ADVERTISEMENT

ಸಮಸ್ಯೆ ಜೀವಂತವಾಗಿಟ್ಟರೆ ಗದಗ ಬಂದ್

ಹಣ್ಣು, ತರಕಾರಿಗಳನ್ನು ಮಾರಿ ವಿನೂತನ ಪ್ರತಿಭಟನೆ– ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 16:23 IST
Last Updated 23 ಸೆಪ್ಟೆಂಬರ್ 2021, 16:23 IST
ಯಂಗ್ ಇಂಡಿಯಾ ಪರಿವಾರದದವರು ಗುರುವಾರ ಹಣ್ಣು ತರಕಾರಿ ಮಾರಿ ವಿನೂತನವಾಗಿ ಪ್ರತಿಭಟಿಸಿದರು
ಯಂಗ್ ಇಂಡಿಯಾ ಪರಿವಾರದದವರು ಗುರುವಾರ ಹಣ್ಣು ತರಕಾರಿ ಮಾರಿ ವಿನೂತನವಾಗಿ ಪ್ರತಿಭಟಿಸಿದರು   

ಗದಗ: ಗುತ್ತಿಗೆ ಅವಧಿ ಮುಗಿದಿರುವ ಕ್ಲಾತ್‌ ಮಾರ್ಕೆಟ್‍ನ ಲೀಸ್‍ದಾರರನ್ನು ತೆರವುಗೊಳಿಸಿ, ಮಳಿಗೆಗಳನ್ನು ಸಾಮಾಜಿಕ ನ್ಯಾಯದ ಅಡಿಯಲ್ಲಿ ಮರುಹಂಚಿಕೆ ಮಾಡುವಂತೆ ಒತ್ತಾಯಿಸಿ ಯಂಗ್ ಇಂಡಿಯಾ ಪರಿವಾರದದವರು ಗುರುವಾರ ವಿನೂತನವಾಗಿ ಪ್ರತಿಭಟಿಸಿದರು.

ನಗರದ ಕೆ.ಎಚ್.ಪಾಟೀಲ ವೃತ್ತದಲ್ಲಿ ಯಂಗ್ ಇಂಡಿಯಾ ಪರಿವಾರ ಸಂಸ್ಥಾಪಕ ಅಧ್ಯಕ್ಷ ವೆಂಕನಗೌಡ ಆರ್. ಗೋವಿಂದಗೌಡ್ರ ನೇತೃತ್ವದಲ್ಲಿ ಒಂದೆಡೆ ಸೇರಿದ ಸದಸ್ಯರು ಸ್ಟೇಶನ್ ರಸ್ತೆಯ ಕ್ಲಾಥ್ ಮಾರ್ಕೆಟ್‍ವರೆಗೆ ಪಾದಯಾತ್ರೆ ಮೂಲಕ ಬಂದರು. ದಾರಿಯುದ್ದಕ್ಕೂ ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಪೂರ್ವನಿಗದಿಯಂತೆ ಕ್ಲಾತ್‌ ಮಾರ್ಕೆಟ್‍ನ ಪ್ರವೇಶ ದ್ವಾರಕ್ಕೆ ಪೂಜೆ ಸಲ್ಲಿಸಿ ಅಂಗಡಿ ಆರಂಭಿಸಿದರು. ಟೊಮೊಟೊ, ಎಲೆಕೋಸು, ಬದನೆಕಾಯಿ, ಪೇರಲ, ಬಾರಿಹಣ್ಣು ಸೇರಿದಂತೆ ವಿವಿಧ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಿ, ಪ್ರತಿಭಟಿಸಿದರು.

ADVERTISEMENT

ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಚ್.ಎನ್. ಗುರುಪ್ರಸಾದ್‌ ಅವರು ಪ್ರತಿಭಟನಕಾರರ ಸಮಸ್ಯೆ ಆಲಿಸಿ ಮಾತನಾಡಿ, ‘ಅಂಗಡಿ ಮಳಿಗೆಯವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಅ.10ರೊಳಗೆ ತೆರವುಗೊಳಿಸಿ ಮಳಿಗೆಗಳಿಗೆ ಮರು ಟೆಂಡರ್‌ ಕರೆಯಲಾಗುವುದು’ ಎಂದು ಭರವಸೆ ನೀಡಿದರು.

‘ಕೊಟ್ಟ ಮಾತಿನಂತೆ ಅ.10ರೊಳಗೆ ತೆರವುಗೊಳಿಸಿ, ಮರು ಹಂಚಿಕೆ ಮಾಡಿದ್ದರೆ ವಿವಿಧ ಸಂಘಟನೆಗಳ ಜತೆಗೂಡಿ ಗದಗ ಬಂದ್ ಮಾಡಲಾಗುವುದು’ ಎಂದು ಗೋವಿಂದಗೌಡ್ರ ಎಚ್ಚರಿಕೆ ನೀಡಿದರು.

‘ಅ.10ರೊಳಗೆ ಸಮಸ್ಯೆ ಬಗೆಹರಿಸುವುದಾಗಿ ಡಿಯುಡಿಸಿ ಗುರುಪ್ರಸಾದ್‌ ತಿಳಿಸಿದ್ದಾರೆ. ಆದ್ದರಿಂದ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆಯಲಾಗಿದೆ. ಜತೆಗೆ ಸೆ.26ರಂದು ಗದುಗಿಗೆ ಭೇಟಿ ನೀಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಪ್ಪುಪಟ್ಟಿ ಪ್ರದರ್ಶಿಸುವ ವಿಚಾರವನ್ನು ಕೈಬಿಡಲಾಗಿದೆ. ಸಮಸ್ಯೆ ಬಗೆಹರಿಸುವಂತೆ ಕೋರಿ ಸಿಎಂಗೆ ಮನವಿ ಸಲ್ಲಿಸಲಾಗುವುದು’ ಎಂದು ಹೇಳಿದರು.

ಯಂಗ್ ಇಂಡಿಯಾ ಪರಿವಾರದ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕರಬಸಣ್ಣವರ, ಮಹೇಶ ಮುತಗಾರ, ಮಲೀಕ್ ಮದ್ಲಿವಾಲೆ, ಹನಮಂತ ಕೊಳಗನವರ, ಖಾಜಾಸಾಬ ಸೊನ್ನದ, ಅಮರೇಶ ಅಂಗಡಿ, ಕುಮಾರ ಜಿಗಳೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.