ADVERTISEMENT

ಮುಂಗಾರು:1.51ಲಕ್ಷ ಹೆಕ್ಟೇರ್‌ ಬೆಳೆ ಹಾನಿ?

ಕೃಷಿ, ತೋಟಗಾರಿಕೆ ಇಲಾಖೆಯಿಂದ ಜಂಟಿ ಸಮೀಕ್ಷೆ ಪ್ರಾರಂಭ

ಜೋಮನ್ ವರ್ಗಿಸ್
Published 6 ಅಕ್ಟೋಬರ್ 2018, 6:55 IST
Last Updated 6 ಅಕ್ಟೋಬರ್ 2018, 6:55 IST
ಗದಗ ಹೊರವಲಯದ ಜಮೀನಿನಲ್ಲಿ ಶುಕ್ರವಾರ ಹಿಂಗಾರು ಕೃಷಿ ಚಟುವಟಿಕೆ ಕಾರ್ಯದಲ್ಲಿ ತೊಡಗಿದ್ದ ರೈತರು
ಗದಗ ಹೊರವಲಯದ ಜಮೀನಿನಲ್ಲಿ ಶುಕ್ರವಾರ ಹಿಂಗಾರು ಕೃಷಿ ಚಟುವಟಿಕೆ ಕಾರ್ಯದಲ್ಲಿ ತೊಡಗಿದ್ದ ರೈತರು   

ಗದಗ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 2.40 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ನಿಗದಿಪಡಿಸಲಾಗಿತ್ತು. ಆದರೆ, ಮಳೆ ಕೊರತೆಯಿಂದಾಗಿ ಶೇ 68.8ರಷ್ಟು ಮಾತ್ರ ಬಿತ್ತನೆಯಾಗಿತ್ತು. ಕೃಷಿ ಇಲಾಖೆಯ ಪ್ರಾಥಮಿಕ ಅಂದಾಜಿನಂತೆ ಬಿತ್ತನೆಯಾಗಿದ್ದ ಪ್ರದೇಶದಲ್ಲಿ ಮಳೆ ಮತ್ತು ತೇವಾಂಶದ ಕೊರತೆಯಿಂದಾಗಿ 1.51 ಹೆಕ್ಟೇರ್‌ ಪ್ರದೇಶದ ಬೆಳೆ ಸಂಪೂರ್ಣ ಹಾನಿಯಾಗಿದೆ.

ಮಳೆ ನಂಬಿ ಬಿತ್ತನೆ ಮಾಡಿದ ರೈತರು, ಸತತ ಐದನೆಯ ವರ್ಷವೂ ಬೆಳೆಹಾನಿ ಅನುಭವಿಸಿದ್ದಾರೆ. ಮುಂಗಾರು ಪೂರ್ವದಲ್ಲಿ ಲಭಿಸಿದ ಉತ್ತಮ ಮಳೆಯಿಂದ ಉತ್ಸಾಹಗೊಂಡ ರೈತರು ಗರಿಷ್ಠ ಪ್ರಮಾಣದಲ್ಲಿ ಹೆಸರುಕಾಳು ಬಿತ್ತನೆ ಮಾಡಿದ್ದರು. ಆದರೆ, 95,167 ಹೆಕ್ಟೇರ್‌ ಪ್ರದೇಶದ ಹೆಸರು, ಮಳೆ ಮತ್ತು ತೇವಾಂಶದ ಕೊರತೆಯಿಂದಾಗಿ ಹಾನಿಯಾಗಿದೆ.

ಮುಂಗಾರಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಬೆಳೆ ಹಾನಿಯಾಗಿರುವುದು ಗದಗ ಮತ್ತು ರೋಣ ತಾಲ್ಲೂಕಿನಲ್ಲಿ. ಇಲ್ಲಿ ಸಾವಿರಾರು ಹಕ್ಟೇರ್ ಪ್ರದೇಶದಲ್ಲಿ ಮುಂಗಾರಿನ ಹೆಸರು, ಮೆಕ್ಕೆಜೋಳ, ತೊಗರಿ, ಶೇಂಗಾ ಬೆಳೆಗಳು ಒಣಗಿ ಹೋಗಿವೆ. ಕೃಷಿ ಇಲಾಖೆ ಅಂದಾಜಿನಂತೆ 1173 ಹೆಕ್ಟೇರ್‌ ಪ್ರದೇಶದ ಜೋಳ, 24,653 ಹೆಕ್ಟೇರ್ ಪ್ರದೇಶದ ಮೆಕ್ಕೆಜೋಳ, 28,848 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಶೇಂಗಾ, 8,399 ಹೆಕ್ಟೇರ್ ಪ್ರದೇಶದ ಹತ್ತಿ ಬೆಳೆಗಳು ತೇವಾಂಶ ಕೊರತೆಯಿಂದ ಹಾನಿಗೀಡಾಗಿವೆ. ಒಟ್ಟು 1.63 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗೆ ಮಳೆ ಕೊರತೆ ಎದುರಾಗಿದೆ. ಇದರಲ್ಲಿ 1.51 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ಭಾಗಶಃ ಒಣಗಿ ಹೋಗಿದೆ.

ADVERTISEMENT

ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಆಗಿರುವ ಬೆಳೆಹಾನಿಗೆ ಕೃಷಿ ಇಲಾಖೆ ₹44.28 ಕೋಟಿ ಇನ್‌ಪುಟ್‌ ಸಬ್ಸಿಡಿ ಅಂದಾಜು ಮಾಡಿದೆ. ಗದಗ ತಾಲ್ಲೂಕಿನಲ್ಲಿ ₹12.59 ಕೋಟಿ, ಮುಂಡರಗಿ ತಾಲ್ಲೂಕಿನಲ್ಲಿ ₹4.8 ಕೋಟಿ, ನರಗುಂದ ತಾಲ್ಲೂಕಿನಲ್ಲಿ ₹7.15 ಕೋಟಿ, ರೋಣದಲ್ಲಿ ₹9.63 ಕೋಟಿ, ಶಿರಹಟ್ಟಿ ತಾಲ್ಲೂಕಿನ ರೈತರಿಗೆ ₹ 10.10 ಕೋಟಿ ಇನ್‌ಪುಟ್‌ ಸಬ್ಸಿಡಿ ಅಂದಾಜು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.