ADVERTISEMENT

ಪ್ರವಾಹ ಸಂತ್ರಸ್ತರು ಅತಂತ್ರ

ದಶಕ ಕಳೆದರೂ ಸಿಗದ ಆಸರೆ ಮನೆಗಳ ಹಕ್ಕುಪತ್ರಗಳು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 5:06 IST
Last Updated 1 ಮಾರ್ಚ್ 2023, 5:06 IST
ಹೊಳೆಹಡಗಲಿ ಗ್ರಾಮದಲ್ಲಿರುವ ಆಶ್ರಯ ಮನೆಗಳು
ಹೊಳೆಹಡಗಲಿ ಗ್ರಾಮದಲ್ಲಿರುವ ಆಶ್ರಯ ಮನೆಗಳು   

ಹೊಳೆಆಲೂರ: ಅಮರಗೋಳ ಪಂಚಾಯ್ತಿ ವ್ಯಾಪ್ತಿಯ ಹೊಳೆಹಡಗಲಿಯ ಗ್ರಾಮಸ್ಥರು ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡು ಸುಮಾರು 12 ವರ್ಷಗಳೇ ಗತಿಸಿದ್ದು, ನಿರಾಶ್ರಿತರಿಗಾಗಿ ಸಂಘ–ಸಂಸ್ಥೆಗಳ ಸಹಕಾರದೊಂದಿಗೆ ನಿರ್ಮಿಸಿದ ಆಸರೆ ಮನೆಗಳ ಮಾಲೀಕತ್ವ ಇನ್ನೂ ಸಿಕ್ಕಿಲ್ಲ!

ಹೊಳೆಹಡಗಲಿ ಗ್ರಾಮ ಪಂಚಾಯ್ತಿ ಸದಸ್ಯರೂ ಸೇರಿದಂತೆ ಗ್ರಾಮದ ಪ್ರಮುಖರು ವಾರಕ್ಕೊಮ್ಮೆ ರೋಣ ತಾಲ್ಲೂಕು ಪಂಚಾಯ್ತಿ, ತಹಶೀಲ್ದಾರ್‌ ಕಚೇರಿ, ಗದಗ ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡುತ್ತಿದ್ದರೂ ಸಮಸ್ಯೆ ಬಗೆಹರಿಯದಿಲ್ಲ ಎಂದು ಸಂತ್ರಸ್ತರು ಅಲವತ್ತುಕೊಂಡಿದ್ದಾರೆ.

12 ವರ್ಷಗಳಿಂದ ಗ್ರಾಮಸ್ಥರು, ತಮ್ಮ ಹಕ್ಕು‌ ಪಡೆಯಲು ಹರಸಾಹಸಪಡುತ್ತಿದ್ದಾರೆ. ಗ್ರಾಮ‌ ಪಂಚಾಯ್ತಿ ಸದಸ್ಯರು ಈಗಾಗಲೇ ಪಂಚಾಯ್ತಿಯಲ್ಲಿ ಠರಾವು ಪಾಸು ಮಾಡಿ, ಹಂಚಿಕೆ ಪ್ರಕ್ರಿಯೆಯನ್ನು ಸರಳೀಕರಿಸಿದ್ದರೂ ಮೇಲಧಿಕಾರಿಗಳು ಮಾತ್ರ ಸಮಸ್ಯೆ ಬಗೆಹರಿಸುವಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ADVERTISEMENT

ಸ್ಥಳೀಯ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಕಂದಾಯ ಇಲಾಖೆಯ ನೇತೃತ್ವದಲ್ಲಿ ಅನೇಕ ಬಾರಿ ಸಭೆ ನಡೆಸಿ, ಕೆಲವು ಸಂತ್ರಸ್ತರಿಗೆ ಮನೆ ಹಕ್ಕುಪತ್ರ ವಿತರಿಸಲಾಗಿದೆ. ಆದರೆ, ಮನೆ ಸಿಗದ ಸಂತ್ರಸ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೇನು ಪರಿಹಾರ ಎಂಬುದರ ಬಗ್ಗೆ ಅಧಿಕಾರಿಗಳಲ್ಲಿ ಸ್ಪಷ್ಟತೆ ಇಲ್ಲದಿರುವುದು, ಆತಂಕ ಹೆಚ್ಚಾಗುವಂತೆ ಮಾಡಿದೆ.

