗಳ ಭರಾಟೆಗೆ ಸಿಲುಕಿ ನೈಸರ್ಗಿಕ ಬಟ್ಟೆ ತಯಾರಿಕೆಗೆ ರಾಸಾ­ಯನಿಕ ಆಪತ್ತು ಬಂದೊದಗಿತ್ತು. ಇದರ ನಿವಾ­ರಣೆಗಾಗಿ ಮೂಲ ಕೈಮಗ್ಗ ತಯಾರಿಕೆಯಲ್ಲಿ ನೈಸರ್ಗಿಕ ಬಟ್ಟೆ­ಗಳ ತಯಾರಿಕೆಗೆ ಮುಂಬರುವ ದಿನಗಳಲ್ಲಿ ಗಜೇಂದ್ರಗಡ ನಗರ­ದಿಂದಲೇ ಚಾಲನೆ ನೀಡಲಾಗುವುದು’ ಎಂದರು.

ವಿಶ್ವದಲ್ಲಿರುವ ಕೈಮಗ್ಗಗಳಿಗೆ ಹೋಲಿಕೆ ಮಾಡಲಾಗಿ ಭಾರತ­ದಲ್ಲಿ ಅತಿ ಹೆಚ್ಚು ಕೈಮಗ್ಗ ಹಾಗೂ ಕೈಮಗ್ಗ ಆಧಾರಿತ ಕುಟುಂಬಗಳಿವೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಪ್ರೋತ್ಸಾಹ ನೀಡದಿರುವುದರಿಂದಾಗಿ ಈ ಉದ್ಯಮಕ್ಕ ಕುತ್ತು ಬಂದೊದಗಿದೆ. ಹೀಗಾಗಿ ರಿಜಿಸ್ಟ್ರೇಷನ್‌ ಆ್ಯಕ್ಟ್‌ ಜಾರಿಗೊಳಿಸುವ ಮೂಲಕ ಕೈಮಗ್ಗ ನೇಕಾರಿಕೆಯ ಖಾಸಗೀ­ಕರಣಕ್ಕೆ ಆದ್ಯತೆ ನೀಡದಂತೆ ಸರ್ಕಾರ ಕಟ್ಟುನಿಟ್ಟಿನಿ ಕ್ರಮ ಕೈಗೊಳ್ಳಬೇಕು ಅಂದಾಗ ಮಾತ್ರ ರಾಜ್ಯದ ಕೈಮಗ್ಗ ನೇಕಾ­ರಿಕೆಗೆ ಮೂಲ ಕಳೆ ಬರಲು ಸಾಧ್ಯ ಎಂದರು.

ನೈಸರ್ಗಿಕ ಬಣ್ಣ ಬಳಕೆ ಮಾಡಿ ಕೈಮಗ್ಗದಲ್ಲಿ ಬಟ್ಟೆ ಹಾಗೂ ಸೀರೆಗಳನ್ನು ಸಿದ್ಧಗೊಳಿಸುವ ನೇಕಾರರಿಗೆ ಮಾರುಕಟ್ಟೆ ಹಾಗೂ ಸ್ಥಿರ ದರ ಒದಗಿಸಿ ಕೊಡಲಾಗುವುದು. ನೈಸರ್ಗಿಕ ಬಣ್ಣ ಬಳಕೆ ಮಾಡಿ ತಯಾರಿಸುವ ಬಟ್ಟೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಹೀಗಾಗಿ ಆರೋಗ್ಯಯುತ ನೈಸರ್ಗಿಕ ಬಣ್ಣ ಬಳಕೆ ಮಾಡಿ ತಯಾರಿಸುವ ಬಟ್ಟೆ ಮಾರಾಟಗಾರರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸುವ ಜವಾಬ್ದಾರಿ ಚರಕ ಮತ್ತು ದೇಶಿ ಸಂಸ್ಥೆಯ ಜವಾಬ್ದಾರಿ ಎಂದರು.

ಗಜೇಂದ್ರಗಡದ 400 ಕ್ಕೂ ಅಧಿಕ ವಿದ್ಯುತ್‌ ಕೈಮಗ್ಗಗಳಿಗೆ ಭೇಟಿ ನೀಡಿ ನೈಸರ್ಗಿಕ ಬಣ್ಣ ಬಳಕೆ ಮಾಡಿ ಸಿದ್ಧಗೊಳಿಸಿದ ಬಟ್ಟೆ ಹಾಗೂ ಸೀರೆಗಳ ಮಾರಾಟಕ್ಕೆ ಮಾರುಕಟ್ಟೆ ಒದ­ಗಿಸ­ಲಾಗು­ವುದು ಎಂದು ಅಭಯ ನೀಡಿದರು.

ಕೈಮಗ್ಗ ನೇಕಾರಿಕೆಯ ಹಿರಿಮೆ
ಸಹಕಾರಿ ವಲಯದಲ್ಲಿ ಗಜೇಂದ್ರಗಡವು ಸ್ವಾತಂತ್ರ್ಯ ಪೂರ್ವ (1944) ರಲ್ಲಿ ನೇಕಾರ ಸಹಕಾರಿ ಉತ್ಪಾದಕರ ಸಂಘ ಹಾಗೂ ಬನಶಂಕರಿ ನೇಕಾರ ಸಹಕಾರಿ ಸಂಘ ಹಾಗೂ ಆದಿ ಶಕ್ತಿ ಕೈಮಗ್ಗ ನೇಕಾರ ಸಂಘಗಳು ಉತ್ತಮ ಕಾರ್ಯ ನಿರ್ವ­ಹಿಸುತ್ತಾ ಬಂದಿವೆ.  ಗಜೇಂದ್ರಗಡದ ಕೈಮಗ್ಗದಿಂದ ತಯಾರಾಗುವ ಸೀರೆ ಮತ್ತು ಬಣಗಳಿಗೆ ಮಹಾರಾಷ್ಟ್ರದ ಸತಾರ, ಕೊಲ್ಹಾಪುರ,  ನಾಸಿಕ್‌ ಮಾರುಕಟ್ಟೆಗಳಲ್ಲಿ ಉತ್ತಮ ಬೇಡಿಕೆ ಇದೆ. ಇಲ್ಲಿನ ಸಾಮೂಹಿಕ ನೇಕಾರಿಕೆ ಕೇಂದ್ರಗಳಿಂದ ಸುಮಾರು 400 ಕ್ಕೂ ವಿದ್ಯುತ್‌ ಮಗ್ಗಗಳು ಕಾರ್ಯ­ನಿರ್ವ­ಹಿಸುತ್ತಿವೆ. ಹೀಗಾಗಿಯೇ ಗಜೇಂದ್ರಗಡದ ನೇಕಾರಿಕೆಯಲ್ಲಿ ನೈಸ­ರ್ಗಿಕ ಬಣ್ಣ ಬಳಕೆ ಮಾಡಲು ನೇಕಾರರನ್ನು ಮನ­ವೊಲಿಸಲಾಗಿದೆ ಎಂದರು.

ಸಂಸ್ಥೆಯ ವಸ್ತ್ರ ವಿನ್ಯಾಸಕಿ ಲತಾ, ಮಾರುಕಟ್ಟೆ ವ್ಯವಸ್ಥಾಪಕರಾದ ಪದ್ಮಶ್ರೀ, ಮಧು, ಪ್ರಕಾಶಭಟ್‌, ಪ್ರೊ.ಬಿ.ಎ.ಕೆಂಚರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.