ADVERTISEMENT

65 ಹಾಸಿಗೆಗಳ ಕಾಳಜಿ ಕೇಂದ್ರ ಆರಂಭ

ಕೆ.ಎಚ್‌.ಪಾಟೀಲ ಪ್ರತಿಷ್ಠಾನ ಜತೆಗೆ ಕೈ ಜೋಡಿಸಿದ ಸಂಘ ಸಂಸ್ಥೆಗಳು

​ಪ್ರಜಾವಾಣಿ ವಾರ್ತೆ
Published 25 ಮೇ 2021, 3:03 IST
Last Updated 25 ಮೇ 2021, 3:03 IST
ಕೋವಿಡ್‌ ಆರೈಕೆ ಕೇಂದ್ರದ ಒಳನೋಟ
ಕೋವಿಡ್‌ ಆರೈಕೆ ಕೇಂದ್ರದ ಒಳನೋಟ   

ಗದಗ: ಕೆ.ಎಚ್‌.ಪಾಟೀಲ ಪ್ರತಿಷ್ಠಾನ, ಗುಜರಾತ್‌ನ ಶ್ರೀ ರಾಜಚಂದ್ರ ಲವ್‌ ಅಂಡ್‌ ಕೇರ್‌ ಸಂಸ್ಥೆ ಹಾಗೂ ಹುಲಕೋಟಿ ರೂರಲ್‌ ಮೆಡಿಕಲ್‌ ಸರ್ವಿಸ್‌ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಗದಗ ಕೋ-ಆಪ್ ಇಂಡಸ್ಟ್ರಿಯಲ್ ಎಸ್ಟೇಟ್ ಕಟ್ಟಡದಲ್ಲಿ ಆರಂಭಿಸಲಾದ ಕೋವಿಡ್‌ ಆರೈಕೆ ಕೇಂದ್ರಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಈ ಕೋವಿಡ್‌ ಆರೈಕೆ ಕೇಂದ್ರನಲ್ಲಿ ಒಟ್ಟು 65 ಹಾಸಿಗೆಗಳಿದ್ದು, ಶೇ 50ರಷ್ಟು ಬೆಡ್‌ಗಳನ್ನು ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಮೀಸಲಿಡಲಾಗಿದೆ. ಉಳಿದವು ಎಪಿಎಲ್‌ ಕಾರ್ಡ್‌ದಾರರಿಗೆ ಒದಗಿಸಲಾಗುತ್ತದೆ.

‘ಕೋವಿಡ್‌ ಆರೈಕೆ ಕೇಂದ್ರನಲ್ಲಿ ‘ಮೈಲ್ಡ್‌ ಟು ಮಾರ್ಡರೇಟ್‌’ ಅಂದರೆ ಸೋಂಕಿನ ತೀವ್ರತೆ ಕಡಿಮೆ ಇರುವ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುವುದು. ಆಮ್ಲಜನಕದ ಅಗತ್ಯ ಇಲ್ಲದವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುವುದು. ಈ ಕೇಂದ್ರದಲ್ಲಿ 65 ಬೆಡ್‌ಗಳಿದ್ದು, ಅವುಗಳಲ್ಲಿ 25ಕ್ಕೆ ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ ಸೌಲಭ್ಯ ಒದಗಿಸಲಾಗಿದೆ. ಇವುಗಳ ಮೂಲಕ ಸೋಂಕಿತರಿಗೆ ಅಗತ್ಯವಿರುವ ಲಘು ಪ್ರಮಾಣದ ಆಮ್ಲಜನಕವನ್ನು ಪೂರೈಸಲಾಗುವುದು’ ಎಂದು ಕೋವಿಡ್‌ ಆರೈಕೆ ಕೇಂದ್ರನ ಮೇಲ್ವಿಚಾರಕ ಡಾ. ವೇಮನ್‌ ಸಾಹುಕಾರ ತಿಳಿಸಿದರು.

