ಪ್ರಜಾವಾಣಿ ವಾರ್ತೆ
ಗದಗ: ‘ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿ ಸರ್ಕಾರ ಬದಲಾದಂತೆ ಕೆಲವರ ಧ್ವನಿ ಕೂಡ ಬದಲಾಯಿತು. ರಾಜಕಾರಣಕ್ಕಿಂತ ಸಮಾಜ ಮುಖ್ಯ. ಸಮಾಜ ಮತ್ತು ರಾಜಕಾರಣದ ಆಯ್ಕೆ ಬಂದಾಗ ನಾನು ಸಮಾಜವನ್ನು ಮೊದಲು ಆಯ್ದುಕೊಳ್ಳುವೆ’ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಭಾನುವಾರ ಗದಗ ಜಿಲ್ಲಾ ಪಂಚಮಸಾಲಿ ಸಮಾಜ, ಯುವ ಘಟಕದ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜದ ನಿವೃತ್ತ ನೌಕರರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ಬೊಮ್ಮಾಯಿ ಅವರು ಸಿಎಂ ಇದ್ದಾಗ ಲೋಕೋಪಯೋಗಿ ಸಚಿವನಾಗಿ ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡಿದೆ. ಸಮಾಜದ ಪ್ರತಿನಿಧಿಯಾಗಿ ಬಸವಜಯ ಮೃತ್ಯುಂಜಯ ಶ್ರೀಗಳ ಪಾದಯಾತ್ರೆಗೆ ಸಹಕಾರ ನೀಡಿದೆ. ಆದರೆ ಸರ್ಕಾರ ಬದಲಾದ ಮೇಲೆ ಕೆಲವರ ಧ್ವನಿಯೂ ಬದಲಾಯಿತು’ ಎಂದು ವಿಷಾದ ವ್ಯಕ್ತಪಡಿಸಿದರು.
‘ನರಗುಂದದಲ್ಲಿಯೂ ಪಂಚಮಸಾಲಿ ಸಮಾಜಕ್ಕೆ ಸರ್ಕಾರದಿಂದ 2 ಎಕರೆ ಜಮೀನು ಮಂಜೂರು ಮಾಡಿಸಲಾಗಿದೆ. ಶಾಸಕನಾಗಿ ಗರಿಷ್ಠ ಅನುದಾನ ಒದಗಿಸಿ, ನರಗುಂದದಲ್ಲಿಯೂ ಪಂಚಮಸಾಲಿ ಸಮುದಾಯ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.
ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ 85ಕ್ಕಿಂತ ಹೆಚ್ಚು ಅಂಕ ಪಡೆದು 220ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ವಿವಿಧ ಕ್ಷೇತ್ರದ ಸಾಧಕರು ಮತ್ತು ನಿವೃತ್ತ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು.
ಮಲ್ಲಿಕಾರ್ಜುನ ಹಿರೇಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾಜದ ಮುಖಂಡರಾದ ಎಂ.ಎಸ್.ಕರಿಗೌಡ್ರ, ನಿಂಗಪ್ಪ ಫಿರೋಜಿ, ಡಾ. ಸಂಗಮೇಶ ಕೊಳ್ಳಿ, ಕೆ.ವಿ.ಗದುಗಿನ, ಕುಲಕರ್ಣಿ, ಮಹಾಂತೇಶ ಹಿರೇಮನಿಪಾಟೀಲ, ಅಯ್ಯಪ್ಪ ಅಂಗಡಿ, ನಿಂಗಪ್ಪ ಹುಗ್ಗಿ, ಮಂಜಣ್ಣ ಗುಡದೂರ, ಜಯಶ್ರೀ ಉಗಲಾಟದ, ಜಯಶ್ರೀ ಅಕ್ಕಿ, ಲಲಿತಾ ಗೊಳಗೊಳಕಿ, ಈರಮ್ಮ ತಾಳಿಕೋಟಿ ಇತರರು ಇದ್ದರು.
