ADVERTISEMENT

ತ್ರಿಕೋಟಿ ಲಿಂಗ ಸ್ಥಾಪನೆಯತ್ತ ಮುಕ್ತಿಮಂದಿರ

ನಾಗರಾಜ ಎಸ್‌.ಹಣಗಿ
Published 11 ಫೆಬ್ರುವರಿ 2018, 10:56 IST
Last Updated 11 ಫೆಬ್ರುವರಿ 2018, 10:56 IST
ಲಕ್ಷ್ಮೇಶ್ವರ ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆಗಾಗಿ ತರಿಸಿರುವ ಬೃಹತ್‌ ಶಿವಲಿಂಗಗಳು
ಲಕ್ಷ್ಮೇಶ್ವರ ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆಗಾಗಿ ತರಿಸಿರುವ ಬೃಹತ್‌ ಶಿವಲಿಂಗಗಳು   

ಲಕ್ಷ್ಮೇಶ್ವರ: ಸಮೀಪದ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ಫೆ.13, 14 ಮತ್ತು 15ರಂದು ಶಿವರಾತ್ರಿ ಮಹೋತ್ಸವ ಅದ್ಧೂರಿಯಾಗಿ ಜರುಗಲಿದೆ.

ಸ್ಥಳದ ಮಹಿಮೆ: ಇಂದಿನ ಮುಕ್ತಿಮಂದಿರ ಹಿಂದೆ ಸಿದ್ದಯ್ಯನ ಅಡವಿಯಾಗಿತ್ತು. ಒಮ್ಮೆ ಗುರು ಗೋವಿಂದ ಭಟ್ಟರು ತಮ್ಮ ಪ್ರಿಯ ಶಿಷ್ಯ ಶರೀಫರೊಂದಿಗೆ ಈ ಮಾರ್ಗವಾಗಿ ಹಾದು ಹೋಗುವಾಗ ಅಲ್ಲಿನ ಒಂದು ಪತ್ರಿ ಮರದ ಬುಡದಲ್ಲಿ ಕುಳಿತುಕೊಳ್ಳುತ್ತಾರೆ. ಆಗ ಅವರಿಗೆ ಅವರು ಕುಳಿತ ಜಾಗದಿಂದ ಧೂಪದ ಸುವಾಸನೆ ಬರುತ್ತದೆ. ಆಗ ಗೋವಿಂದ ಭಟ್ಟರು ಶಿಷ್ಯನನ್ನು ಉದ್ದೇಶಿಸಿ ‘ಶರೀಫ, ಮುಂದೊಂದು ಈ ಅಡವಿ ಧರ್ಮ ಜಾಗೃತಿ ಮಾಡುವ ಕ್ಷೇತ್ರವಾಗಿ ಬೆಳೆಯುತ್ತದೆ’ ಎಂದು ಭವಿಷ್ಯ ನುಡಿಯುತ್ತಾರೆ.

ಮುಕ್ತಿಮಂದಿರದ ಸಂಸ್ಥಾಪಕರಾದ ವೀರಗಂಗಾಧರ ಸ್ವಾಮೀಜಿ ಹುಬ್ಬಳ್ಳಿ ತಾಲ್ಲೂಕು ಪಾಲೀಕೊಪ್ಪದಿಂದ ಇಲ್ಲಿಗೆ ಬಂದಾಗ ಈ ಸ್ಥಳ ಕಾಡು ಪ್ರಾಣಿಗಳಿಂದ ಕೂಡಿದ ಅರಣ್ಯವಾಗಿತ್ತು. ಕಠಿಣ ತಪಸ್ಸಿನಿಂದ ಗಂಗಾಧರ ಜಗದ್ಗುರು ಗಳು ಇದನ್ನೊಂದು ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ಮಾಡಿ ಅದಕ್ಕೆ ಮುಕ್ತಿಮಂದಿರ ಎಂದು ನಾಮಕರಣ ಮಾಡುತ್ತಾರೆ.

