ಗದಗ: ‘ಪ್ರತಿಯೊಬ್ಬ ವೈದ್ಯರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ನಿರ್ವಹಿಸಿದ್ದೇ ಆದರೆ ಸದೃಢ, ಆರೋಗ್ಯವಂತ ಭಾರತ ಕಟ್ಟಲು ಸಾಧ್ಯ’ ಎಂದು ಇಎಸ್‌ಐ ಆಸ್ಪತ್ರೆ ವೈದ್ಯ ಡಾ. ಪವನ್ ಎಸ್.ಹುಯಿಲಗೋಳ ತಿಳಿಸಿದರು.
ನಗರದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆಯಲ್ಲಿ ನಡೆದ ರಾಷ್ಟ್ರೀಯ ವೈದ್ಯರ ದಿನ ಹಾಗೂ ರಾಷ್ಟ್ರೀಯ ಚಾರ್ಟೆಡ್ ಅಕೌಂಟೆಂಟ್ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲೆಯ ಶೈಕ್ಷಣಿಕ ಮಾರ್ಗದರ್ಶಕ ಪ್ರತೀಕ್ ಎಸ್. ಹುಯಿಲಗೋಳ ಮಾತನಾಡಿ, ‘ರಾಷ್ಟ್ರೀಯ ವೈದ್ಯರ ದಿನವು ವೈದ್ಯರ ವೃತ್ತಿಪರ ಸಾಧನೆಗಳನ್ನು ಗುರುತಿಸುವುದಷ್ಟೇ ಅಲ್ಲ ಅವರ ವೈಯಕ್ತಿಕ ತ್ಯಾಗಗಳಿಗೆ ಗೌರವ ನೀಡುವ ಸಂಕೇತವೂ ಆಗಿದೆ. ವೈದ್ಯರು ಹಗಲಿರುಳೆನ್ನದೇ ಕೆಲಸ ಮಾಡುತ್ತಾರೆ. ವಿಶೇಷವಾಗಿ ಸಾಂಕ್ರಾಮಿಕ ರೋಗಗಳು ಅಥವಾ ಆರೋಗ್ಯ ಬಿಕ್ಕಟ್ಟುಗಳ ಸಮಯದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ‘ಭಾರತದಂತಹ ವೈವಿಧ್ಯಮಯ ದೇಶದಲ್ಲಿ ವೈದ್ಯರ ಪಾತ್ರ ಕೇವಲ ರೋಗಿಗೆ ಚಿಕಿತ್ಸೆ ನೀಡುವುದಕ್ಕಷ್ಟೇ ಸೀಮಿತವಾಗಿಲ್ಲ. ಯಾವುದೇ ಅನಾರೋಗ್ಯದ ಸಂದರ್ಭದಲ್ಲಿ ನಮ್ಮನ್ನು ಗುಣಪಡಿಸಿ, ಮರುಜೀವ ನೀಡುವ ವೈದ್ಯರು ದೇವರಿಗೆ ಸಮಾನ’ ಎಂದರು.
ಶಾಲೆಯ ಪ್ರಾಚಾರ್ಯ ಎಂ.ಆರ್.ಡೊಳ್ಳಿನ ರಾಷ್ಟ್ರೀಯ ಚಾರ್ಟೆಡ್ ಅಕೌಂಟೆಂಟ್ ದಿನ ಆಚರಿಸುವ ಹಿನ್ನಲೆ ಕುರಿತು ಮಾತನಾಡಿದರು. ಉಪ ಪ್ರಾಚಾರ್ಯ ಅಕ್ಷಯ್ ಜಿ. ಹಾಗೂ ಪ್ರಶಿಕ್ಷಣಾರ್ಥಿ ಮೇಘನಾ ಮುನವಳ್ಳಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಡಾ. ಪವನ್ ಎಸ್. ಹುಯಿಲಗೋಳ ಹಾಗೂ ಸಿಎ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾದ ಸಂಪದಾ ಭೀ. ಹುಯಿಲಗೋಳ ಅವರನ್ನು ಅಭಿನಂದಿಸಲಾಯಿತು.
ಮಿಸ್ಬಾ ಪಟೇಲ್ ನಿರೂಪಿಸಿದರು. ಶಿಕ್ಷಕಿಯರಾದ ಕವಿತಾ ಹೊಸಕೇರಿ ಸ್ವಾಗತಿಸಿದರು. ಧೀರಜ್ ಪಾಟೀಲ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.