ADVERTISEMENT

ಪ್ರಜಾಪ್ರಭುತ್ವದಲ್ಲಿ ನಾಗರಿಕತೆ ಬಲಗೊಳ್ಳಬೇಕು: ಎಚ್ಕೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 10:25 IST
Last Updated 5 ಫೆಬ್ರುವರಿ 2018, 10:25 IST

ಗದಗ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕತೆ ಬಲಗೊಳ್ಳಬೇಕಿದೆ. ಗ್ರಾಮೀಣ ಭಾಗದ ಜನರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸಲು ಹಾಗೂ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತವಾಗಿಸಲು ಸರ್ವ ಪ್ರಯತ್ನಗಳನ್ನು ಕೈಕೊಳ್ಳಲಾಗಿದೆ’ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.

ನಗರದಲ್ಲಿ ₹1 ಕೋಟಿ ಅನುದಾನದಲ್ಲಿ ತಾಲ್ಲೂಕು ಪಂಚಾಯ್ತಿ ಕಟ್ಟಡದ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಸರ್ಕಾರವು ರಾಜ್ಯದ 18 ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. ಗದಗ ಜಿಲ್ಲೆಯು ಕೂಡ ಈ ಹಿರಿಮೆಗೆ ಪಾತ್ರವಾಗಲಿದೆ’ ಎಂದರು.

ರಾಜ್ಯದ 6 ಸಾವಿರ ಗ್ರಾಮ ಪಂಚಾಯ್ತಿಗಳನ್ನು ಭ್ರಷ್ಟಾಚಾರದಿಂದ ಮುಕ್ತವಾಗಿಸುವ ನಿಟ್ಟಿನಲ್ಲಿ ಸರ್ಕಾರ ಶ್ರಮಿಸಿದೆ. ಜತೆಗೆ ರಾಜ್ಯದಲ್ಲಿ 10,500 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಶುದ್ಧ ನೀರಿನ ಘಟಕಗಳನ್ನು ತೆರೆಯಲಾಗುವುದು ಎಂದು ಸಚಿವರು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ ಮಾತನಾಡಿದರು. ಉಪಾಧ್ಯಕ್ಷೆ ರೂಪಾ ಅಂಗಡಿ, ಸದಸ್ಯ ಸಿದ್ದು ಪಾಟೀಲ, ಪೂಜಾರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಉಪಾಧ್ಯಕ್ಷ ಎ.ಆರ್.ನದಾಫ, ಸದಸ್ಯೆ ಸುಜಾತಾ ಖಂಡು, ನಗರಸಭೆ ಅಧ್ಯಕ್ಷ ಬಿ.ಬಿ.ಅಸೂಟಿ, ಸಂಗೀತಾ ಹುಣಸಿಮರದ ಇದ್ದರು. ತಾಲ್ಲೂಕು ಪಂಚಾಯ್ತಿ ಇಒ ಎಚ್.ಎಸ್.ಜಿನಗಿ ಸ್ವಾಗತಿಸಿದರು. ವಿದ್ಯಾಧರ ದೊಡ್ಡಮನಿ ನಿರೂಪಿಸಿದರು. ಸದಸ್ಯ ಎಸ್.ಎಸ್.ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.