ಗದಗ: ಇತ್ತೀಚೆಗೆ ಕ್ಯಾಬಿನೆಟ್‌ನಲ್ಲಿ ಮಂಡಿಸಿರುವ ಜಾತಿಗಣತಿಯು ವರದಿ ಆಧಾರ ರಹಿತ ಹಾಗೂ ಅವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ ಎಂದು ಎಲ್ಲ ಸಮಾಜದ ಮುಖಂಡರು ವಿರೋಧ ವ್ಯಕ್ತಿಪಡಿಸುತ್ತಿದ್ದಾರೆ. ಆದಕಾರಣ, ಇದೇ 17ರಂದು ಈ ವಿಷಯದ ಕುರಿತು ನಡೆಯಲಿರುವ ಸಂಪುಟ ಸಭೆಯಲ್ಲಿ ಯಾವ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ತಿಳಿಸಿದ್ದಾರೆ.
‘ಪ್ರಸ್ತುತ ಜಾತಿ ಗಣತಿ ಮಾಡುವಾಗ ಮನೆ ಮನೆಗೆ ಹೋಗಿ ಸರಿಯಾಗಿ ಮಾಹಿತಿ ಪಡೆದಿಲ್ಲ ಎಂದು ಎಲ್ಲ ಸಾರ್ವಜನಿಕರ ಆರೋಪವಿದೆ. ಸರಿಯಾದ ಮಾಹಿತಿ ಸಂಗ್ರಹ ಮಾಡಲಾರದೇ ಕಚೇರಿಯಲ್ಲಿಯೇ ಕುಳಿತು ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ದೂರಲಾಗುತ್ತಿದೆ. ಈ ವಿಷಯದಲ್ಲಿ ದುಡುಕಿನ ನಿರ್ಣಯ ಸಮಾಜದಲ್ಲಿ ಆಘಾತಕ್ಕೆ ಕಾರಣವಾಗುವ ಸಂಭವವಿದೆ. ಹೀಗೆಲ್ಲ ಇರುವಾಗ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ, ಶೈಕ್ಷಣಿಕ, ಹಾಗೂ ಆರ್ಥಿಕ ಆಧಾರದ ಮೇಲೆ ಸಿದ್ಧಪಡಿಸಿದ ವರದಿಯು ಹತ್ತು ವರ್ಷಗಳ ಹಿಂದಿನದ್ದು ಇದನ್ನು ತಿರಸ್ಕರಿಸಿ ಪುನಃ ಜಾತಿಗಣತಿ ಮಾಡಿಸುವುದು ನ್ಯಾಯಯುತವಾದದ್ದು’ ಎಂದು ತಿಳಿಸಿದ್ದಾರೆ.
‘ಸಾಮಾಜಿಕ ನ್ಯಾಯ ಒದಗಿಸುವುದು ಸಂವಿಧಾನ ಬದ್ಧ ಸರ್ಕಾರದ ಕರ್ತವ್ಯವಾಗಿದೆ. ಆದರೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಜಾತಿಗಳ ವಿವರವನ್ನು ಸಂಗ್ರಹಿಸುವಾಗ ವೈಜ್ಞಾನಿಕ ಪದ್ಧತಿ ಆಧರಿಸಿ ಮಾಹಿತಿ ಸಂಗ್ರಹಿಸಬೇಕು. ಈ ಎಲ್ಲ ವಿಚಾರಗಳನ್ನು ಸುದೀರ್ಘವಾಗಿ ಪಕ್ಷಾತೀತವಾಗಿ ಚರ್ಚಿಸಿ ಒಮ್ಮತದ ನಿರ್ಣಯಕ್ಕೆ ಬರಲು ವಿಶೇಷ ಅಧಿವೇಶನ ಕರೆಯಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.