ADVERTISEMENT

‘ಬಿಪಿಎಸ್‌ ಕಾರ್ಡ್‌ ಹೊಂದಿರುವ ಸೋಂಕಿತರಿಗೆ ಕೋವಿಡ್‌ ಆರೈಕೆ ಕೇಂದ್ರನಲ್ಲಿ ಊಟ, ಔಷಧ, ವಿವಿಧ ರೀತಿಯ ಪರೀಕ್ಷೆಗಳನ್ನು ಉಚಿತವಾಗಿ ಒದಗಿಸಲಾಗುವುದು. ಸೋಂಕಿತರಿಗೆ ರೆಮ್‌ಡಿಸಿವಿರ್‌ ಚುಚ್ಚುಮದ್ದು ಅಗತ್ಯ ಬಿದ್ದರೆ ಅದಕ್ಕೆ ಮಾತ್ರ ಅದಕ್ಕೆ ಹಣ ಪಡೆಯಲಾಗುವುದು. ಎಪಿಎಲ್‌ ಕಾರ್ಡ್‌ದಾರರಿಗೆ ಪ್ರತಿದಿನ ₹2 ಸಾವಿರ ಶುಲ್ಕ ನೀಡಬೇಕು’ ಎಂದು ಅವರು ಮಾಹಿತಿ ನೀಡಿದರು.

ರೋಗ ಲಕ್ಷಣಗಳಿರುವ ಒಬ್ಬ ಸೋಂಕಿತನಿಗೆ ಇಲ್ಲಿ ಒಂದು ವಾರ ಚಿಕಿತ್ಸೆ ನೀಡಲಾಗುತ್ತದೆ. ಪ್ರತಿನಿತ್ಯ ಚಹಾ, ತಿಂಡಿ, ಎರಡು ಹೊತ್ತಿನ ಊಟ ನೀಡಲಾಗುವುದು. ಸೋಂಕಿತರಿಗೆ ಶುಚಿ, ರುಚಿಯಾದ ಆಹಾರ ನೀಡಲು ಹೊರಗುತ್ತಿಗೆ ನೀಡಲಾಗಿದೆ.

‘ಕೋವಿಡ್‌ ಆರೈಕೆ ಕೇಂದ್ರನಲ್ಲಿ ಸೋಂಕಿತರ ಚಿಕಿತ್ಸೆಗೆ ನಾಲ್ಕು ಮಂದಿ ಎಂಬಿಬಿಎಸ್ ವೈದ್ಯರನ್ನು ನೇಮಿಸಲಾಗಿದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಜ್ಞ ವೈದ್ಯರು ಕೇಂದ್ರಕ್ಕೆ ಭೇಟಿ ನೀಡಿ, ಸೋಂಕಿತರ ಆರೋಗ್ವಿಚಾರಸುತ್ತಾರೆ. 12 ಮಂದಿ ನರ್ಸಿಂಗ್‌ ಸ್ಟಾಫ್‌ ಇದೆ. ಸೋಂಕಿತರನ್ನು ಕರೆತರಲು ಉಚಿತ ಆಂಬುಲೆನ್ಸ್‌ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಡಾ. ವೇಮನ ತಿಳಿಸಿದರು.

ಜೂಮ್‌ ಆ್ಯಪ್‌ ಮೂಲಕ ಗುರುದೇವ ಧರ್ಮಪೂರ ಅವರು ಕೇಂದ್ರಕ್ಕೆ ಚಾಲನೆ ನೀಡಿದರು.

ಕೆ.ಎಚ್.ಪಾಟೀಲ ಪ್ರತಿಷ್ಠಾನದ ಅಧ್ಯಕ್ಷ ಡಿ.ಆರ್.ಪಾಟೀಲ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ಪಾಟೀಲ, ಮಾಜಿ ಶಾಸಕ ಬಿ.ಆರ್.ಯಾವಗಲ್, ಸಿದ್ಧಲಿಂಗೇಶ್ವರ ಪಾಟೀಲ, ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಇದ್ದರು.

ಸುಸಜ್ಜಿತ ಕೇಂದ್ರ: ಶಾಸಕ ಮೆಚ್ಚುಗೆ

ಗದಗ ಶಾಸಕ ಎಚ್.ಕೆ.ಪಾಟೀಲ ಮಾತನಾಡಿ, ‘ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಅವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಸಂಸ್ಥೆಗಳ ಸಹಯೋಗದಿಂದ ಕೋವಿಡ್‌ ಆರೈಕೆ ಕೇಂದ್ರ ಪ್ರಾರಂಭಿಸಲಾಗಿದೆ’ ಎಂದು ಹೇಳಿದರು.

‘ದಾನಿಗಳು ಔಷಧ ಹಾಗೂ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ನೀಡಿದ್ದಾರೆ. ಹುಲಕೋಟಿಯ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿಯವರು ಒಂದು ವಾರದಲ್ಲಿ ಸುಸಜ್ಜಿತ ಆರೈಕೆ ಕೇಂದ್ರ ನಿರ್ಮಾಣ ಮಾಡಿರುವುದು ಬೆರಗು ಮೂಡಿಸಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.