ADVERTISEMENT

ಹೊಸ ಬಸ್‌ ನಿಲ್ದಾಣದಲ್ಲಿ ಜನದಟ್ಟಣೆ

ಹುಚ್ಚೇಶ್ವರ ಅಣ್ಣಿಗೇರಿ
Published 12 ಫೆಬ್ರುವರಿ 2018, 10:23 IST
Last Updated 12 ಫೆಬ್ರುವರಿ 2018, 10:23 IST
ಹೊಸ ಬಸ್‌ ನಿಲ್ದಾಣದಲ್ಲಿ ಜನದಟ್ಟಣೆ ಕಂಡುಬಂತು
ಹೊಸ ಬಸ್‌ ನಿಲ್ದಾಣದಲ್ಲಿ ಜನದಟ್ಟಣೆ ಕಂಡುಬಂತು   

ಗದಗ: ನಗರದ ಹೊಸ ಬಸ್‌ ನಿಲ್ದಾಣದ ಆವರಣದಲ್ಲಿ ಕಾಂಕ್ರೀಟ್‌ ಅಳವಡಿಸುವ ಕಾಮಗಾರಿ ಕಾರ್ಯ ಮುಗಿದಿದ್ದು, ಕೆಲವು ತಿಂಗಳಿಂದ ನಿಲ್ದಾಣದ ಶೇ 95 ರಷ್ಟು ಜಾಗದಲ್ಲಿ ಬಸ್‌ಗಳು ಸಂಚರಿಸುತ್ತಿವೆ. ವಾರದೊಳಗೆ ನಿಲ್ದಾಣದ ಸಂಪೂರ್ಣ ಆವರಣವು ಸಂಚಾರ ಮುಕ್ತವಾಗಲಿದೆ.

ಶಿಥಿಲಗೊಂಡಿದ್ದ ಹಳೆ ಬಸ್‌ ನಿಲ್ದಾಣವನ್ನು ನೆಲೆ ಸಮಗೊಳಿಸಲಾಗಿದ್ದು, ಇದೇ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇಲ್ಲಿಂದ ಹೊಸ ಬಸ್‌ ನಿಲ್ದಾಣಕ್ಕೆ ತೆರಳಲು ಆರು ಸಿಟಿ ಬಸ್‌ಗಳನ್ನು ಬಿಡಲಾಗಿದೆ. ಒಬ್ಬರಿಗೆ ₹ 5 ಪ್ರಯಾಣ ದರ ನಿಗದಿಪಡಿಸಲಾಗಿದೆ.

ಸುತ್ತಮುತ್ತಲಿನ ತಾಲ್ಲೂಕುಗಳಿಗೆ ಹಾಗೂ ಬಾಗಲಕೋಟೆ, ಹಾವೇರಿ, ಬಳ್ಳಾರಿ, ದಾವಣಗೆರೆ, ಬೆಂಗಳೂರು, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಮತ್ತು ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶಕ್ಕೆ ಹೋಗುವ ಬಸ್‌ಗಳು ಹೊಸ ಬಸ್‌ ನಿಲ್ದಾಣದಿಂದ ಸಂಚರಿಸುತ್ತಿವೆ.

ADVERTISEMENT

ಹೀಗಾಗಿ ಪ್ರಯಾಣಿಕರು ಮುಂಡರಗಿ ರಸ್ತೆಯಲ್ಲಿರುವ ಹೊಸ ಬಸ್‌ ನಿಲ್ದಾಣಕ್ಕೆ ಬಂದು, ಇಲ್ಲಿಂದ ತಮ್ಮ ಊರಿಗೆ ತೆರಳುತಿದ್ದಾರೆ. ದಿನದಿಂದ ದಿನಕ್ಕೆ ಇಲ್ಲಿಗೆ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆವರಣದ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇಲ್ಲಿನ ಮೂರು ಸಾರ್ವಜನಿಕ ಶೌಚಾಲಯಗಳು ಬಳಕೆಗೆ ಮುಕ್ತವಾಗಿವೆ.

ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ವರ್ಷದ ಹಿಂದೆ ಬಿಕೋ ಎನ್ನುತ್ತಿದ್ದ ಹೊಸ ನಿಲ್ದಾಣದ ಸದ್ಯ ಸಾವಿರಾರು ಪ್ರಯಾಣಿಕರಿಂದ ತುಂಬಿ ಹೋಗಿದೆ. ಸಾರಿಗೆ ಇಲಾಖೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಒಂದು ವರ್ಷದಲ್ಲಿ ಹೊಸ ಬಸ್‌ ನಿಲ್ದಾಣದ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಆರು ತಿಂಗಳ ಹಿಂದೆ ಆವರಣದಲ್ಲಿ ಕೊರೆಸಿದ್ದ ಕೊಳವೆಬಾವಿಯಲ್ಲಿ ನಾಲ್ಕು ಇಂಚು ಸಿಹಿ ನೀರು ಬಿದ್ದಿದೆ. ಪ್ರಸ್ತುತ ನೀರಿನ ಸಮಸ್ಯೆ ಪರಿಹಾರವಾಗಿದೆ. ₹ 4 ಕೋಟಿ ಅನುದಾನದಲ್ಲಿ ಕಾಂಕ್ರೀಟ್‌ ಅಳವಡಿಕೆ ಕಾರ್ಯ ಮುಗಿದಿದ್ದರಿಂದ ಹೊಸ ಬಸ್‌ ನಿಲ್ದಾಣಕ್ಕೆ ಕಳೆ ಬಂದಿದೆ’ ಎಂದು ಹೇಳುತ್ತಾರೆ ಸಾರಿಗೆ ಸಿಬ್ಬಂದಿ.

‘ಕೆಲವು ತಿಂಗಳ ಹಿಂದೆ ಹೊಸ ಬಸ್‌ ನಿಲ್ದಾಣದಲ್ಲಿ ದಿನಕ್ಕೆ 600 ಬಸ್‌ಗಳು ಸಂಚರಿಸುತ್ತಿದ್ದವು. ಸದ್ಯ ಇಲ್ಲಿಂದ 1,850 ಬಸ್‌ಗಳು ಓಡಾಡುತ್ತಿವೆ. ನಿತ್ಯ 40 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದಾರೆ.

ಇಲ್ಲಿನ ಮೂರು ಮುಖ್ಯ ಗೇಟ್‌ಗಳು ಇದ್ದು, ಸದ್ಯ ಒಂದೇ ಗೇಟ್‌ನ ಮೂಲಕ ಸಂಚರಿಸಲು ಅವಕಾಶ ನೀಡಲಾಗಿದೆ. ವಾರದೊಳಗೆ ಸಂಪೂರ್ಣ ಬಸ್‌ ನಿಲ್ದಾಣವು ಸಂಚಾರಕ್ಕೆ ಮುಕ್ತವಾಗಲಿದೆ. ಈಗಾಗಲೇ ನಿಲ್ದಾಣದ ಕಟ್ಟಡಕ್ಕೆ ಬಣ್ಣ ಬಳಿಯಲಾಗಿದೆ. ಕೆಲವು ಬ್ಯಾಂಕ್‌ಗಳ ಅಧಿಕಾರಿಗಳು ಇಲ್ಲಿ ಎಟಿಎಂಗಳನ್ನು ಆರಂಭಿಸಲು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸುವಂತೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಸಚಿವ ಎಚ್.ಕೆ.ಪಾಟೀಲ ಅವರಿಗೆ ಮನವಿ ಮಾಡಲಾಗುವುದು’ ಎಂದು ಹೊಸ ಬಸ್‌ ನಿಲ್ದಾಣದ ಅಧಿಕಾರಿ ಪರಶುರಾಮ ಮಾರುತಿ ತೇರದಾಳ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊಸ ಬಸ್‌ ನಿಲ್ದಾಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಬೆನ್ನಲ್ಲೆ ಇಲ್ಲಿಗೆ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ನಿಲ್ದಾಣದ ಆವರಣದಲ್ಲಿ ದಿನಕ್ಕೆ ಮೂರು ಬಾರಿ ಸ್ವಚ್ಛ ಕಾರ್ಯ ನಡೆಯುತ್ತಿದೆ. ಇಲ್ಲಿನ ಶೌಚಾಲಯಗಳ ಸ್ವಚ್ಛತೆಗೆ ಹಾಗೂ ಪ್ರಯಾಣಿಕರಿಗೆ ಕುಡಿಯುವ ನೀರು ಒದಗಿಸಲು ಆದ್ಯತೆ ನೀಡಲಾಗಿದೆ’ ಎನ್ನುತ್ತಾರೆ ನಿಲ್ದಾಣದಲ್ಲಿರುವ ವ್ಯಾಪಾರಿ ರಾಘವೇಂದ್ರ.

* * 

ಹೊಸ ಬಸ್‌ ನಿಲ್ದಾಣದಲ್ಲಿ ಧೂಳು ಕಡಿಮೆಯಾಗಿದೆ. ಇಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ.
–ಚಂದ್ರಕಾಂತ ಕೊಡ್ಲಿ, ಗದುಗಿನ ಪ್ರಯಾಣಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.