ADVERTISEMENT

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌: ‘ಮಹಾ-ಮಾತು’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 14:26 IST
Last Updated 6 ಜೂನ್ 2025, 14:26 IST
06gdg07
06gdg07   

ಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಸಂಶೋಧನಾ ಕೃತಿಗಳನ್ನು ಪರಿಚಯಿಸುವ ಹಿನ್ನೆಲೆಯಲ್ಲಿ ವಿನೂತನ ‘ಮಹಾ-ಮಾತು’ ಕಾರ್ಯಕ್ರಮವನ್ನು ಶನಿವಾರ ಸಂಜೆ 6.30ಕ್ಕೆ ನಗರದ ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನ, ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯಾಲಯದಲ್ಲಿ ನಡೆಯಲಿದೆ.

‘ಕನ್ನಡ ಗಜಲ್‌ಗಳಲ್ಲಿ ವಸ್ತು ಮತ್ತು ಅಭಿವೃಕ್ತಿ’ ಕುರಿತಾಗಿ ಮಹಾಪ್ರಬಂಧವನ್ನು ರಚಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಹೊಂದಿರುವ ವಿನಾಯಕ ಕಮತದ ಅವರು ತಮ್ಮ ಸಂಶೋಧನಾ ಕೃತಿಯ ಕುರಿತು ಮಾತನಾಡುವರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಪರಿಷತ್ತಿನ ಸದಸ್ಯರು, ಆಸಕ್ತರು, ಸಾಹಿತ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ, ದತ್ತಪ್ರಸನ್ನ ಪಾಟೀಲ, ಡಿ.ಎಸ್.ಬಾಪುರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

- ‘ಸಾಧನೆಗೆ ಶ್ರದ್ಧೆ ಛಲ ಮುಖ್ಯ’

ಗದಗ: ‘ಜ್ಞಾನಾರ್ಜನೆಯಲ್ಲಿ ಶ್ರದ್ಧೆ ವಿಶ್ವಾಸ ಸಾಧಿಸಬೇಕೆನ್ನುವ ಛಲ ಇದ್ದಾಗ ಸಾಧನೆ ಸಾಧ್ಯ’ ಎಂದು ಪ್ರೊ. ರೋಹಿತ್ ಒಡೆಯರ್ ಹೇಳಿದರು. ನಗರದ ಸನ್ಮಾರ್ಗ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು. ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಈವರೆಗೆ ಮಾಡಿದ ಸಾಧನೆಯನ್ನು ತಿಳಿಸಿದ ಅವರು ‘ನೀವೂ ಕೂಡ ಆ ಸಾಧನಾ ಮಾರ್ಗದಲ್ಲಿ ಮುಂದುವರಿಯಲು ಸನ್ಮಾರ್ಗ ಕಾಲೇಜಿನ ಸಮಸ್ತ ಸಿಬ್ಬಂದಿಯ ಸಹಾಯ ಸಹಕಾರ ಇರುತ್ತದೆ’ ಎಂದರು. ಸಂಸ್ಥೆಯ ಅಧ್ಯಕ್ಷ ಪ್ರೊ. ರಾಜೇಶ ಕುಲಕರ್ಣಿ ಮಾತನಾಡಿ ‘ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಥೆ ಮತ್ತು ಕಾಲೇಜು ಸದಾ ಸನ್ನದ್ಧವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಯಶಸ್ಸಿನ ಮೆಟ್ಟಿಲನ್ನು ಹತ್ತಬೇಕು’ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ ಮಾತನಾಡಿ ‘ವಿದ್ಯಾರ್ಥಿಗಳು ಶಿಸ್ತು ಸಂಸ್ಕಾರ ರೂಢಿಸಿಕೊಳ್ಳುವುದರ ಜತೆಗೆ ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಬೇಕು’ ಎಂದರು. ಪ್ರೊ. ಪುನೀತ ದೇಶಪಾಂಡೆ ಪ್ರೊ. ರಾಹುಲ್ ಒಡೆಯರ್ ಪ್ರೊ. ಸೈಯ್ಯದ್‌ ಮತ್ತಿನ್ ಮುಲ್ಲಾ ಆಡಳಿತಾಧಿಕಾರಿ ಎಂ.ಸಿ.ಹಿರೇಮಠ ಇದ್ದರು. ಉಪನ್ಯಾಸಕ ಹೇಮಂತ ದಳವಾಯಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.