ADVERTISEMENT

3 ಕ್ಷೇತ್ರದಲ್ಲಿ ಕಮಲ, ಗದುಗಿನಲ್ಲಿ ಕೈಗೆ ಜೈ

‘ಗಟ್ಟಿ’ಯಾದ ಲಮಾಣಿ; ಬಂಡಿ ಏರಿದ ಕಳಕಪ್ಪ; ನರಗುಂದದಲ್ಲಿ ಮತ್ತೆ ಚನ್ನಪ್ಪಗೌಡರ ಆಡಳಿತ

​ಪ್ರಜಾವಾಣಿ ವಾರ್ತೆ
Published 16 ಮೇ 2018, 11:44 IST
Last Updated 16 ಮೇ 2018, 11:44 IST
3 ಕ್ಷೇತ್ರದಲ್ಲಿ ಕಮಲ, ಗದುಗಿನಲ್ಲಿ ಕೈಗೆ ಜೈ
3 ಕ್ಷೇತ್ರದಲ್ಲಿ ಕಮಲ, ಗದುಗಿನಲ್ಲಿ ಕೈಗೆ ಜೈ   

ಗದಗ: 2013ರಲ್ಲಿ ಕೆಜೆಪಿ, ಬಿಜೆಪಿ, ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಮೂರು ಭಾಗಗಳಾಗಿ ಒಡೆದು ಹೋಗಿದ್ದ ಕಮಲ ಪಾಳೆಯವು ಈ ಬಾರಿ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಮೂರನ್ನು ಮತ್ತೆ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 2008ರಲ್ಲಿ ನಾಲ್ಕೂ ಕ್ಷೇತ್ರಗಳಲ್ಲಿ ಕಮಲ ಅರಳಿತ್ತು. ಈ ಬಾರಿ ಗದಗ ಕ್ಷೇತ್ರದಲ್ಲಿ ಹಾಲಿ ಸಚಿವ ಎಚ್.ಕೆ. ಪಾಟೀಲ ಅವರು ಪ್ರಯಾಸಕರ ಗೆಲುವು ಸಾಧಿಸುವ ಮೂಲಕ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ನಾಲ್ಕು ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯಲ್ಲಿ, ನಾಲ್ಕೂ ಕಡೆ ಕಾಂಗ್ರೆಸ್– ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಗದಗ ಮತಕ್ಷೇತ್ರದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಬಿ.ಶ್ರೀರಾಮುಲು ಅವರ ಆಪ್ತ ಶಿಷ್ಯ, ಬಿಜೆಪಿಯ ಅನಿಲ ಮೆಣಸಿನಕಾಯಿ ಅವರು ಗೆಲ್ಲುವ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಜಿಲ್ಲೆಗೆ ಬಂದು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಹೋದ ಬಳಿಕ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎಂಬ ರಾಜಕೀಯ ಲೆಕ್ಕಾಚಾರ ಆರಂಭವಾಗಿತ್ತು. ಮಂಗಳವಾರ ಮತ ಎಣಿಕೆಯ 13ನೇ ಸುತ್ತಿನವರೆಗೂ ಅನಿಲ್‌ ಮೆಣಸಿನಕಾಯಿ ಮುನ್ನಡೆ ಕಾಯ್ದುಕೊಂಡಿದ್ದರು.

ADVERTISEMENT

14ನೇ ಸುತ್ತಿನಲ್ಲಿ ಕೇವಲ 07 ಮತಗಳ ಅಂತರದೊಂದಿಗೆ ಎಚ್‌.ಕೆ ಪಾಟೀಲ ಮುನ್ನಡೆ ಸಾಧಿಸಿದರು. 15 ಮತ್ತು 16ನೇ ಸುತ್ತಿನ ಮತ ಎಣಿಕೆ ಮುಗಿದಾಗ ಮತದಾರರ ತೀರ್ಪು ಎಚ್ಕೆ ಅವರ ಪರವಾಗಿತ್ತು. 1868 ಮತಗಳ ಅಂತರದಲ್ಲಿ ಕೈಗೆ ಗೆಲುವು ಒಲಿಯಿತು.

ಅಂದಾನಪ್ಪ ದೊಡ್ಡಮೇಟಿ ಕುಟುಂಬದ ರವೀಂದ್ರನಾಥ ದೊಡ್ಡಮೇಟಿ ಅವರ ಸ್ಪರ್ಧೆಯಿಂದ ರೋಣ ಕ್ಷೇತ್ರದಲ್ಲಿ ಕಾಂಗ್ರೆಸ್‌–ಬಿಜೆಪಿ– ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ ನಡೆಯಬಹುದು ಎಂಬ ನಿರೀಕ್ಷೆ ಹುಸಿಯಾಯಿತು.

ಕೊನೆಯವರೆಗೂ ಕಾಂಗ್ರೆಸ್‌–ಬಿಜೆಪಿ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಕಂಡುಬಂದ ಈ ಕ್ಷೇತ್ರದಲ್ಲಿ ಕಳಕಪ್ಪ ಬಂಡಿ, ಹಾಲಿ ಶಾಸಕ ಜಿ.ಎಸ್‌. ಪಾಟೀಲ ವಿರುದ್ಧ 7334 ಮತಗಳ ಅಂತರದಿಂದ ಗೆದ್ದರು.

ನರಗುಂದ ಮತಕ್ಷೇತ್ರದಲ್ಲಿ ಸಿ.ಸಿ ಪಾಟೀಲ ಅವರು 7979 ಮತಗಳ ಅಂತರದಿಂದ ಕಾಂಗ್ರೆಸ್‌ನ ಬಿ.ಆರ್‌ ಯಾವಗಲ್‌ ವಿರುದ್ಧ ಗೆಲುವು ಸಾಧಿಸಿದರು.

ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಈ ಹಿಂದೆ ಶಾಸಕರಾಗಿದ್ದ ಬಿಜೆಪಿಯ ರಾಮಣ್ಣ ಲಮಾಣಿ ನಿರಾಯಾಸ ಗೆಲುವು ದಾಖಲಿಸಿದರು.

ಜಿಲ್ಲೆಯಲ್ಲಿ ನೋಟಾ ಚಲಾವಣೆ

ಕ್ಷೇತ್ರ ನೋಟಾ
ಗದಗ 2,007
ಶಿರಹಟ್ಟಿ 1,209
ರೋಣ 2,671
ನರಗುಂದ 1,173
ಒಟ್ಟು  7,060

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.