ADVERTISEMENT

ಪ್ರಧಾನಿ ಮೋದಿ ಕೈ ಬಲಪಡಿಸಿ: ಸಂಸದ ಬೊಮ್ಮಾಯಿ

ಧಾರವಾಡ ವಿಭಾಗ ಮಟ್ಟದ ಹರ್ ಘರ್ ತಿರಂಗಾ ಯಾತ್ರೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 4:51 IST
Last Updated 10 ಆಗಸ್ಟ್ 2025, 4:51 IST
ನರಗುಂದ ಪಟ್ಟಣದಲ್ಲಿ ಶನಿವಾರ ನಡೆದ ಧಾರವಾಡ ವಿಭಾಗ ಮಟ್ಟದ ಹರ್ ಘರ್ ತಿರಂಗಾ ಯಾತ್ರೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು
ನರಗುಂದ ಪಟ್ಟಣದಲ್ಲಿ ಶನಿವಾರ ನಡೆದ ಧಾರವಾಡ ವಿಭಾಗ ಮಟ್ಟದ ಹರ್ ಘರ್ ತಿರಂಗಾ ಯಾತ್ರೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು   

ನರಗುಂದ: ‘ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಿ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸಿ. ಅವರನ್ನು ಮನೆಗೆ ಕಳುಹಿಸುವ ಮುಖಾಂತರ ಬಲಿಷ್ಠ, ಸಮೃದ್ಧಿಯ ಭಾರತ ಕಲ್ಪನೆಯನ್ನು ಮುಂದಿನ ಜನಾಂಗಕ್ಕೆ ಬಿಟ್ಟು ಹೋದರೆ ನಾವು ನಿಜವಾದ ಭಾರತಮಾತೆಯ ಮಕ್ಕಳು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ನಡೆದ ಧಾರವಾಡ ವಿಭಾಗ ಮಟ್ಟದ ಹರ್ ಘರ್ ತಿರಂಗಾ ಯಾತ್ರೆಯಲ್ಲಿ ಮಾತನಾಡಿದರು.

‘ಭಾರತದ ರೈತ ಏನು ಉತ್ಪಾದನೆ ಮಾಡುತ್ತಾನೋ ಅದೇ ಉತ್ಪಾದನೆಯನ್ನು ಅಮೆರಿಕ ರೈತ ಮಾಡುತ್ತಾನೆ. ಅದನ್ನು ಭಾರತದಲ್ಲಿ ಮಾರಾಟ ಮಾಡಲು ಅವಕಾಶ ಕೊಡಬೇಕೆಂದು ಟ್ರಂಪ್ ಕೇಳಿದರು. ಆದರೆ, ಅಮೆರಿಕದ ರೈತರು ಬೆಳೆದ ಉತ್ಪನ್ನ ಇಲ್ಲಿ ಮಾರಾಟ ಮಾಡಿದರೆ ನಮ್ಮ ರೈತರು ಬೆಳೆದ ಬೆಳೆ ಸ್ಥಿತಿ ಏನಾಗುತ್ತದೆ. ನರಗುಂದ ರೈತ ಬಂಡಾಯದ ಊರು, ರೈತರ ಹಿತ ಶಕ್ತಿ ಕಾಪಾಡಲು ನಮಗೆಲ್ಲರಿಗೂ ಶಕ್ತಿ ಕೊಟ್ಟಿರುವುದು, ಬಾಬಾ ಸಾಹೇಬ, ಜಗನ್ನಾಥ ಜೋಶಿ ಹುಟ್ಟಿರುವ ಕ್ಷೇತ್ರದಲ್ಲಿ ರೈತರು ಜಾಗೃತಿ ಆದರೆ ಇಡೀ ಕರ್ನಾಟಕದಲ್ಲಿ ರೈತರ ಜಾಗೃತಿ ಆಗುತ್ತದೆ’ ಎಂದರು.

ADVERTISEMENT

‘ಅಮೆರಿಕದಲ್ಲಿ ರೈತರಿಗೆ ಶೇ 60ರಷ್ಟು ಸಬ್ಸಿಡಿ ಇದೆ. ಅಲ್ಲಿ ಶೇ 6ರಷ್ಟು ರೈತರು ಮಾತ್ರ ಕೃಷಿಯಲ್ಲಿ ತೊಡಗಿದ್ದಾರೆ. ನಮ್ಮಲ್ಲಿ ಶೇ 60ರಷ್ಟು ರೈತರು ಕೃಷಿಯಲ್ಲಿ ತೊಡಗಿದ್ದಾರೆ. ಅಲ್ಲಿ ಶೇ 60ರಷ್ಟು ಬೀಜ, ಗೊಬ್ಬರ, ನೀರು, ಸಬ್ಸಿಡಿ ಸಿಗುತ್ತದೆ. ಇಲ್ಲಿ ಎಲ್ಲವೂ ಸೇರಿ ಶೇ 6ರಷ್ಟು ಸಬ್ಸಿಡಿ ಸಿಗುತ್ತದೆ. ಅದಕ್ಕೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ರೈತರ ಹಿತ ಕಾಯುವಲ್ಲಿ ಯಾವುದೇ ರಾಜಿ ಇಲ್ಲ ಎಂದರು.

