ADVERTISEMENT

ಉತ್ಖನನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ: ಸಚಿವ ಎಚ್.ಕೆ.ಪಾಟೀಲ ಮಾಹಿತಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 15:32 IST
Last Updated 2 ಜೂನ್ 2025, 15:32 IST
ಎಚ್‌.ಕೆ.ಪಾಟೀಲ
ಎಚ್‌.ಕೆ.ಪಾಟೀಲ   

ಗದಗ: ‘ಜಾಗತಿಕ‌ ಪ್ರವಾಸಿ ತಾಣ ಆಗುವ ಅರ್ಹತೆ ಹೊಂದಿರುವ ಲಕ್ಕುಂಡಿಯಲ್ಲಿ ಉತ್ಖನನ ನಡೆಸಲು ಅನುಮತಿ ದೊರಕಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಬೆಳಿಗ್ಗೆ 11.40ಕ್ಕೆ ಉತ್ಖನನ ಕಾರ್ಯಕ್ಕೆ ಚಾಲನೆ ನೀಡುವರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

‘ಲಕ್ಕುಂಡಿಯಲ್ಲಿ ಉತ್ಖನನಕ್ಕೆ ಚಾಲನೆ ನೀಡುವುದು ವಿಶೇಷ ಮಹತ್ವ ಪಡೆದುಕೊಂಡಿದೆ. ಇದರಿಂದಾಗಿ ಲಕ್ಕುಂಡಿಯನ್ನು‌ ಯುನೆಸ್ಕೋದ ಜಾಗತಿಕ ಪ್ರವಾಸಿ ತಾಣವನ್ನಾಗಿ ಮಾಡಲು ಅನುಕೂಲವಾಗಲಿದೆ. ಉತ್ಖನನಕ್ಕೆ ಬೇಕಾದಂತಹ ಅನುದಾನವನ್ನು ನೀಡುವುದಕ್ಕೆ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ’ ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮೊದಲನೇ ಹಂತದಲ್ಲಿ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನಕ್ಕೆ ಚಾಲನೆ ನೀಡಲಾಗುವುದು. ಪ್ರಾಚ್ಯವಸ್ತುಗಳ ಅನ್ವೇಷಣೆಗೆ ಲಕ್ಕುಂಡಿ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಮುಂದೆ ಬಂದಿದ್ದು, ಮೊದಲ ಅಭಿಯಾನದಲ್ಲಿಯೇ ಅಂದಾಜು 1,200ಕ್ಕಿಂತ ಹೆಚ್ಚು ಪ್ರಾಚ್ಯಾವಶೇಷಗಳು ದೊರಕಿವೆ. ಈಗಾಗಲೇ ಲಕ್ಕುಂಡಿ ಗ್ರಾಮದ ಐದು‌ ಮನೆಯವರು ಮುಂದೆ ಬಂದು ಉತ್ಖನನಕ್ಕೆ ತಮ್ಮ ಮನೆ ಬಿಟ್ಟು ಕೊಡುವುದಾಗಿ ತಿಳಿಸಿದ್ದಾರೆ’ ಎಂದು ಹೇಳಿದರು.

ADVERTISEMENT

‘ಉತ್ಖನನಕ್ಕೆ ಚಾಲನೆ ನೀಡಿದ ನಂತರ ಸಿಎಂ ಸಿದ್ದರಾಮಯ್ಯ ಅವರು ಬಯಲಿನಲ್ಲಿ ಸಂಗ್ರಹಿಸಿರುವ ಪ್ರಾಚ್ಯಾವಶೇಷಗಳನ್ನು ವೀಕ್ಷಣೆ ಮಾಡುವರು. ಬಳಿಕ, ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಂದ ಗದಗ ನಗರಕ್ಕೆ ತೆರಳುವರು’ ಎಂದರು.

‘ಮಧ್ಯಾಹ್ನ 12.50ಕ್ಕೆ ನಗರದ ಸ್ವಾಮಿ ವಿವೇಕಾನಂದ ಭವನದಲ್ಲಿ ಕರ್ನಾಟಕ ಕುರುಬರ ಸಂಘ ಮತ್ತು ಕರ್ನಾಟಕ ಕುರುಬರ ಸಹಕಾರಿ ಪತ್ತಿನ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು’ ಎಂದರು.

‘ತದನಂತರ, ಮಧ್ಯಾಹ್ನ 3.30ಕ್ಕೆ ಗದಗ ಕೋ- ಆಪರೇಟಿವ್‌ ಇಂಡಸ್ಟ್ರಿಯಲ್ ಎಸ್ಟೇಟ್ ಆವರಣಕ್ಕೆ ಬಂದು, ಜಿ–ಎನ್‌ಟಿಟಿಎಫ್ ಸಂಸ್ಥೆ ಉದ್ಘಾಟಿಸುವರು. ಸಂಜೆ 4.30ಕ್ಕೆ ಜಿಲ್ಲಾ ರಂಗಮಂದಿರದಲ್ಲಿ ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತುಪ್ರದರ್ಶನ ಪ್ರಾಧಿಕಾರದ ಉದ್ಘಾಟನೆ ಹಾಗೂ 34 ಎಕರೆ ಪ್ರದೇಶದ ಪ್ರಾಧಿಕಾರದ ಪರಿಕಲ್ಪನೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸುವರು’ ಎಂದು ಮಾಹಿತಿ ನೀಡಿದರು. 

ಗ್ಯಾರಂಟಿ‌ ಅನುಷ್ಠಾನ‌ ಪ್ರಾಧಿಕಾರದ ಜಿಲ್ಲಾ‌ ಅಧ್ಯಕ್ಷ ಬಿ.ಬಿ. ಅಸೂಟಿ, ಗದಗ ತಾಲ್ಲೂಕು ಅಧ್ಯಕ್ಷ ಅಶೋಕ ಮಂದಾಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಬಸವರಾಜ ಕಡೇಮನಿ ಇದ್ದರು.

‘ನ್ಯಾಯವಿಧಾನ ಪದ್ಧತಿಯೊಳಗೆ ಕ್ರಾಂತಿಕಾರಕ ಬದಲಾವಣೆ’ 

ನ್ಯಾಯವಿಧಾನ ಪದ್ಧತಿಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಸಿಪಿಸಿ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿಗಳನ್ನು ಮಾಡಿದ್ದು ಇದರಿಂದ ಶೀಘ್ರ ನ್ಯಾಯದಾನಕ್ಕೆ ಅವಕಾಶ ದೊರೆತಂತಾಗಿದೆ ಎಂದು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು. ‘ತಿದ್ದುಪಡಿಯ ಅನ್ವಯ ಪ್ರತಿಯೊಂದು ಸಿವಿಲ್ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಕಡ್ಡಾಯ ಪ್ರಯತ್ನ ಮಾಡಬೇಕು. ಎರಡು ತಿಂಗಳ ಒಳಗಾಗಿ ಅದು ಸಾಧ್ಯವಾಗದೇ ಇದ್ದಾಗ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು. ಯಾವುದೇ ಸಿವಿಲ್ ಪ್ರಕರಣವು ದಾಖಲಾದ ದಿನದಿಂದ 24 ತಿಂಗಳೊಳಗೆ ಇತ್ಯರ್ಥವಾಗುವುದನ್ನು ಈ ತಿದ್ದುಪಡಿ ಖಚಿತಪಡಿಸಲಿದೆ. ನ್ಯಾಯವಿಧಾನ ಪದ್ಧತಿಯೊಳಗೆ ಇದೊಂದು ಕ್ರಾಂತಿಕಾರಕ ಬದಲಾವಣೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.