ADVERTISEMENT

ಸೊಳ್ಳೆಗಳ ಬಗ್ಗೆ ಎಚ್ಚರವಿರಲಿ: ಬಸವರಾಜ ಬಡಿಗೇರ

ಸ್ವಚ್ಛತಾ ಕಾರ್ಮಿಕರಿಗೆ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಮೇ 2025, 16:01 IST
Last Updated 16 ಮೇ 2025, 16:01 IST
ಗಜೇಂದ್ರಗಡದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಡೆಂಗಿ ದಿನಾಚರಣೆ ಅಂಗವಾಗಿ ನಡೆದ ಕಾರ್ಯಾಗಾರಕ್ಕೆ ತಾಲ್ಲೂಕು ಪಂಚಾಯ್ತಿ ಎಡಿ ಬಸವರಾಜ ಬಡಿಗೇರ ಉದ್ಘಾಟಿಸಿದರು
ಗಜೇಂದ್ರಗಡದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಡೆಂಗಿ ದಿನಾಚರಣೆ ಅಂಗವಾಗಿ ನಡೆದ ಕಾರ್ಯಾಗಾರಕ್ಕೆ ತಾಲ್ಲೂಕು ಪಂಚಾಯ್ತಿ ಎಡಿ ಬಸವರಾಜ ಬಡಿಗೇರ ಉದ್ಘಾಟಿಸಿದರು   

ಗಜೇಂದ್ರಗಡ: ʼಸೋಂಕಿತ ಸೊಳ್ಳೆಗಳಿಂದ ಡೆಂಗಿ, ಚಿಕನ್ ಗುನ್ಯಾ, ಜಿಕಾ, ಮಲೇರಿಯಾ, ಆನೇಕಾಲು ರೋಗ, ಮೆದುಳು ಜ್ವರದಂತಹ ಕಾಯಿಲೆಗಳು ಹಬ್ಬಿತ್ತವೆ. ಹೀಗಾಗಿ ಸೊಳ್ಳೆಗಳ ಬಗ್ಗೆ ಎಚ್ಚರ ವಹಿಸಬೇಕುʼ ಎಂದು ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ರಾಷ್ಟ್ರೀಯ ಡೆಂಗಿ ದಿನಾಚರಣೆ ಅಂಗವಾಗಿ ಪುರಸಭೆ ಪೌರ ಕಾರ್ಮಿಕರು, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯ್ತಿಯ ಸ್ವಚ್ಛತಾ ಕಾರ್ಮಿಕರಿಗೆ ಕೀಟ ಜನ್ಯ ರೋಗಗಳ ಬಗ್ಗೆ ಪುನರ್ಮನ ಮತ್ತು ಅಡ್ವಕೇಶ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ʼಡೆಂಗಿ ಸೋಂಕಿತ ಈಡಿಸ್ ಇಜಿಪ್ಟೆ ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತಿದ್ದು, ಸೊಳ್ಳೆಗಳ ಬಗ್ಗೆ ಪ್ರತಿಯೊಬ್ಬ ಗಮನ ಹರಿಸಿದಲ್ಲಿ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದಾಗಿದೆ. ಸಾರ್ವಜನಿಕರು ಘನ ತ್ಯಾಜ್ಯಗಳ ಸೂಕ್ತ ವಿಲೇವಾರಿ, ಮನೆಯ ಸುತ್ತ ನೀರು ನಿಲ್ಲದಂತೆ ನೋಡಿಕೊಂಡು ವೈಯಕ್ತಿಕ ರಕ್ಷಣಾ ಕ್ರಮಗಳನ್ನು ಬಳಸದಲ್ಲಿ ಕೀಟ ಜನ್ಯ ರೋಗಗಳನ್ನು ತಡೆಗಟ್ಟಬಹುದಾಗಿದೆʼ ಎಂದರು.

ADVERTISEMENT

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ಗೀತಾ ಕಾಂಬಳೆ ಮಾತನಾಡಿ, ʼವಿಪರೀತ ಜ್ವರ, ಕಣ್ಣು ಹಿಂಭಾಗದಲ್ಲಿ ನೋವು, ಸಂದುಗಳಲ್ಲಿ ಸೆಳೆತ, ಮೈ ಮೇಲೆ ಗಂಧೆಗಳು ಏಳುವುದು ನಂತರ ಮೂಗು ವಸಡುಗಳಿಂದ ರಕ್ತಸ್ರಾವದಂತಹ ಡೆಂಗಿ ಲಕ್ಷಣಗಳಾಗಿದ್ದು, ಪ್ರಾರಂಭದ ಹಂತದಲ್ಲಿಯೇ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ರಕ್ತ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆಯಬೇಕುʼ ಎಂದು ಸಲಹೆ ನೀಡಿದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ.ಹಾದಿಮನಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಕೀಟಜನ್ಯ ರೋಗಗಳ ಬಗ್ಗೆ ಕಿರು ಚಲನಚಿತ್ರ ಪ್ರದರ್ಶನ ಮತ್ತು ವಸ್ತು ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಇಓ ಮಂಜುಳಾ ಹಕಾರಿ, ಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶರಣು ಗಾಣಿಗೇರ, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಆರ್.ಪಾಟೀಲ, ಮನೋಹರ ಕಣ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.