ADVERTISEMENT

‘ಸೂಕ್ಷ್ಮ ನೀರಾವರಿ ಭವಿಷ್ಯದ ಯೋಜನೆಗೆ ಮಾರ್ಗದರ್ಶಿ’

ಸಿಂಗಟಾಲೂರು ಏತ ನೀರಾವರಿ ಯೋಜನೆಯ ನೀರು ಬಳಕೆದಾರರ ಸಹಕಾರ ಸಂಘ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 3:49 IST
Last Updated 30 ಸೆಪ್ಟೆಂಬರ್ 2021, 3:49 IST
ಗದಗ ತಾಲ್ಲೂಕಿನ ಹುಲಕೋಟಿಯ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಪುನಶ್ಚೇತನ ಕಾರ್ಯಾಗಾರವನ್ನು ಶರಣಬಸಪ್ಪ ಎಸ್.ಮೇಟಿ ಉದ್ಘಾಟಿಸಿದರು.
ಗದಗ ತಾಲ್ಲೂಕಿನ ಹುಲಕೋಟಿಯ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಪುನಶ್ಚೇತನ ಕಾರ್ಯಾಗಾರವನ್ನು ಶರಣಬಸಪ್ಪ ಎಸ್.ಮೇಟಿ ಉದ್ಘಾಟಿಸಿದರು.   

ಹುಲಕೋಟಿ (ಗದಗ): ‘ಸೂಕ್ಷ್ಮ ನೀರಾವರಿಯು ಭವಿಷ್ಯದ ಸಮರ್ಪಕ ನೀರಾವರಿ ಪದ್ಧತಿಯಾಗಲಿದ್ದು, ರಾಜ್ಯದ ಎಲ್ಲ ಸೂಕ್ಷ್ಮ ನೀರಾವರಿ ಯೋಜನೆಗಳನ್ನು ಯಶಸ್ವಿಗೊಳಿಸುವಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ’ ಎಂದು ವಾಲ್ಮಿ ಸಂಸ್ಥೆಯ ನಿರ್ದೇಶಕ ಡಾ.ರಾಜೇಂದ್ರ ಪೋದ್ದಾರ ಹೇಳಿದರು.‌

ಸಿಂಗಟಾಲೂರು ಏತ ನೀರಾವರಿ ಯೋಜನೆಯ ನೀರು ಬಳಕೆದಾರರ ಸಹಕಾರ ಸಂಘಗಳ ಸಂಘಟನೆಯಿಂದ ಹುಲಕೋಟಿಯ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಪುನಶ್ಚೇತನ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‌‘ಸೂಕ್ಷ್ಮ ನೀರಾವರಿ ಪದ್ಧತಿ ಅತ್ಯಂತ ಆಧುನಿಕವಾಗಿದ್ದು, ವಿನ್ಯಾಸ ಮತ್ತು ಅನುಷ್ಠಾನ ಜಟಿಲವಾಗಿರುತ್ತದೆ. ಸಿಂಗಟಾಲೂರು ನೀರಾವರಿ ಯೋಜನೆ ಯಶಸ್ವಿ ಭವಿಷ್ಯದ ಯೋಜನೆಗಳಿಗೆ ಮಾರ್ಗದರ್ಶಿಯಾಗಬಲ್ಲದು. ಈ ನಿಟ್ಟಿನಲ್ಲಿ ವೈಜ್ಞಾನಿಕ ತಿಳಿವಳಿಕೆ ಮೂಡಿಸಲು ನೀರಾವರಿ ಇಲಾಖೆ ಎಂಜಿನಿಯರ್‌ಗಳು ಮತ್ತು ರೈತರ ನಡುವೆ ಸಮನ್ವಯತೆ ಏರ್ಪಡಿಸುವ ಪ್ರಯತ್ನಗಳನ್ನು ವಾಲ್ಮಿ ಸಂಸ್ಥೆ ಮಾಡುತ್ತಿದೆ’ ಎಂದು ಹೇಳಿದರು.

