ADVERTISEMENT

ಸಂಯಮದ ಜೀವನ ನಡೆಸಿ: ಸಲಗರೆ

ವಿಶ್ವ ಏಡ್ಸ್ ದಿನಾಚರಣೆ, ಎಚ್‌ಐವಿ ಸೋಂಕು ತಡೆಗಟ್ಟಲು ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 6:22 IST
Last Updated 2 ಡಿಸೆಂಬರ್ 2021, 6:22 IST
ಗದಗ ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ವಿಶ್ವ ಏಡ್ಸ್‌ ದಿನಾಚರಣೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಜಿ.ಸಲಗರೆ ಉದ್ಘಾಟಿಸಿದರು
ಗದಗ ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ವಿಶ್ವ ಏಡ್ಸ್‌ ದಿನಾಚರಣೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಜಿ.ಸಲಗರೆ ಉದ್ಘಾಟಿಸಿದರು   

ಗದಗ: ‘ಎಚ್‌ಐವಿ ಸೋಂಕಿನಿಂದ ಸಮಾಜವನ್ನು ಮುಕ್ತವಾಗಿಸಲು ಜನರು ದುಶ್ಚಟಗಳನ್ನು ಬಿಟ್ಟು, ಜಾಗೃತಿ ಹಾಗೂ ಸಂಯಮದ ಜೀವನ ನಡೆಸಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗೆರೆ ಹೇಳಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ವತಿಯಿಂದ ನಡೆದ ವಿಶ್ವ ಏಡ್ಸ್ ದಿನ ಉದ್ಘಾಟಿಸಿ ಅವರು ಮಾತನಾಡಿದರು.

‘ಅಸುರಕ್ಷಿತ ಲೈಂಗಿಕ ಸಂಪರ್ಕ, ಸೋಂಕಿತ ವ್ಯಕ್ತಿಯ ರಕ್ತವನ್ನು ಮತ್ತೊಬ್ಬರಿಗೆ ಹಾಕುವುದರಿಂದ, ಸೋಂಕಿತ ವ್ಯಕ್ತಿಯ ಸಿರಿಂಜ್ ಬಳಸುವುದರಿಂದ ಎಚ್‌ಐವಿ ಹರಡುತ್ತದೆ. ವಿಶ್ವ ಏಡ್ಸ್ ದಿನವನ್ನು ಪ್ರತಿ ವರ್ಷ ಡಿ. 1ರಂದು ಆಚರಿಸಲಾಗುತ್ತಿದ್ದು, ಎಚ್‌ಐವಿ ಸೋಂಕು ತಡೆಗಟ್ಟುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದು ಹೇಳಿದರು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕೆ., ‘ಎಚ್‌ಐವಿ ಸೋಂಕು ಹರಡುವುದನ್ನು ತಡೆಗಟ್ಟುವುದು ಹಾಗೂ ಸೋಂಕು ಪ್ರಮಾಣವನ್ನು ಸೊನ್ನೆಗೆ ತರುವುದು, ಎಚ್‌ಐವಿ ಬಾಧಿತರಿಗೆ ಆರೈಕೆ ಮಾಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶಗಳಾಗಿವೆ. ಇಲಾಖೆಯಿಂದ ಎಚ್‌ಐವಿ ತಪಾಸಣೆ, ಆಪ್ತ ಸಮಾಲೋಚನೆ, ಚಿಕಿತ್ಸೆ ನಿರಂತರವಾಗಿ ನಡೆದಿದೆ’ ಎಂದರು.

ಜಿಮ್ಸ್ ಸಮುದಾಯ ಆರೋಗ್ಯ ವಿಭಾಗದ ಡಾ. ಅರವಿಂದ ಕರಿನಾಗಣ್ಣವರ ಅವರು ಎಚ್‌ಐವಿ, ಏಡ್ಸ್ ರೋಗ ಬರಲು ಕಾರಣ ಹಾಗೂ ತಡೆಗಟ್ಟಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಉಪನ್ಯಾಸ ನೀಡಿದರು. ವಿರೂಪಾಕ್ಷಪ್ಪ ಗೊರನವರ ಹಾಗೂ ಕಲಾ ತಂಡದವರಿಂದ ಏಡ್ಸ್ ನಿಯಂತ್ರಣ ಕುರಿತು ಅರಿವು ಮೂಡಿಸುವ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.