ADVERTISEMENT

ಗಂಗಾಧರ ಸ್ವಾಮೀಜಿ ಮುಕ್ತಿ ಮಂದಿರದಲ್ಲಿ ತ್ರಿಕೋಟಿ ಶಿವಲಿಂಗಗಳನ್ನು ಸ್ಥಾಪಿಸಬೇಕೆಂದು ಕನಸು ಕಂಡಿದ್ದರು. ಆದರೆ ಅವರ ಕನಸು ಅವರ ಜೀವಿತಾವಧಿಯಲ್ಲಿ ಈಡೇರಲಿಲ್ಲ. ಈಗಿನ ಪೀಠಾಧ್ಯಕ್ಷರು ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆಯ ಅಧ್ಯಕ್ಷರೂ ಆಗಿರುವ ವಿಮಲರೇಣುಕ ವೀರ ಮುಕ್ತಿ ಮುನಿ ಶಿವಾಚಾರ್ಯ ಸ್ವಾಮಿಗಳು ಈ ಕೆಲಸವನ್ನು ಭರದಿಂದ ನಡೆಸುತ್ತಿದ್ದಾರೆ.

ರಂಭಾಪುರಿ ಜಗದ್ಗುರು ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಇದಕ್ಕೆ ಕೈ ಜೋಡಿಸಿದ್ದಾರೆ. ಈಗಾಗಲೇ ಸಾವಿರಾರು ದೊಡ್ಡ ದೊಡ್ಡ ಶಿವಲಿಂಗಗಳು ಕ್ಷೇತ್ರದಲ್ಲಿ ಇವೆ. ಒಂದು ದೊಡ್ಡ ಶಿವಲಿಂಗದಲ್ಲಿ ಆರು ಸಾವಿರ ಸಣ್ಣ ಸಣ್ಣ ಲಿಂಗಗಳನ್ನು ಕೆತ್ತಲಾಗಿತ್ತರುತ್ತದೆ. ಇಂಥ ಐದು ಸಾವಿರ ದೊಡ್ಡ ಶಿವಲಿಂಗಗಳನ್ನು ಸ್ಥಾಪಿಸಿದಾಗ ತ್ರಿಕೋಟಿ ಶಿವಲಿಂಗ ಸ್ಥಾಪನೆ ಕಾರ್ಯ ಮುಗಿದಂತೆ. ಇದಕ್ಕಾಗಿ ಕ್ಷೇತ್ರದಲ್ಲಿ ಕೆಲಸಗಳು ಜೋರಾಗಿ ನಡೆಯುತ್ತಿವೆ.

ನಾಡಿನ ನೂರಾರು ಭಕ್ತರು ಆರು ಸಾವಿರ ರೂಪಾಯಿ ಕೊಟ್ಟು ಒಂದೊಂದು ಲಿಂಗವನ್ನು ದಾನವಾಗಿ ಕೊಡಿಸಿದ್ದಾರೆ. ಇನ್ನೇನು ಕೆಲ ದಿನಗಳಲ್ಲೇ ಮುಕ್ತಿಮಂದಿರದಲ್ಲಿ ಶಿವಲಿಂಗ ಸ್ಥಾಪನೆ ಕನಸು ನನಸಾಗ ಲಿದ್ದು ಮುಂದಿನ ದಿನಗಳಲ್ಲಿ ಇದರ ಕೀರ್ತಿ ಎಲ್ಲ ಕಡೆ ಪಸರಿಸಲಿದೆ.

ಈ ಕಾರ್ಯ ನೆರವೇರಲು ಭಕ್ತರ ಸಹಾಯ ಸಹಕಾರ ಬಹಳ ಮುಖ್ಯ ಎನ್ನುತ್ತಾರೆ ಮುಕ್ತಿಮಂದಿರದ ಪೀಠಾಧ್ಯಕ್ಷ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.