Quote - ಗದಗ ಜಿಲ್ಲಾ ಪಂಚಮಸಾಲಿ ಯುವ ಘಟಕ ರಾಜ್ಯದಲ್ಲೇ ಅತಿ ಹೆಚ್ಚು ಸಕ್ರಿಯ ಎಂಬ ಖ್ಯಾತಿಗೆ ಪಾತ್ರವಾಗಿದೆ. ಚಳವಳಿ ಸಂಘಟನೆ ಪ್ರತಿಭಾ ಪುರಸ್ಕಾರ ಎಲ್ಲದರಲ್ಲೂ ಗಟ್ಟಿಧ್ವನಿ ಎತ್ತಿದೆ. ಬಸವಜಯ ಮೃತ್ಯುಂಜಯ ಸ್ವಾಮೀಜಿ
Quote - ಸಮುದಾಯ ಭವನ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ₹1 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಸಮಾಜದ ಪರವಾಗಿ ಧನ್ಯವಾದ ಅರ್ಪಿಸುವೆ ಸಿ.ಸಿ.ಪಾಟೀಲ ಶಾಸಕ
Cut-off box - ಶೈಕ್ಷಣಿಕ ಪ್ರಜ್ಞೆ ಜಾಗೃತ ‘ಪಂಚಮಸಾಲಿ ಸಮಾಜದ ಮಕ್ಕಳು ಶೈಕ್ಷಣಿಕವಾಗಿ ಉನ್ನತಿಯ ಹಾದಿಯಲ್ಲಿ ನಡೆಯುತ್ತಿರುವುದು ಖುಷಿಯ ವಿಚಾರ. ಆಸ್ತಿ ಮಾರಿಯಾದರೂ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂಬ ಶೈಕ್ಷಣಿಕ ಪ್ರಜ್ಞೆ ಪೋಷಕರಲ್ಲಿ ಜಾಗೃತಗೊಂಡಿದೆ’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಮಕ್ಕಳಿಗೆ ಓದುವ ಆಸೆ ಸಾಕಷ್ಟಿದೆ. ಆದರೆ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಸಿಗುತ್ತಿಲ್ಲ. ಇದರಿಂದಾಗಿ ಅನೇಕರು ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಆ ನಿರ್ಧಾರ ಮಾಡದೇ ದಾನಿಗಳ ನೆರವು ಪಡೆದು ವಿದ್ಯಾಭ್ಯಾಸ ಮುಂದುವರಿಸಬೇಕು ಎಂದರು. ಶೇ 95ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ಅಕ್ಷರ ರತ್ನ ಪ್ರಶಸ್ತಿ ನೀಡಲು ತೀರ್ಮಾನಿಸಿರುವುದು ಉತ್ತಮ ನಿರ್ಧಾರ ಎಂದರು. ‘ಕೂಡಲಸಂಮಗದಲ್ಲಿಯೇ ಪಂಚಮಸಾಲಿ ಪೀಠ ಆಗಬೇಕು ಎಂದು ಎಸ್.ಬಿಸಂಕಣ್ಣವರ ನೇತೃತ್ವದಲ್ಲಿ ನಿರ್ಣಯ ಕೈಗೊಂಡಿದ್ದು ಇದೇ ಗದಗ ನೆಲದಲ್ಲಿ. ಸಿ.ಸಿ.ಪಾಟೀಲ ಶ್ರೀಶೈಲಪ್ಪ ಬಿದರೂರ ಕಳಕಪ್ಪ ಬಂಡಿ ಈ ಮೂವರೂ ಅದಕ್ಕೆ ಸಹಕಾರ ನೀಡಿದರು. ಈಗ ಇದೇ ನೆಲದಲ್ಲಿ ಹೊಸ ಆಶ್ರಯ ಕಟ್ಟಿಸುವ ಚಿಂತನೆ ನಡೆದಿದೆ. ಆ ಬಗ್ಗೆ ಸದ್ಯಕ್ಕೆ ನಾನು ಹೆಚ್ಚು ಪ್ರತಿಕ್ರಿಯಿಸುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.