ADVERTISEMENT

ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ಪೌರಕಾರ್ಮಿಕರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 16:45 IST
Last Updated 23 ಸೆಪ್ಟೆಂಬರ್ 2020, 16:45 IST
ಗದಗ ನಗರಸಭೆ ಆವರಣದಲ್ಲಿ ಬುಧವಾರ ನಡೆದ 9ನೇ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಗದಗ ನಗರಸಭೆ ಆವರಣದಲ್ಲಿ ಬುಧವಾರ ನಡೆದ 9ನೇ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.   

ಗದಗ: ಪೌರಕಾರ್ಮಿಕರಿಗೆ ಗುರುತಿಸಲಾದ ನಿವೇಶನಗಳನ್ನು ಎರಡು ತಿಂಗಳಲ್ಲಿ ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು ಹೇಳಿದರು.

ಗದಗ ನಗರಸಭೆ ಆವರಣದಲ್ಲಿ ಬುಧವಾರ ನಡೆದ 9ನೇ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ನಗರದ ಸ್ವಚ್ಛತೆ ಕಾರ್ಯದ ಜತೆಗೆ ಪೌರಕಾರ್ಮಿಕರು ವೈಯಕ್ತಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಬೇಕು. ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಪೌರಕಾರ್ಮಿಕರನ್ನು ಗೌರವಯುತವಾಗಿ ನಡೆಯಿಸಿಕೊಳ್ಳಬೇಕು ಎಂದು ಸೂಚಿಸಿದರು.

ADVERTISEMENT

ಎಸ್‌ಪಿ ಯತೀಶ್‌ ಎನ್. ಮಾತನಾಡಿ, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರ ಸೇವೆ ಎಲ್ಲ ದಿನಗಳಲ್ಲೂ ನಿರಂತರವಾಗಿರುತ್ತದೆ. ಕರ್ತವ್ಯದೊಂದಿಗೆ ಮಕ್ಕಳ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ನಗರಾಭಿವೃದ್ಧಿ ಕೋಶದ ಹಿರಿಯ ಯೋಜನಾ ನಿರ್ದೇಶಕ ಎಸ್.ಎನ್ ರುದ್ರೇಶ್‌ ಮಾತನಾಡಿ, ಗದಗ-ಬೆಟಗೇರಿ ನಗರಸಭೆಯು ಕಸ ವಿಲೇವಾರಿಗೆ ಆಧುನಿಕ ಯಂತ್ರ ಬಳಸುತ್ತಿದೆ. ಈಗಾಗಲೇ ಮನೆ-ಮನೆಗೆ ಕಸ ಸಂಗ್ರಹಿಸುವ ವಾಹನ ತೆರಳುತ್ತಿದ್ದು, ಮುಂದಿನ ವಾರ ಅಥವಾ 15 ದಿನಗಳಲ್ಲಿ ಪ್ರತಿ ಮನೆಗೆ 2 ಡಸ್ಟ್‌ಬಿನ್ ಹಾಗೂ ಒಂದು ಚೀಲ ನೀಡಲಾಗುವುದು ಎಂದು ತಿಳಿಸಿದರು.

ನಗರಸಭೆ ಪೌರಾಯುಕ್ತ ರಮೇಶ ಪಿ. ಜಾದವ ಮಾತನಾಡಿ, ಪೌರಕಾರ್ಮಿಕರಿಗೆ ಮೂಲಸೌಕರ್ಯ ಸೇರಿ ಸುರಕ್ಷಾ ಕಿಟ್‌ಗಳನ್ನು ಒದಗಿಸಲಾಗುವುದು. ಅದನ್ನು ಸಮರ್ಪಕವಾಗಿ ಬಳಸಿ, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಪೌರಕಾರ್ಮಿಕರ ಸಂಘದ ಅಧ್ಯಕ್ಷ ವಿರೂಪಾಕ್ಷ ರಾಮಗಿರಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಹಲವು ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.‌

ನಗರಸಭೆ ಎಇಇ ಎಚ್.ಎ.ಬಂಡಿವಡ್ಡರ, ಕಚೇರಿ ವ್ಯವಸ್ಥಾಪಕಿ ವಿಜಯಲಕ್ಷ್ಮಿ ಮುಟಗಾರ, ವಿಜಯಲಕ್ಷ್ಮಿ ಹಿರೇಮಠ, ಅಮೃತ ಹರಿದಾಸ, ನಗರಸಭೆ ಪರಿಸರ ಎಂಜಿನಿಯರ್‌ ಗಿರೀಶ ತಳವಾರ ಇದ್ದರು.

ಶರೀಫ ಬಿಳೆಯಲಿ ತಂಡದವರು ಕ್ರಾಂತಿಗೀತೆ ಹಾಡಿದರು. ಚಂದ್ರು ದೊಡ್ಡಮನಿ ಸ್ವಾಗತಿಸಿದರು. ಹೇಮೇಶ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.