ADVERTISEMENT

‘ಗಮಕದ ಮೂಲಕ ನಿತ್ಯ ಕುಮಾರವ್ಯಾಸ ಸ್ಮರಣೆ’

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 9:08 IST
Last Updated 2 ಜನವರಿ 2018, 9:08 IST

ಗದಗ:‘ಜನಮಾನಸದ ನೆಚ್ಚಿನ ಕವಿ ಕುಮಾರವ್ಯಾಸ. ಇಡೀ ನಾಡೇ ಗಮಕದ ಮೂಲಕ ಕುಮಾರವ್ಯಾಸನನ್ನು ನಿತ್ಯ ಸ್ಮರಿಸುತ್ತಿದೆ’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಭು ಬುರಬುರೆ ಹೇಳಿದರು.

ಕುಮಾರವ್ಯಾಸ ಸಂಘ ಮತ್ತು ಕರ್ನಾಟಕ ಗಮಕ ಕಲಾ ಪರಿಷತ್ತಿನ ಆಶ್ರಯದಲ್ಲಿ ನಡೆದ ಕುಮಾರವ್ಯಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಗರದ ಕುಮಾರವ್ಯಾಸ ಸಂಕಿರ್ಣದಲ್ಲಿರುವ ಕುಮಾರವ್ಯಾಸ ಪುತ್ಥಳಿಗೆ ಅವರು ಮಾಲಾರ್ಪಣೆ ಮಾಡಿದರು. ‘ಪುತ್ಥಳಿ ಇರುವ ಸ್ಥಳದ ಸುತ್ತಲೂ ಕಾರಂಜಿ ವ್ಯವಸ್ಥೆ ಮಾಡಲಾಗುವುದು’ ಎಂದರು.

ವೀರನಾರಾಯಣ ದೇವಸ್ಥಾನದಲ್ಲಿ ಕುಮಾರವ್ಯಾಸ ಕಂಬದ ಪೂಜೆ ನಡೆಯಿತು. ನಗರಸಭೆ ಸದಸ್ಯ ಶ್ರೀನಿವಾಸ ಹುಯಿಲಗೋಳ ಅವರು ಕುಮಾರವ್ಯಾಸ ಕಂಬಕ್ಕೆ ಪುಷ್ಪಾರ್ಚನೆ ಮಾಡಿದರು. ‘ಗದುಗಿನ ಹೆಮ್ಮೆಯ ಕವಿ ಕುಮಾರವ್ಯಾಸ. ಗದುಗಿನಲ್ಲಿ ಕುಮಾರವ್ಯಾಸ ಪ್ರತಿಷ್ಠಾನ ಸ್ಥಾಪನೆಯಾದರೆ ವಿಚಾರಗೋಷ್ಠಿ, ಗಮಕ ವಾಚನ–ವ್ಯಾಖ್ಯಾನ ಮತ್ತು ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಾಯಕವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಗಮಕ ಕಲಾ ಪರಿಷತ್ತಿನ ಜಿಲ್ಲಾ ಸಂಚಾಲಕರಾದ ದತ್ತಪ್ರಸನ್ನ ಪಾಟೀಲ ಕುಮಾರವ್ಯಾಸ ಕಾವ್ಯದಲ್ಲಿ ಭಕ್ತಿಯ ಮಹತ್ವದ ಕುರಿತು ಉಪನ್ಯಾಸ ನೀಡಿದರು. ‘ಕುಮಾರವ್ಯಾಸನು ವೀರನಾರಾಯಣನ ಕಿಂಕರನಾಗಿದ್ದು, ಇಡೀ ಕಾವ್ಯ ವೀರನಾರಾಯಣನ ಭಕ್ತಿಯ ದ್ಯೋತಕವಾಗಿ ಮೂಡಿಬಂದಿದೆ. ವೀರನಾರಾಯಣನ ಮಹತಿಯನ್ನು ಅರಿಯಬೇಕಾದರೆ ಕುಮಾರವ್ಯಾಸ ಭಾರತವನ್ನು ಅಧ್ಯಯನ ಮಾಡಬೇಕು’ ಎಂದು ಹೇಳಿದರು.

ಕುಮಾರವ್ಯಾಸ ಸಂಘದ ಉಪಾದ್ಯಕ್ಷ ಪ್ರೊ.ವಸಂತ ಸವದಿ ಅವರು ಕುಮಾರವ್ಯಾಸ ಭಾರತದ ಆಯ್ದ ಭಾಗಗಳನ್ನು ವಾಚಿಸಿದರು. ಸಂಘದ ಸಹಕಾರ್ಯದರ್ಶಿ ರಾಘವೇಂದ್ರ ಜೋಶಿ ಸ್ವಾಗತಿಸಿದರು. ಪ್ರಹ್ಲಾದಾಚಾರ್ಯ ನಿಲೂಗಲ್ಲ ನಿರೂಪಿಸಿದರು.‌ ರವೀಂದ್ರ ಜೋಶಿ, ಆರ್.ಎಸ್.ಕುಲಕರ್ಣಿ, ಜಿ.ಎ.ದೇಶಪಾಂಡೆ, ರವಿ ಪೂಜಾರ ಇದ್ದರು. ಅನಂತಾಚಾರ್ಯ ಪೂಜಾರ, ಪೂಜಾ ಕಾರ್ಯಕ್ರಮ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.