ADVERTISEMENT

ಮಕ್ಕಳ ಶೈಕ್ಷಣಿಕ ವೆಚ್ಚ ಭರಿಸುವ ಭರವಸೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 3:27 IST
Last Updated 3 ಅಕ್ಟೋಬರ್ 2021, 3:27 IST
ಸಭಾಪತಿ ಬಸವರಾಜ ಹೊರಟ್ಟಿ ಅವರು ಉಮಾದೇವಿಯನ್ನು ಭೇಟಿಯಾಗಿ ಸಾಂತ್ವನ ಹೇಳಿದರು
ಸಭಾಪತಿ ಬಸವರಾಜ ಹೊರಟ್ಟಿ ಅವರು ಉಮಾದೇವಿಯನ್ನು ಭೇಟಿಯಾಗಿ ಸಾಂತ್ವನ ಹೇಳಿದರು   

ಗದಗ: ‘ಮನನೊಂದು ಮಕ್ಕಳ ಸಮೇತ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ಉಮಾದೇವಿ ಅವರ ನೋವಿಗೆ ಸ್ಪಂದಿಸುವುದರ ಜೊತೆಗೆ ಅವರ ಮೂವರು ಮಕ್ಕಳ ಶೈಕ್ಷಣಿಕ ಖರ್ಚು, ವೆಚ್ಚವನ್ನು ಅವ್ವ ಸೇವಾ ಟ್ರಸ್ಟ್‌ನಿಂದ ಭರಿಸಲಾಗುವುದು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಶನಿವಾರ ಗದಗ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಉಮಾದೇವಿ ಅವರ ಆರೋಗ್ಯ ವಿಚಾರಿಸಿ ಮಾತನಾಡಿದ ಅವರು, ‘ಶಿಕ್ಷಕರಾಗಿದ್ದ ಪತಿ ಸಂಗಪ್ಪ ಶೆಲ್ಲಿಕೇರಿ ನಾಲ್ಕು ತಿಂಗಳ ಹಿಂದೆ ಕೊರೊನಾದಿಂದ ಸಾವನ್ನಪ್ಪಿದ್ದು, ನಮಗೆಲ್ಲರಿಗೂ ನೋವು ತಂದಿದೆ. ಆ ನೋವು ಉಮಾದೇವಿ ಅವರಿಗೆ ಇರುವುದು ಸಹಜ’ ಎಂದರು.

‘ಕಷ್ಟ ಬಂದಾಗ ಧೈರ್ಯದಿಂದ ಎದುರಿಸಬೇಕು. ಯಾವುದೋ ಕಾರಣಕ್ಕೆ ದುಡುಕಿನ ನಿರ್ಧಾರ ಸರಿಯಲ್ಲ. ನನ್ನ ಸಹೋದರಿ ಸಮಾನರಾದ ನೀವು ಯಾವುದಕ್ಕೂ ಆತಂಕಪಡುವ ಅವಶ್ಯಕತೆ ಇಲ್ಲ’ ಎಂದು ಹೇಳಿದರು.

ADVERTISEMENT

ಬಸವರಾಜ ಹೊರಟ್ಟಿ ಅವರ ಮಾತಿಗೆ ಸ್ಪಂದಿಸಿದ ಉಮಾದೇವಿ, ‘ಮುಂದೆ ಇಂತಹ ತಪ್ಪು ಮಾಡುವುದಿಲ್ಲ. ದುಡುಕಿನ ನಿರ್ಧಾರದಿಂದ ಅವಘಡ ಸಂಭವಿಸಿತು. ಆ ಪಾಪಪ್ರಜ್ಞೆ ಕಾಡುತ್ತಿದೆ. ಮಕ್ಕಳೊಂದಿಗೆ ಜೀವನ ನಡೆಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.