ADVERTISEMENT

224 ಕ್ಷೇತ್ರಗಳಲ್ಲೂ ಆಪ್ ಸ್ಪರ್ಧೆ

ಆಮ್ ಆದ್ಮಿ ಪಾರ್ಟಿಯ ವಲಯ ವೀಕ್ಷಕ ಎಂ.ಅರವಿಂದ

​ಪ್ರಜಾವಾಣಿ ವಾರ್ತೆ
Published 26 ಮೇ 2022, 3:46 IST
Last Updated 26 ಮೇ 2022, 3:46 IST

ಗದಗ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಿಂದಲೂ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಅಲ್ಲದೆ, ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಕೂಡ ಆಪ್ ಸ್ಪರ್ಧಿಸಲಿದೆ’ ಎಂದು ಆಮ್ ಆದ್ಮಿ ಪಾರ್ಟಿಯ ವಲಯ ವೀಕ್ಷಕ ಎಂ.ಅರವಿಂದ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸಂಘಟನೆ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದ್ದು ಮೇ 27ರಂದು ಅಖಂಡ ಧಾರವಾಡ ಜಿಲ್ಲೆಯ ಸಮಾಲೋಚನಾ ಸಭೆ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಸಕ್ರಿಯ ಕಾರ್ಯಕರ್ತರನ್ನು ಗುರುತಿಸಿ, ಮುಂದಿನ ಚುನಾವಣೆಗೆ ಸಿದ್ಧತೆ ನಡೆಸಲಾಗುವುದು. ಆರು ತಿಂಗಳ ಮುನ್ನವೇ ಅಭ್ಯರ್ಥಿಗಳನ್ನು ಘೋಷಿಸಲಾಗುವುದು’ ಎಂದು ಅವರು ಹೇಳಿದರು.

‘ಯಾವುದೇ ಸರ್ಕಾರವಾದರೂ ಜನರಿಗೆ ಶಿಕ್ಷಣ, ನೀರು, ವಿದ್ಯುತ್ ಹಾಗೂ ಬಸ್ ಪಾಸ್ ಉಚಿತವಾಗಿ ನೀಡಬೇಕು. ಆಗ ಮಾತ್ರ ರಾಜ್ಯ ಅಭಿವೃದ್ದಿ ಹೊಂದಲು ಸಾಧ್ಯ’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿರುವುದರಿಂದ ಬಡವರ ಕೈಗೆ ಉತ್ತಮ ಶಿಕ್ಷಣ ಸಿಗದಂತಾಗಿದೆ. ಹುಬ್ಬಳ್ಳಿ ಹಾಗೂ ಈ ಭಾಗದ ಪಿಯು ಕಾಲೇಜುಗಳಲ್ಲಿ ಟ್ಯೂಷನ್‍ಗಳನ್ನೂ ತರಗತಿಗಳನ್ನಾಗಿ ಪರಿವರ್ತಿಸಲಾಗಿದ್ದು, ಇದು ಅನ್ಯಾಯದ ಪರಮಾವಧಿ’ ಎಂದು ಕಿಡಿಕಾರಿದರು.

‘ಸರ್ಕಾರ ಪ್ರಾಥಮಿಕ ಹಂತದಿಂದ ಪಿಯುವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಕಾಲೇಜುಗಳನ್ನು ತೆರೆಯಬೇಕು ಎಂದು ಆಗ್ರಹಿಸಿ ಶೀಘ್ರವೇ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘5 ವರ್ಷದಿಂದ ಈಚೆಗೆ ಶೇ 30ರಷ್ಡು ಜನರಿಗೆ ಮಾತ್ರ ವಿವಿಧ ವಸತಿ ಯೋಜನೆಯಡಿ ಹಕ್ಕುಪತ್ರಗಳು ದೊರಕಿವೆ. ರೈತರಿಗೆ ಸೂಕ್ತ ಸಮಯದಲ್ಲಿ ಬೀಜ ಗೊಬ್ಬರ ವಿತರಿಸಬೇಕು. ಆದರೆ, ಕೃಷಿ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ’ ಎಂದು ಅವರು ಆರೋಪಿಸಿದರು.

‘ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಗ್ರಾಮ ಸಂಪರ್ಕ ಅಭಿಯಾನ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ದೇಸಾಯಿ, ಎಲ್. ನಾರಾಯಣ ಸ್ವಾಮಿ, ಎಂ.ಎಂ.ಬುಡೇನಖಾನ, ಎ.ಜೆ.ತಿರ್ಲಾಪುರ, ನಾಗರಾಜ ಹಿಟ್ನಾಳ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.