ಅನೇಕ ಸಂತ್ರಸ್ತರು ಗುಡಿಸಲಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಮದ್ಯೆ ಕೆಲವು ಪ್ರಭಾವಿಗಳು ಅಧಿಕ ಮನೆಗಳ ಹಕ್ಕುಪತ್ರ ಪಡೆದಿರುವ ದೂರುಗಳು ಸಹ ವ್ಯಕ್ತವಾಗಿವೆ. ಪಂಚಾಯ್ತಿಯ ನಿರ್ಣಯ ಹಾಗೂ ಜಿಲ್ಲಾಧಿಕಾರಿ ನಿರ್ದೇಶನದಂತೆ ಶೀಘ್ರ ಮನೆಹಂಚಿಕೆ ಮಾಡದಿದ್ದರೆ, ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

‘ಈಗಾಗಲೇ ಕಚೇರಿಗಳಿಗೆ ಅಲೆದದ್ದು ಬಿಟ್ಟರೆ ಹೋರಾಟಕ್ಕೆ ಯಾವುದೇ ಫಲ ದೊರಕಿಲ್ಲ. ಮನೆಯ ಹಕ್ಕುಪತ್ರ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಗ್ರಾಮ ಪಂಚಾಯ್ತಿ ಸದಸ್ಯರಾದ ನಿಂಗಪ್ಪ ದಂಡಿನ, ರೇಣುಕಾ ಸಂಗನಗೌಡ ಕೆಂಚನಗೌಡ್ರ, ರುದ್ರಪ್ಪ ಮುದಿಯಪ್ಪನವರು ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ: ಆಕ್ರೋಶ

2008ರಲ್ಲಿ ಮಲಪ್ರಭೆ ಹಾಗೂ ಬೆಣ್ಣೆಹಳ್ಳದ ತೀವ್ರ ಪ್ರವಾಹಕ್ಕೆ ತುತ್ತಾದ ಅನೇಕ ಗ್ರಾಮಗಳಲ್ಲಿ ಹೊಳೆಆಲೂರ ಹೋಬಳಿಯ ಹೊಳೆಹಡಗಲಿ ಗ್ರಾಮವೂ ಒಂದು. ಆಗಿನ ಸರ್ಕಾರ ಸಂತ್ರಸ್ತರಿಗೆ ನೆರವಾಗಲೆಂದು ನವಗ್ರಾಮಗಳನ್ನು ನಿರ್ಮಿಸಿ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿತ್ತು. ಆದರೆ ಇಷ್ಟು ವರ್ಷಗಳು ಕಳೆದರೂ ಮನೆ ಹಂಚಿಕೆ ಪ್ರಕ್ರಿಯೆ ಮಾತ್ರ ಪೂರ್ಣಗೊಂಡಿಲ್ಲ. ತಾಲ್ಲೂಕು ಆಡಳಿತ ಮತ್ತು ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿಧಾನಗತಿಯ ಕಾರ್ಯನಿರ್ವಹಣೆಗೆ ಗ್ರಾಮಸ್ಥರು ಹೈರಾಣಾಗದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಅವರೇ ನಿರ್ದೇಶನ ನೀಡಿದ್ದರೂ, ತಾಲ್ಲೂಕು ಪಂ‌ಚಾಯ್ತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಮನೆ ಹಂಚಿಕೆಯಲ್ಲಿನ ಸಮಸ್ಯೆ ಕುರಿತು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಮಾರ್ಚ್‌ 2ರಿಂದ ಗ್ರಾಮ ಪಂಚಾಯ್ತಿ ಕಚೇರಿ ಮುಂದೆ ಮುಷ್ಕರ ನಡೆಸಲಿದ್ದೇವೆ
ಸಂಗನಗೌಡ ಕೆಂಚನಗೌಡ್ರ, ಗ್ರಾಮಸ್ಥ

ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮನೆ ಹಂಚಿಕೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗಿದ್ದು ಹೊಳೆಹಡಗಲಿಯ ಗ್ರಾಮಸ್ಥರು ತಕರಾರು ಸಲ್ಲಿಸಿದ್ದು ಹಂಚಿಕೆ ವಿಳಂಬವಾಗಲು ಕಾರಣವಾಗಿದೆ.
ರೇಣುಕಾ ಪಾಟೀಲ, ಅಧ್ಯಕ್ಷರು, ಅಮರಗೋಳ ಗ್ರಾಮ ಪಂಚಾಯ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.