ADVERTISEMENT

‘ಮೂಢನಂಬಿಕೆ ಕಾಯ್ದೆ ಯಾವುದೇ ಧರ್ಮದ ವಿರುದ್ಧವಲ್ಲ’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 6:29 IST
Last Updated 21 ಡಿಸೆಂಬರ್ 2013, 6:29 IST

ಗದಗ:  ರಾಜ್ಯದಲ್ಲಿ ಸರಕಾರ ಜಾರಿ­-ಗೊಳಿಸಲು ನಿರ್ಧರಿಸಿರುವ ಮೂಢ ನಂಬಿಕೆ ಪ್ರತಿಬಂಧಕ ಕಾಯ್ದೆ ಎಲ್ಲ ಧರ್ಮ­ದಲ್ಲಿರುವ ದೇವರ ಹೆಸರಲ್ಲಿನ ಶೋಷಣೆ ವಿರುದ್ಧವೇ ಹೊರತು ಯಾವುದೆ ಧರ್ಮದ ವಿರುದ್ಧವಲ್ಲ  ಎಂದು ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.

ನಗರದ ತೋಂಟದಾರ್ಯ ಎಂಜಿನಿ­ಯರಿಂಗ್‌ ಕಾಲೇಜಿನಲ್ಲಿ  ಶುಕ್ರವಾರ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲ ಧರ್ಮಗಳಲ್ಲಿ ಕೆಲವೆಡೆ ಆಚರಣೆ­ಯಲ್ಲಿರುವ ಮೌಢ್ಯತೆ ವಿರುದ್ಧ ಇರುವ ಈ ಕಾಯ್ದೆ ಬಗ್ಗೆ  ತಪ್ಪು  ಕಲ್ಪನೆ ಇದೆ.
ದೇವರ ಪೂಜೆ, ಅರ್ಚನೆ, ಉರುಳು ಸೇವೆ,  ಭವಿಷ್ಯ ಕೇಳುವುದನ್ನು ನಿಷೇಧಿಸಿ ಎಂದು ಹೇಳಲಾಗಿಲ್ಲ. ವ್ಯಕ್ತಿಯ ಗೌರವ ಕಳೆಯುವ, ನಂಬಿಕೆ ದುರುಪಯೋಗ ಮಾಡಿಕೊಳ್ಳುವುದು,  ಪ್ರಾಣಿ ಬಲಿ ಪಡೆಯುವಂತಹ ಅನಿಷ್ಟ ಆಚರಣೆಗಳು ಇಲ್ಲವಾಗಬೇಕೆಂಬ ಸದಾಶಯ ಇದರಲ್ಲಿದೆ. ನಕಲಿ ಜ್ಯೋತಿಷಿಗಳು, ನಕಲಿ ವಾಸ್ತು ಸಲಹೆಗಾರರನ್ನು ಸರ್ಕಾರ ಬಂಧಿಸಿ ಅವರಿಂದ ಹೀನ ಆಚರಣೆ ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ಸ್ವಾಮೀಜಿ ಒತ್ತಾಯಿಸಿದರು.

ನಾಗರಿಕ ಘನತೆ ಎತ್ತಿ ಹಿಡಿಯುವ ಧರ್ಮಾಚರಣೆ ಬೇಕು. ಪ್ರಗತಿಪರರು ಈಗಾಗಲೇ 13 ಅಮಾನವೀಯ ಹಾಗೂ ಶೋಷಣೆ ಭರಿತ ಆಚರಣೆಗಳ ನಿಷೇಧಕ್ಕೆ ಸಲಹೆ ನೀಡಿದ್ದಾರೆ. ಇಂತಹ ಕಾಯ್ದೆ ಜಾರಿಗೆ ಬಂದರೆ ಧಾರ್ಮಿಕ, ಸಾಮಾಜಿಕ ಶೋಷಣೆ ನಿಲ್ಲಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡರ ಅವರು ಸ್ವಾಮೀಜಿ ಅವರನ್ನು ಸನ್ಮಾನಿಸಿದರು.
ಪ್ರಾಚಾರ್ಯ ಪ್ರಕಾಶ ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು.  ಹಿರಿಯ ನ್ಯಾಯವಾದಿ ಎಸ್.ಎಸ್.ಶೆಟ್ಟರ್, ನಿವೃತ್ತ ಪ್ರಾಚಾರ್ಯ ಕೆ.ಎಚ್.­ಬೇಲೂರ, ಮೋಹನ ಅಲಮೇಲಕರ ಹಾಜರಿದ್ದರು.

ಆಡಳಿತಾಧಿಕಾರಿ ಎಸ್.ಎಸ್.­ಪಟ್ಟಣಶೆಟ್ಟಿ ಸ್ವಾಗತಿಸಿದರು. ಬಸವೇಶ್ವರ ಕಾಲೇಜು ಪ್ರಾಚಾರ್ಯ ಬಿ.ಬಿ.ಗೌಡರ ನಿರೂಪಿಸಿದರು. ನಿಡುಮಾಮಿಡಿ ಶ್ರೀಗಳು ಸಂಜೆ ತೋಂಟದಾರ್ಯದ ಮಠದ  ಡಾ. ಸಿದ್ದಲಿಂಗ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು
.
ಸಚಿವರ  ಪ್ರವಾಸ
ಗದಗ
:  ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ  ಎಚ್. ಆಂಜನೇಯ ಅವರು ಇದೇ 23 ರಂದು ಬೆಳಿಗ್ಗೆ 11.30 ಗಂಟೆಗೆ ಗದಗನಲ್ಲಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.  ಮಧ್ಯಾಹ್ನ 12.-30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ  ಜಿಲ್ಲಾ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವರು. ಸಂಜೆ  ಗದಗ ತಾಲ್ಲೂಕಿನ ಮಹಾಲಿಂಗಪುರ ತಾಂಡಾದಲ್ಲಿ ಅರಣ್ಯ ಭೂಮಿ ಉಳಿಮೆದಾರರಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 

ಮಜಗಟ ಕಾರ್ಯಕ್ರಮ ಇಂದು
ಗದಗ:
ಗಣಿತ ಶಿಕ್ಷಕ ಅಣ್ಣಿಗೇರಿಯ ಎಂ.ಜಿ.ಪೂಜಾರ ಅವರು ಇದೇ 21 ರಂದು ಮಧ್ಯಾಹ್ನ  2.30 ಗಂಟೆಗೆ ಕೋಚಿಂಗ್ ಸೆಂಟರ್‌ನಲ್ಲಿ ಗಣಿತದ ಸ್ವಾರಸ್ಯಕತೆಯನ್ನು ಅದ್ಬುತವಾಗಿ ಬಿಡಿಸುವ ಚಮತ್ಕಾರ ‘ಮಜಗಟ’ ಕಾರ್ಯಕ್ರಮ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.