‘ಲೋಕಸಭೆ ವಿರೋಧ ಪಕ್ಷದ ನಾಯಕ ಲೋಕಸಭೆಯಲ್ಲಿ ಮಾತನಾಡುವುದನ್ನು ಬಿಟ್ಟು ಹೊರಗಡೆ ಬಂದು ಮಾತನಾಡುತ್ತಾರೆ. ಟ್ರಂಪ್ ಭಾರತದ ಆರ್ಥಿಕ ಪರಿಸ್ಥಿತಿ ಸತ್ತಿದೆ ಅಂತ ಹೇಳಿದರು, ಅದನ್ನೇ ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ಇಡೀ ಜಗತ್ತು ಶೇ 1 ರಷ್ಟು ಅಭಿವೃದ್ಧಿಯಾಗುತ್ತಿದೆ. ಭಾರತ ಶೇ 6.5 ರಷ್ಟು ಅಭಿವೃದ್ಧಿ ಆಗುತ್ತಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ’ ಎಂದರು.

ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನ ಬರುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಅದರ ಬಗ್ಗೆ ತನಿಖೆಯಾದರೆ ಕಾಂಗ್ರೆಸ್‌ನವರ ಮತಗಳ್ಳತನ ಬಯಲಿಗೆ ಬರುತ್ತದೆ.
– ಬಸವರಾಜ ಬೊಮ್ಮಾಯಿ, ಸಂಸದ

ರಾಹುಲ್‌ ಅವರದ್ದು ಹಸಿ ಸುಳ್ಳು

‘ರಾಹುಲ್ ಗಾಂಧಿ ಮತಗಳ್ಳತನದ ಆರೋಪ ಮಾಡಿ ಆಟಂಬಾಂಬ್ ಅಂತ ಹೇಳಿ ತನ್ನ ಕೈಯಲ್ಲಿ ಇಟ್ಟುಕೊಂಡು ತಾವೇ ಕೈ ಸುಟ್ಟುಕೊಂಡಿದ್ದಾರೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

‘2014ರಲ್ಲಿ ಯುಪಿಎ ಸರ್ಕಾರ ಇದ್ದಾಗ ಮನಮೋಹನ್ ಸಿಂಗ್ ಪಧಾನಿಯಾಗಿದ್ದರು. ಮಹಾದೇವಪುರದಲ್ಲಿ ಆಗಲೇ 1 ಲಕ್ಷ ಮತದಾರರು ಹೆಚ್ಚಳವಾಗಿದ್ದರು. ಸರ್ವಜ್ಞ ನಗರದಲ್ಲಿ ಸುಮಾರು 30 ಸಾವಿರ ಮತದಾರರು ಹೆಚ್ಚಾಗಿದ್ದರು. ರಾಹುಲ್ ಗಾಂಧಿ ಹೇಳುತ್ತಿರುವುದು ಹಸಿ ಸುಳ್ಳು ಎಂದು ಜನರೇ ಮಾತನಾಡುತ್ತಿದ್ದಾರೆ’ ಎಂದರು.

ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಸಿದ್ದರಾಮಯ್ಯ ಅವರ ಚುನಾವಣೆಯಲ್ಲಿ 2 ಸಾವಿರ ಮತ ಖರೀದಿಸಿದ್ದೇವು ಎಂದು ಹೇಳಿದ್ದಾರೆ. ಚುನಾವಣಾ ಆಯೋಗ ರಾಹುಲ್ ಗಾಂಧಿಗೆ ಅಫಿಡವಿಟ್ ನೀಡಲು ಹೇಳಿದ್ದರು. ಅವರು ಅಫಿಡವಿಟ್ ನೀಡದೇ ಪಲಾಯನ ಮಾಡಿದ್ದರು. ಜನಗಳ ಮನಸಲ್ಲಿ ಸುಳ್ಳು ಸುದ್ದಿ ಬಿತ್ತಿ ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಸಂವಿಧಾನಾತ್ಮಕವಾಗಿ ಪ್ರಮಾಣವಚನ ತೆಗೆದುಕೊಂಡು ಏನು ಬೇಕಾದರೂ ಮಾಡಬಹುದೇ ಎಂದು ಪ್ರಶ್ನಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.