ಎಚ್‌ಐವಿ ಸಮುದಾಯಕ್ಕೆ ಬೆಂಬಲ ನೀಡಿದ ಸಂಘ ಸಂಸ್ಥೆಗಳು ಹಾಗೂ ಎಚ್‌ಐವಿ ನಿಯಂತ್ರಣದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಇಲಾಖೆ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಡಾ. ವಿ.ಎಚ್. ಕೊಳ್ಳಿ , ಎಆರ್‌ಟಿ ವೈದ್ಯಾಧಿಕಾರಿ ಮಹ್ಮದ್ ಆಶ್ರಫ್‌, ಐಎಂಎ ಅಧ್ಯಕ್ಷ ಡಾ. ಪ್ಯಾರಾಅಲಿ ನೂರಾನಿ, ರೂಪಸೇನ ಚವ್ಹಾಣ, ಗೀತಾ ಕಾಂಬಳೆ, ಉಮೇಶ ಕರಮುಡಿ, ನರ್ಸಿಂಗ್ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಸಂಘ ಸಂಸ್ಥೆಯ ಪದಾಧಿಕಾರಿಗಳು ಇದ್ದರು.

ಜಿಲ್ಲಾ ಐಸಿಟಿಸಿ ಮೇಲ್ವಿಚಾರಕ ಬಿ.ಬಿ. ಲಾಳಗಟ್ಟಿ ಸ್ವಾಗತಿಸಿ, ವಂದಿಸಿದರು.

ಉಚಿತ ಕಾನೂನು ಸಲಹೆ

‘ಎಚ್‌ಐವಿ ಪೀಡಿತರಿಗೆ ಸರ್ಕಾರವು ಉಚಿತ ಕಾನೂನು ಸಲಹೆ ನೀಡುತ್ತಿದೆ’ ಎಂದು ಎಸ್.ಜಿ. ಸಲಗರೆ ಹೇಳಿದರು.

‘ಎಚ್‌ಐವಿ ಸೋಂಕಿತರು ಸ್ವಂತ ಉದ್ಯೋಗ ಮಾಡಲು ಸಬ್ಸಿಡಿ ನೀಡುತ್ತಿದೆ. ರೋಗ ಪರಿಹರಿಸುವುದಕ್ಕೆ ಗಮನ ಕೊಡುವುದರ ಬದಲು ರೋಗ ಬರದಂತೆ ಮುಂಜಾಗ್ರತೆ ವಹಿಸುವುದು ಮುಖ್ಯ. ಎಚ್‌ಐವಿ ಸೋಂಕು ತಡೆಗಟ್ಟುವ ಕುರಿತು ಅರಿವು ಮೂಡಿಸುವ ಹೆಚ್ಚಿನ ಕಾರ್ಯಕ್ರಮಗಳಾಗಬೇಕು’ ಎಂದು ಹೇಳಿದರು.

ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳ ಸಹಕಾರ, ಸಹಭಾಗಿತ್ವ ಹಾಗೂ ಸೂಕ್ತ ತಪಾಸಣೆ ನಡೆಸುತ್ತಿರುವುದರಿಂದ ಎಚ್‌ಐವಿ ಸೋಂಕಿನ ಪ್ರಮಾಣ ಇಳಿಮುಖವಾಗಿದೆ
ಡಾ. ಅರುಂಧತಿ ಕೆ., ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ

ಜಿಲ್ಲೆಯಲ್ಲಿ ಎಚ್‌ಐವಿ ಸೋಂಕು ಪ್ರಮಾಣ ಇಳಿಕೆಯಾಗಿದ್ದು, ಇದಕ್ಕೆ ಇಲಾಖೆಯ ಹಲವಾರು ತಿಳಿವಳಿಕೆ ಕಾರ್ಯಕ್ರಮಗಳು ಹಾಗೂ ಜಾಗೃತಿ ಜಾಥಾಗಳು ಕಾರಣ
ಡಾ.ಸತೀಶ ಬಸರಿಗಿಡದ, ಡಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.