ADVERTISEMENT

‘ಎಂಜಿನಿಯರ್‌ಗಳು ಮತ್ತು ರೈತರು ಜೊತೆಗೂಡಿ ಸೂಕ್ಷ್ಮ ನೀರಾವರಿ ವ್ಯವಸ್ಥೆ ನಿರ್ವಹಿಸುವ ಸಲುವಾಗಿ ನೀರು ಬಳಕೆದಾರರ ಸಹಕಾರ ಸಂಘಗಳನ್ನು ರಚಿಸಲಾಗಿದೆ. ಈಗಾಗಲೇ ಅನೇಕ ಸಂಘಗಳನ್ನು ರಚಿಸಲಾಗಿದ್ದು, ಅವುಗಳ ಬಲವರ್ಧನೆ ಮಾಡಲಾಗುವುದು ಮತ್ತು ಇನ್ನುಳಿದ ಸಂಘಗಳನ್ನು ರಚಿಸಲಾಗುವುದು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೈತ ಶರಣಬಸಪ್ಪ ಎಸ್.ಮೇಟಿ ಮಾತನಾಡಿ, ‘ಸಿಂಗಟಾಲೂರು ಏತ ನೀರಾವರಿ ಯೋಜನೆಯು ಒಣ ಮತ್ತು ಬರಗಾಲ ಹಿಡಿತದ ಪ್ರದೇಶಕ್ಕೆ ವರದಾನವಾಗಿದೆ. ಕೃಷಿ ಬಿಕ್ಕಟ್ಟಿನಿಂದ ಸಾಕಷ್ಟು ರೈತರು ಸಾಲದ ಭಾರದಲ್ಲಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಯೋಜನೆ ಯಶಸ್ವಿಯಾದರೆ ರೈತರು ತಮ್ಮ ಸಮಸ್ಯೆಗಳಿಂದ ಹೊರಬರಲು ಸಾಧ್ಯ. ಈ ನಿಟ್ಟಿನಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳು ಬಲವರ್ಧನೆಗೊಂಡು ನೀರಾವರಿ ನಿರ್ವಹಣೆಯನ್ನು ಕೈಗೆತ್ತಿಕೊಳ್ಳಬೇಕು’ ಎಂದು ಹೇಳಿದರು.

ನಿಟಾಫಿಮ್ ಕಂಪನಿಯ ಹಿರಿಯ ಅಧಿಕಾರಿ ಗಿರೀಶ್ ದೇಶಪಾಂಡೆ ಯೋಜನೆಯ ತಾಂತ್ರಿಕ ವಿನ್ಯಾಸದ ಬಗ್ಗೆ ವಿವರಿಸಿದರು. ಬೇಸಾಯ ತಜ್ಞ ಉಮೇಶ ಸೂಕ್ಷ್ಮ ನೀರಾವರಿ ಯೋಜನೆಯಡಿಯಲ್ಲಿ ಲಾಭದಾಯಕ ಬೆಳೆಗಳನ್ನು ಬೆಳೆಯುವ ಬಗ್ಗೆ ವಿವರಿಸಿದರು. ಸುರೇಶ ಕುಲಕರ್ಣಿ ಸಂಘಗಳ ಸಂಘಟನೆ ಮತ್ತು ನಿರ್ವಹಣೆ ಬಗ್ಗೆ ಉಪನ್ಯಾಸ ನೀಡಿದರು.

ಕೆವಿಕೆ ಹುಲಕೋಟಿ ಪ್ರಾಧ್ಯಾಪಕ ಡಾ. ನಾರಾಯಣ ಬಂಡಿ ಇದ್ದರು. ನೀರಾವರಿ ನಿಗಮದ ಅಧಿಕಾರಿಗಳಾದ ರಮೇಶ ಮತ್ತು ವಿನಯ ಕುಮಾರ, ಕಾಡಾ ಅಧಿಕಾರಿ ದಸ್ತಗೀರ್, ವಾಲ್ಮಿ ಅಧಿಕಾರಿಗಳಾದ ಗಿರೀಶ್ ಬಿ., ರಮೇಶ್ ಜಿ.ಬಿ ಇದ್ದರು.

ಸಹಾಯಕ ಪ್ರಾಧ್ಯಾಪಕಿ ಶೈಲಜಾ ಹೊಸಮಠ, ಫಕ್ಕೀರೇಶ ಅಗಡಿ ನಿರೂಪಿಸಿದರು.

ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನೀರಾವರಿ ಕಂಪನಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಲಾಗಿದೆ. ರೈತರು ಸಹಕಾರ ನೀಡಬೇಕು
ಹನುಮಂತರಾಯಪ್ಪ, ಕಾರ್ಯಪಾಲಕ ಎಂಜಿನಿಯರ್‌, ಸಿಂಗಟಾಲೂರು ಏತ ನೀರಾವರಿ ಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.