ADVERTISEMENT

ಕುರುಹಿನಶೆಟ್ಟಿ ಸಮಾಜ ಒಗ್ಗೂಡಲು ಸಲಹೆ

ನೀಲಕಂಠೇಶ್ವರ ದೇವಸ್ಥಾನದ ಬೆಳ್ಳಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2018, 7:23 IST
Last Updated 4 ಫೆಬ್ರುವರಿ 2018, 7:23 IST
ಲಕ್ಷ್ಮೇಶ್ವರ ಸಮೀಪದ ಶಿಗ್ಲಿಯಲ್ಲಿ ಶುಕ್ರವಾರ ನಡೆದ ನೀಲಕಂಠೇಶ್ವರ ದೇವಸ್ಥಾನದ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಹಳೇ ಹುಬ್ಬಳ್ಳಿ ವೀರಭಿಕ್ಷಾವರ್ತಿ ಮಠದ ಪಟ್ಟಾಧ್ಯಕ್ಷರಾದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು
ಲಕ್ಷ್ಮೇಶ್ವರ ಸಮೀಪದ ಶಿಗ್ಲಿಯಲ್ಲಿ ಶುಕ್ರವಾರ ನಡೆದ ನೀಲಕಂಠೇಶ್ವರ ದೇವಸ್ಥಾನದ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಹಳೇ ಹುಬ್ಬಳ್ಳಿ ವೀರಭಿಕ್ಷಾವರ್ತಿ ಮಠದ ಪಟ್ಟಾಧ್ಯಕ್ಷರಾದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು   

ಲಕ್ಷ್ಮೇಶ್ವರ: ‘ನೇಕಾರಿಕೆಯನ್ನೇ ಮುಖ್ಯ ಕಸುಬನ್ನಾಗಿ ಮಾಡಿಕೊಂಡಿರುವ ಕುರುಹಿನಶೆಟ್ಟಿ ಬಾಂಧವರು ಸಮಾಜದ ಅಬಿವೃದ್ಧಿಗಾಗಿ ಒಂದಾಗಬೇಕು’ ಎಂದು ಹಳೇ ಹುಬ್ಬಳ್ಳಿ ವೀರಭಿಕ್ಷಾವರ್ತಿ ಮಠದ ಪಟ್ಟಾಧ್ಯಕ್ಷರಾದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಇಲ್ಲಿಗೆ ಸಮೀಪದ ಶಿಗ್ಲಿಯಲ್ಲಿ ಶುಕ್ರವಾರ ಜರುಗಿದ ನೀಲಕಂಠೇಶ್ವರ ದೇವಸ್ಥಾನದ ಬೆಳ್ಳಿ ಮಹೋತ್ಸವ ಸಮಾರಂಭದ ಸಾನ್ನಿಧ್ಯದಿಂದ ಮಾತನಾಡಿದರು.

‘ಕುರುಹಿನಶೆಟ್ಟಿ ಜನಾಂಗದವರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದಾರೆ. ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಉತ್ತಮ ಪ್ರಜೆಯನ್ನಾಗಿ ಮಾಡುವ ಜವಾಬ್ದಾರಿ ಪಾಲಕರ ಮೇಲಿದೆ’ ಎಂದು ತಿಳಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ ಅವರು ಶಿಗ್ಲಿಯಲ್ಲಿ ನಿರ್ಮಾಣ ಆಗುತ್ತಿರುವ ಕುರುಹಿನಶೆಟ್ಟಿ ಸಮಾಜದ ಸಮುದಾಯ ಭವನದ ಭಾವಚಿತ್ರವನ್ನು ಬಿಡುಗಡೆ ಮಾಡಿದರು.

ನೀಲಕಂಠೇಶ್ವರ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಸ್ಥೆಯ ಅಧ್ಯಕ್ಷ ವೀರಣ್ಣ ಪವಾಡದ ಅಧ್ಯಕ್ಷತೆ ವಹಿಸಿದ್ದರು.

ಧಾರವಾಡ ಜಿಲ್ಲೆಯ ಕುರುಹಿನಶೆಟ್ಟಿ ಸಮಾಜದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ರೋಣದ, ಯತೀಶ್ವರಾನಂದ ಸ್ವಾಮೀಜಿ, ಇಷ್ಟಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ರೋಣದ ಮಾತನಾಡಿದರು.

ಸಂಸ್ಥೆ ಉಪಾಧ್ಯಕ್ಷ ವೀರೇಶ ನೂಲ್ವಿ, ಪಶುಪತೆಪ್ಪ ಶಿರಹಟ್ಟಿ, ಸಿದ್ದಪ್ಪ ಹರ್ತಿ ಇದ್ದರು. ನೀಲಕಂಠ ಹಲಗೋಡದ ಸ್ವಾಗತಿಸಿದರು. ಎಂ.ಕೆ. ಮಾದನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿತಾ ಬೆಳವಗಿ ವರದಿ ವಾಚನ ಓದಿದರು. ನಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ನಡೆಯಿತು.

ಅದ್ಧೂರಿ ಮೆರವಣಿಗೆ: ಕಾರ್ಯಕ್ರಮಕ್ಕೆ ಪೂರ್ವದಲ್ಲಿ ಹಳೇ ಹುಬ್ಬಳ್ಳಿ ವೀರಭಿಕ್ಷಾವರ್ತಿ ಮಠದ ಪಟ್ಟಾಧ್ಯಕ್ಷರಾದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಗ್ರಾಮಕ್ಕೆ ಬರುತ್ತಿದ್ದಂತೆ ಲಿಂಗರಾಜ ವರ್ತುಲದಲ್ಲಿ ಅವರನ್ನು ಕುರುಹಿನಶೆಟ್ಟಿ ಸಮಾಜ ಬಾಂಧವರು ಆದರದಿಂದ ಬರ ಮಾಡಿಕೊಂಡರು.

ನಂತರ ಅಲಂಕೃತ ಸಾರೋಟಿನಲ್ಲಿ ಸ್ವಾಮೀಜಿಗಳ ಮೆರವಣಿಗೆ ಆರಂಭವಾಯಿತು. ನೂರಾರು ಮಹಿಳೆಯರು ಪೂರ್ಣ ಕುಂಭದೊಂದಿಗೆ ಮೆರವಣಿಗೆಯೊಂದಿಗೆ ಸಾಗಿದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಂಚರಿಸಿತು.

ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್‌.ಪಿ. ಬಳಿಗಾರ, ಆರ್‌.ಎಂ. ತೇಲ್ಕರ್‌, ಮಹಾದೇವಪ್ಪ ಬೆಳವಗಿ, ಸೋಮಣ್ಣ ಬುರುಡಿ, ಡಿ.ವೈ. ಹುನಗುಂದ, ಪ್ರಭಣ್ಣ ಪವಾಡದ, ಸೋಮಣ್ಣ ಡಾಣಗಲ್‌, ಶಿವಣ್ಣ ಕೆಸರಳ್ಳಿ, ರಾಮಣ್ಣ ಲಮಾಣಿ ಶಿಗ್ಲಿ, ಸಿದ್ರಾಮಣ್ಣ ಪವಾಡದ, ಹನಮಂತಪ್ಪ ತಳವಾರ, ಈರಣ್ಣ ಅಕ್ಕೂರ, ಬಸಪ್ಪ ಮಾದನಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.